ಸಾರಾಂಶ
ಮಠಾಧೀಶರು ಸರ್ಕಾರ ಪ್ರತಿನಿಧಿಸುವವರ ಹತ್ತಿರ ಹೋಗುವುದು ಸರಿಯಲ್ಲ, ಮಠಾಧೀಶರು ಒಂದಾದರೇ ಸರ್ಕಾರವೇ ಅವರ ಬಳಿ ಬರಲಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಬೈಲಹೊಂಗಲ : ಮಠಾಧೀಶರು ಸರ್ಕಾರ ಪ್ರತಿನಿಧಿಸುವವರ ಹತ್ತಿರ ಹೋಗುವುದು ಸರಿಯಲ್ಲ, ಮಠಾಧೀಶರು ಒಂದಾದರೇ ಸರ್ಕಾರವೇ ಅವರ ಬಳಿ ಬರಲಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಹೊಸೂರ-ಬೈಲಹೊಂಗಲ ಮೂರುಸಾವಿರ ಮಠದ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ-೨೦೨೫ ಲಿಂ.ಗಂಗಾಧರ ಮಹಾಸ್ವಾಮಿಗಳ ೭೨ನೇ ಜಯಂತಿ ಮಹೋತ್ಸವ ಮತ್ತು ಮಹಾಶಿವರಾತ್ರಿ ಉತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಮಠಮಾನ್ಯಗಳಿಗೆ ಯಡಿಯೂರಪ್ಪ ಸರ್ಕಾರ ಇದ್ದಾಗ ಅನುದಾನ ನೀಡಿ, ಅವುಗಳ ಸಮಾಜಮುಖಿ ಕಾರ್ಯಕ್ಕೆ ಉತ್ತೇಜನ ನೀಡಿತು. ಆದರೆ, ಈಗೀನ ಸರ್ಕಾರ ಅನುದಾನ ನೀಡದೇ ನಿರ್ಲಕ್ಷಿಸುತ್ತಿದೆ ಎಂದು ಕಿಡಿಕಾರಿದರು.
ಹುಬ್ಬಳ್ಳಿ ಜಗದ್ಗುರು ಮೂರುಸಾವಿರ ಮಠದ ನಿರಂಜನ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮೀಜಿ ಮಾತನಾಡಿ, ಒಂದು ಕಾಲದಲ್ಲಿ ಜಪ, ತಪಗಳಿಗೆ ಸಿಮೀತವಾಗಿದ್ದ ಸ್ವಾಮೀಜಿಗಳು ಇಂದು ಸರ್ಕಾರಕ್ಕೆ ಸಮನಾಗಿ ಸಮಾಜೋದ್ದಾರಕ ಕಾರ್ಯಗಳಲ್ಲಿ ತೊಡಗಿ ಸಮಾಜಕ್ಕೆ ಆಧಾರವಾಗಿವೆ. ಶ್ರೀಮಠವು ಶಿಕ್ಷಣ, ಆರೋಗ್ಯ ಸೇವೆ ನೀಡುತ್ತಿದೆ. ಸಾಮಾಜಿಕ, ಧಾರ್ಮಿಕ ಸ್ವಾಸ್ಥ್ಯವನ್ನು ಪುನರುತ್ತಾನ ಮಾಡುತ್ತಿದೆ. ಆಯುರ್ವೇದ ಆಸ್ಪತ್ರೆಯ ಕೊಡುಗೆ ನೀಡಿದೆ. ಮಠಗಳ, ಮಠಾಧೀಶರ ಮೇಲೆ ಗೌರವದ ಭಾವನೆ, ಭಕ್ತಿ ಹೊಂದಿರಬೇಕು. ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ನುಡಿದರು.
ಮಣಕವಾಡ ಅನ್ನದಾನೇಶ್ವರ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮಠ-ಮಾನ್ಯಗಳ ಅಪಾರ ಜನಸೇವೆಯಿಂದ ಮಠಗಳ ಮೇಲೆ ಭಕ್ತರ ನಂಬಿಕೆ ಇದೆ. ಮಠಗಳು ಸಾಮಾಜಿಕ, ಧಾರ್ಮಿಕ ಸೇವೆಯ ಮೂಲಕ ಇಂದಿನ ಆಧುನಿಕ ಯುಗದಲ್ಲೂ ಮಾನಸಿಕ ಸ್ವಾಸ್ಥ್ಯ ಕಾಪಾಡುತ್ತಿವೆ. ಆಧ್ಯಾತ್ಮಿಕ ಚಿಂತನೆಯಲ್ಲಿ ತೋಡಗಿ, ಸತತವಾಗಿ ಮಠಗಳ ಸಂಪರ್ಕದಲ್ಲಿದ್ದು, ಆರೋಗ್ಯಕರ, ಶಾಂತಿಯುತ ಬದುಕು ಕಟ್ಟಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ವೀರಶೈವ ಲಿಂಗಾಯತ ಮಠಗಳು ಶಿಕ್ಷಣದೊಂದಿಗೆ ದಾಸೋಹ ಸೇವೆ ನಡೆಸುತ್ತಿವೆ. ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣಕ್ಕೆ ಶ್ರೀಮಠವು ಆಸರೆಯಾಗಿದೆ. ಉ.ಕ ಭಾಗದಲ್ಲಿ ಉನ್ನತ ಮಠವಾಗಿ ಶ್ರೀಮಠ ಬೆಳೆಯಲಿ ಎಂದರು.ಮಾಜಿ ಸಚಿವ ವೆಂಕಟರಾವ ನಾಡಗೌಡರ ಮಾತನಾಡಿ, ಜಾತಿಗಳು ಧರ್ಮದ ಅಡಿಯಲ್ಲಿ ಇರಬೇಕು. ಸಂಸ್ಕಾರವಿಲ್ಲದ ಶಿಕ್ಷಣ ಬಹಳ ಅಪಾಯಕಾರಿಯಾಗಿದೆ. ಶಿಕ್ಷಣ ಕ್ಷೇತ್ರಗಳಲ್ಲಿ ಸರ್ಕಾರ ಮಾಡದ ಕೆಲಸಗಳನ್ನು ಮಠ, ಮಾನ್ಯಗಳು ಮಾಡುತ್ತಿವೆ. ಗುರು ಸೇವೆ ಮಾಡಬೇಕು. ನಂಬಿಕೆಯಿಂದ ದೇವರನ್ನು ಕಾಣಬೇಕು. ಧರ್ಮದ ಹಾದಿಯಲ್ಲಿ ನಡೆದು ಬದುಕು ಸಾರ್ಥಕಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ ಬಾಬು ಮಾತನಾಡಿ, ಶ್ರೀಮಠ ಸಮಾಜ ಸಮಾಜ ಸೇವೆ ಇತರ ಮಠಗಳಿಗೂ ಪ್ರೇರಣೆ ಎಂದರು.ಮರೇಗುದ್ದ ಅಡವಿಸಿದ್ದೇಶ್ವರ ಮಠದ ನಿರುಪಾಧೀಶ ಸ್ವಾಮೀಜಿ ನೀಲಕಂಠಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಧಾರ್ಮಿಕತೆಯಲ್ಲಿದ್ದು ಸಾಹಿತ್ಯಾಭಿರುಚಿ ಅಳವಡಿಸಿಕೊಂಡು ಹಸನಾದ ಜೀವನ ಸಾಗಿಸಬೇಕು ಎಂದರು.
ಮುರಗೋಡ ನೀಲಕಂಠ ಸ್ವಾಮೀಜಿ ಮಾತನಾಡಿ, ಶ್ರೀಮಠದ ಗಂಗಾಧರ ಪೂಜ್ಯರು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸಮಾಜಕ್ಕೆ ಅರ್ಪಣೆ ಮಾಡಿದ್ದಾರೆ. ನಿಜವಾದ ಭಕ್ತಿಯ ಮೂಲಕ ಮಠದ ಸೇವೆ ಮಾಡಿ ಎಂದರು.ಹರ್ಲಾಪೂರ ಪ್ರವಚನಾಕಾರ ಸದಾಶಿವ ಸ್ವಾಮೀಜಿ ಹಾಗೂ ಸಂಗೀತ ಸೇವಕರನ್ನು ಸನ್ಮಾನಿಸಲಾಯಿತು. ಪ್ರಭುನೀಲಕಂಠ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಹೊಸೂರ ಗಂಗಾಧರ ಸ್ವಾಮೀಜಿ, ಮುನವಳ್ಳಿ ಮುರುಘೇಂದ್ರ ಸ್ವಾಮೀಜಿ, ಭಗಳಾಂಬಾದೇವಿ ಆರಾಧಕ ವೀರಯ್ಯಸ್ವಾಮೀಜಿ, ಕಮತೆನಹಟ್ಟಿ ಗುರುದೇವರು, ಲಿಂಗನಾಯಕನಹಳ್ಳಿ ನಿರಂಜನ ದೇವರು, ಕುಲವಳ್ಳಿ ಮಲ್ಲಿಕಾರ್ಜುನ ದೇವರು, ಬೈಲವಾಡ ಶಂಕರ ದೇವರು, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಕೆಎಲ್ಇ ಉಪಾಧ್ಯಕ್ಷ ಬಸವರಾಜ ತಟವಾಟಿ, ನಿರ್ದೇಶಕ ಎಸ್.ಸಿ.ಮೆಟಗುಡ್ಡ, ಶಂಕರ ಮಾಡಲಗಿ, ಶ್ರೀಶೈಲ ಶರಣಪ್ಪನವರ ಹಾಗೂ ಸಾವಿರಾರು ಭಕ್ತರು ಇದ್ದರು. ಪ್ರಾಚಾರ್ಯ ಎನ್.ಎಸ್.ಚಿಲಮೂರ ನಿರೂಪಿಸಿ, ವಂದಿಸಿದರು.