ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ 75ನೇ ವರ್ಷದ ಅಮೃತ ಮಹೋತ್ಸವದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ 32 ಕೋಟಿ ರು.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಸೇರಿದಂತೆ 1600 ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ಸವಲತ್ತುಗಳನ್ನು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ವಿತರಿಸಿದರು.ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ತುಮಕೂರು, ತಾಲೂಕು ಆಡಳಿತ , ತಾಲೂಕು ಪಂಚಾಯಿತಿ ಮಧುಗಿರಿ ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಸಹ ಭಾಗಿತ್ವದಲ್ಲಿ ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆ.ಎನ್.ರಾಜಣ್ಣ ಅವರ ಸಚಿವರಾಗಲು ಮಧುಗಿರಿ ಕ್ಷೇತ್ರದ ಮತದಾರ ಪ್ರಭುಗಳು ಕಾರಣ, ಇಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗದಿದ್ದರೆ ತುಮಕೂರು ಸೇರಿದಂತೆ ಮಧುಗಿರಿ ಉಪವಿಭಾಗಕ್ಕೆ ಎತ್ತಿನ ಹೊಳೆ ನೀರು ಮರಿಚಿಕೆಯಾಗುತ್ತಿತ್ತು. ಆದರೆ ರಾಜಣ್ಣ ಅವರ ದೂರ ದೃಷ್ಠಿಯಿಂದ ಈ ವರ್ಷದ ಕೊನೆಯಲ್ಲಿ ನಮ್ಮ ತಾಲೂಕಿನ ಕೆರೆಗಳಿಗೆ ನೀರು ಹರಿಯಲಿದೆ. ದೊಡ್ಡೇರಿ ಹೋಬಳಿಯ 10 ಕೆರೆಗಳಿಗೆ ನೀರು ತುಂಬಿಸಿ ಅಭಿವೃದ್ಧಿ ಪಡಿಸಲು 130 ಕೋಟಿ ಉಳಿದ 45 ಕೆರೆಗಳಿಗೆ 300 ಕೋಟಿಗೂ ಅಧಿಕ ಅನುದಾನವನ್ನು ಸರ್ಕಾರ ಘೋಷಿಸಿದೆ. ಕೊರಟಗೆರೆ ಕ್ಷೇತ್ರದ ಕೆರೆಗಳಿಗೆ 350 ಕೋಟಿ ರು.ಸೇರಿದಂತೆ 550 ಕೋಟಿ ಅನುದಾನವನ್ನು ಈ ಭಾಗಕ್ಕೆ ಸಿಎಂ ಸಿದ್ದರಾಮಯ್ಯ ಮೀಸಲಿಟ್ಟಿದ್ದು. ಅತಿ ಶೀಘ್ರವಾಗಿ ಕೆರೆಗಳಿಗೆ ನೀರು ಹರಿಸಲಿದ್ದೇವೆ. ಕೃಷಿಕರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ತಾನೂ ಇಲ್ಲದಿದ್ದರೂ ಕೊಳವೆ ಬಾವಿಗಳಿಗಾಗಿ ಉಳಿದ ನಿಗಮಗಳಿಂದ ಬಂದಂತಹ ಪಂಪು ಮೋಟರಗಳನ್ನು ವಿತರಿಸುವಂತೆ ಸಚಿವರು ಸೂಚಿಸಿರುವ ಹಿನ್ನೆಲೆಯಲ್ಲಿ ಅವರ ಹುಟ್ಟು ಹಬ್ಬದ ದಿನವಾದ ಭಾನುವಾರ ವಿತರಿಸಲಾಗಿದೆ. ಕೃಷಿಗೆ ನೆರವಾಗಲು ಭತ್ತ ,ರಾಗಿ ಕಟಾವು ಮಾಡುವ ಬೃಹತ್ ಯಂತ್ರವನ್ನು ಕ್ಷೇತ್ರಕ್ಕೆ ತಂದಿದ್ದು ಇದು ರೈತ ಸಮುದಾಯಕ್ಕೆ ನೆರವಾಗಲಿದ್ದು, ಅರ್ಜಿ ನೀಡಿದಾಕ್ಷಣ ಕೆಲಸವಾಗಲ್ಲ, ಆದರೆ ತಡವಾದರೂ ನಿಮ್ಮ ಕೆಲಸ ಮಾಡಿ ಕೊಡಲು ಸದಾ ಸಿದ್ದನಿದ್ದು ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದರು.ದೇವರಾಜು ಅರಸು ನಿಗಮದಿಂದ 2 ಕೋಟಿ ರು.ವೆಚ್ಚದಲ್ಲಿ ನೂತನ ಹಾಸ್ಟೆಲ್ ಕಟ್ಟಡ 2.5 ಕೋಟಿ ರು.ವೆಚ್ಚದಲ್ಲಿ ಸೇತುವೆಗೆ ಚಾಲನೆ ನೀಡಿ 2800 ಮನೆಗಳನ್ನು ಹಂಚಿಕೆ ಮಾಡಲಾಗುವುದು. 1800 ನಿವೇಶನ ಉಳ್ಳ ಫಲಾನುಭವಿಗಳಿಗೆ ಮನೆ ಹಂಚಲಾಗುವುದು. ಪಟ್ಟಣದ ಸಮಗ್ರ ಅಭಿವೃದ್ಧಿಗೆ 80 ಕೋಟಿ ರು.ಅನುದಾನ ಬಿಡುಗಡೆಯಾಗಿದೆ. ಈಗ 40 ಕೋಟಿ ಅನುದಾನ ಅಮೃತ್ -2 ಯೋಜನೆಯಡಿ ಬರುತ್ತಿದ್ದು, ಸಚಿವರು ಉದ್ಘಾಟಿಸುವರು. ಪಿಡಬ್ಲ್ಯೂಡಿ ಇಲಾಖೆಯಲ್ಲಿ 25 ಕೋಟಿ ರು.ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ಹೆಚ್ಚುವರಿ 15 ಕೋಟಿ ಅನುದಾನದಿಂದ ಗಡಿ ಭಾಗದ ರಸ್ತೆಗಳ ಅಬಿವೃದ್ಧಿಗೆ ಬಳಸಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾತನಾಡಿ,ನಮ್ಮ ಸಚಿವರು,ಬಡವರ,ಹಿಂದುಳಿದ ವರ್ಗದ ಜನರ ಮತ್ತು ಕ್ಷೇತ್ರದ ಸಮಗ್ರ ಪ್ರಗತಿಗೆ ಶ್ರಮಿಸುತ್ತಿದ್ದಾರೆ ಎಂದರು.ಸಮಾರಂಭದಲ್ಲಿ ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶಿರಿನ್ ತಾಜ್ ಇಒ ಲಕ್ಷ್ಮಣ್, ಮಧುಸೂದನ್, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಪುರಸಭೆ ಸದಸ್ಯರಾದ ಎಂ.ಕೆ.ನಂಜುಂಡರಾಜು, ಗಂಗಣ್ಣ,ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್‌ಬಾಬು, ಎಂ.ಎಸ್.ಮಲ್ಲಿಕಾರ್ಜುನಯ್ಯ, ಡಿವೈಎಸ್‌ಪಿ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ, ಡಿ.ಪಂ.ಮಾಜಿ ಸದಸ್ಯ ಚೌಡಪ್ಪ, ಕೆಪಿಸಿಸಿ ಮೆಂಬರ್ ರಂಗಸ್ವಾಮಿ ,ಕವಣದಾಲ ಹನುಮಂತಪ್ಪ, ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಅಭಿಮಾನಿಗಳು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.