ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಸ್ವದೇಶಿ ತತ್ವಗಳನ್ನು ಅಳವಡಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಆತಂಕದ ದಿನಗಳು ಎದುರಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಎಸ್.ಸ್ವಾಮಿ ಅಭಿಪ್ರಾಯಪಟ್ಟರು.ತಾಲೂಕಿನ ಹೊರಕೆರೆದೇವರಪುರದ ಪದ್ಮಾವತಿ ಸಮುದಾಯ ಭವನದಲ್ಲಿ ಕುವೆಂಪು ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿ ಮಾತನಾಡಿ, ಮಕ್ಕಳಲ್ಲಿ ಖಾದಿ ಅಭಿರುಚಿ ಬೆಳೆಸಬೇಕು. ಏಳು ಲಕ್ಷ ಹಳ್ಳಿಗಳಿರುವ ಭಾರತವನ್ನ ಸಮೃದ್ಧಗೊಳಿಸುವ ನಿಟ್ಟಿನಲ್ಲಿ ನಾವೆಲ್ಲಾ ಕೆಲಸ ಮಾಡಬೇಕು ಎಂದರು.
ಹಳ್ಳಿಗಳಲ್ಲಿ ಬಡತನ ಹೆಚ್ಚಾಗುತ್ತಿದ್ದು, ಗ್ರಾಮೀಣಾ ಮಕ್ಕಳಿಗೆ ಶಿಕ್ಷಣ ಪಡೆಯಲು ಅಸಾಧ್ಯವಾಗುತ್ತಿದೆ. ಅಂತಹ ಮಕ್ಕಳಿಗೆ ಶಾಲಾ ಪುಸ್ತಕಗಳನ್ನು, ಓದಿನ ಸಾಮಗ್ರಿಗಳನ್ನ ವಿತರಣೆ ಮಾಡುತ್ತಿರುವುದರ ಜೊತೆಗೆ, ಅವರಿಗೆ ಖಾದಿ ಸಹ ಪರಿಚಯ ಮಾಡಿಕೊಡಬೇಕು. ಖಾದಿ ಇಲ್ಲದೆ ಗ್ರಾಮೀಣ ಅಭಿವೃದ್ಧಿ ಅಸಾಧ್ಯವೆಂದು ಗಾಂಧೀಜಿಯವರು ನುಡಿದಿದ್ದರು. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಚರಕ, ದಾರ ಮಾಡುವುದು, ಬಟ್ಟೆ ನೇಯುವುದರ ಬಗ್ಗೆ ಅಭಿರುಚಿ ಮೂಡಿಸಬೇಕು. ಮುಂದೊಂದು ದಿನ ಜನರಿಗೆ ಚರಕ ಸಂಪೂರ್ಣವಾಗಿ ಮರೆತು ಹೋಗಬಹುದು, ಹಾಗೆ ಗ್ರಾಮೀಣ ಜನ ಉಪಯೋಗಿಸುತ್ತಿರುವ ನೇಗಿಲು ಸಹ ಪ್ರದರ್ಶನಕ್ಕೆ ಇಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದರು.ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಕೈಕಾಲುಗಳನ್ನು ಬಳಸಿ ದುಡಿಯುವ ಉದ್ಯೋಗಗಳು ಕಡಿಮೆಯಾಗುತ್ತಿವೆ. ಅವುಗಳ ಚೈತನ್ಯಕ್ಕಾಗಿ ಸಂಘ-ಸಂಸ್ಥೆಗಳು ಪ್ರಯತ್ನಿಸಬೇಕು. ಜಾತ್ರೆಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಸಂತೆಗಳಲ್ಲೂ ಸಹ ಖಾದಿ ಮಾರಾಟವಾಗಬೇಕು. ಜನರು ಖಾದಿಯನ್ನ ಇನ್ನೂ ಮನಸ್ಸಿನ ಆಳಕ್ಕೆ ತೆಗೆದುಕೊಳ್ಳದೆ ಹೊರಗಿಟ್ಟಿದ್ದಾರೆ. ಸ್ವದೇಶಿ ತತ್ವಗಳನ್ನ ತಿರಸ್ಕರಿಸಿ ನಾವು ಬಡತನವನ್ನು ಅಪ್ಪಿಕೊಂಡಿದ್ದೇವೆ. ಸ್ವದೇಶಿ ತತ್ವದ ಅಳವಡಿಕೆ ಹೆಚ್ಚಿಸಿ, ಹತ್ತಿರದಲ್ಲೇ ತಯಾರಾದ ವಸ್ತುಗಳನ್ನ ಬಳಕೆ ಮಾಡುವುದನ್ನು ಜನರಿಗೆ ಮನದಟ್ಟು ಮಾಡಿಕೊಟ್ಟರೆ, ಪರಿಸರ ಉಳಿದೀತು ಎಂದರು.
ದೇಶದಲ್ಲಿ ವಿದೇಶಿ ವಸ್ತ್ರ, ವಸ್ತುಗಳನ್ನ ಹೆಚ್ಚು ಬಳಕೆ ಮಾಡುತ್ತಿರುವುದು ಆರ್ಥಿಕ ಬಡತನಕ್ಕೆ ಕಾರಣವಾಗುತ್ತಿದೆ. ಗಾಂಧೀಜಿಯವರ ಕಾಲದಲ್ಲಿ ಯಾವುದೇ ಕಾರ್ಯಕ್ರಮಗಳಾದರೂ ಸಹ ಆ ವೇದಿಕೆ ಖಾದಿಯಿಂದ ಅಲಂಕಾರಿಕವಾಗುತ್ತಿತ್ತು. ಮದುವೆ ಸಮಾರಂಭಗಳಲ್ಲೂ ಸಹ ಖಾದಿ ಬಳಸುತ್ತಿದ್ದ ಜನರು ಸ್ವದೇಶಿ ತತ್ವವನ್ನು ಅಳವಡಿಸಿಕೊಂಡಿದ್ದರು. ಈಗ ಅದೇ ಸಿದ್ಧಾಂತಗಳನ್ನ ಮತ್ತೆ ಜನರಿಗೆ ಪರಿಚಯಿಸಿ ಕೊಡಬೇಕಾಗಿದೆ. ಜನರು ಮಳೆ ನೀರು ಸಂಗ್ರಹ ಮಾಡಿದಂತೆ ಹಣವನ್ನು ಸಹ ಸಂಗ್ರಹಿಸಬೇಕು. ಪ್ರತಿಯೊಂದು ಮನೆಯಲ್ಲೂ ಚರಕ ಸ್ಥಾಪಿಸಿ, ದಾರ ಮಾಡುವುದು, ನೂಲುವುದು, ಹತ್ತಿ ಹಿಂಜುವುದು ಕಲಿತಿರಬೇಕು. ಮನೆಯಲ್ಲಿ ಅಡುಗೆ ಮಾಡಿದಂತೆ ಬಟ್ಟೆಯು ಸಹ ತಯಾರಾಗಬೇಕು. ಈಗ ಬರುವ ಸ್ವಾತಂತ್ರ್ಯ ದಿನಾಚರಣೆಗೆ ಜನರು ಹೆಚ್ಚು ಹೆಚ್ಚು ಖಾದಿ ಖರೀದಿಸಿ, ಬಡ ಜನರ ಆರ್ಥಿಕ ಸ್ಥಿತಿಯನ್ನ ಬದಲಾಯಿಸಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ್ ಶಿಕ್ಷಣದ ಮಹತ್ವ ತಿಳಿಸಿದರು, ಡಾ.ಎಂ.ಜೆ ದೇವರಾಜ್ ರೆಡ್ಡಿ ಅವರು ಅಂತರ್ಜಲ ಮತ್ತು ಮಳೆ ನೀರು ಮಹತ್ವವದ ಬಗ್ಗೆ ಅರಿವು ಮೂಡಿಸಿದರು. ಕುವೆಂಪು ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಡಿ.ವಿ, ನಿವೃತ್ತ ಪ್ರಾಧ್ಯಾಪಕ ರಾಜಪ್ಪ ಹಾಜರಿದ್ದರು.