ಆರೋಪ ಸುಳ್ಳಾದರೆ ದೂಡಾ ಸ್ಥಾನ ತ್ಯಜಿಸಲಿ: ಶಿವಕುಮಾರ

| Published : Nov 20 2025, 02:15 AM IST

ಆರೋಪ ಸುಳ್ಳಾದರೆ ದೂಡಾ ಸ್ಥಾನ ತ್ಯಜಿಸಲಿ: ಶಿವಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಪ ಸಾಬೀತುಪಡಿಸದಿದ್ದರೆ ದೂಡಾ ಅಧ್ಯಕ್ಷ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀರಾ ಎಂದು ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿಗೆ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ರಾಜನಹಳ್ಳಿ ಶಿವಕುಮಾರ ಸವಾಲು ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ನನ್ನ ಹಾಗೂ ಕುಟುಂಬದ ಸದಸ್ಯರ ಹೆಸರಿಗೆ ದೂಡಾ ಅಧ್ಯಕ್ಷನಿದ್ದಾಗ ಕಾನೂನುಬಾಹಿರವಾಗಿ ಒಂದೇ ಒಂದು ನಿವೇಶನ ಪಡೆದ ಬಗ್ಗೆ ಇನ್ನೊಂದು ವಾರದಲ್ಲೇ ದಾಖಲೆ ಬಿಡುಗಡೆ ಮಾಡಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುವೆ. ಆರೋಪ ಸಾಬೀತುಪಡಿಸದಿದ್ದರೆ ದೂಡಾ ಅಧ್ಯಕ್ಷ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀರಾ ಎಂದು ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿಗೆ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ರಾಜನಹಳ್ಳಿ ಶಿವಕುಮಾರ ಸವಾಲು ಹಾಕಿದ್ದಾರೆ.

ನಗರದಲ್ಲಿ ಬುಧವಾರ ಮಾಧ್ಮಗೋಷ್ಠಿಯಲ್ಲಿ ಮಾತನಾಡಿ, ಹಿಟ್ ಅಂಡ್ ರನ್ ಮನಸ್ಥಿತಿಯ ದಿನೇಶ್‌ ಶೆಟ್ಟಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದು, ಸ್ವತಃ ನಾನು ನಮ್ಮೆಲ್ಲಾ ಕಾರ್ಯಕರ್ತರು ದೂಡಾ ಆಯುಕ್ತರನ್ನು ಭೇಟಿ ಮಾಡಿ, ನನ್ನ ಹಾಗೂ ನನ್ನ ಕುಟುಂಬ ಸದಸ್ಯರ ಹೆಸರಿಗೆ ಕಾನೂನುಬಾಹಿರವಾಗಿ ಯಾವುದೇ ನಿವೇಶನ ಪಡೆದಿದ್ದರೆ ಮಾಹಿತಿ, ಕಡತ ನೀಡುವಂತೆ, ಪಡೆದಿಲ್ಲವೆಂದರೆ ಹಿಂಬರಹ ನೀಡುವಂತೆ ಮನವಿ ಮಾಡಿದ್ದೇನೆ ಎಂದರು.

ಇನ್ನೂ ಒಂದು ವಾರದ ಕಾಲ ದೂಡಾ ಅಧ್ಯಕ್ಷ ದಿನೇಶ್‌ ಶೆಟ್ಟಿಗೆ ಕಾಲಾವಕಾಶ ನೀಡುತ್ತೇನೆ, ದೂಡಾ ಕಚೇರಿ ಅಥವಾ ನಿಮ್ಮ ಮನೆ ಅಥವಾ ನೀವು ಹೇಳಿದ ಸ್ಥಳಕ್ಕೆ ಬರುತ್ತೇನೆ. ದಾಖಲೆ ಸಮೇತವೆ ಆರೋಪ ಮಾಡಲಿ. ನಾನು ನಿವೇಶನ ಪಡೆದಿದ್ದೇನೆಂಬ ಬಗ್ಗೆ ದೂಡಾ ಆಯುಕ್ತರಿಂದ ಲಿಖಿತ ಹಿಂಬರಹ ಕೊಡಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುವೆ. ಇಲ್ಲದಿದ್ದರೆ ದೂಡಾ ಅಧ್ಯಕ್ಷ ಸ್ಥಾನಕ್ಕೆ ತಕ್ಷಣ ರಾಜೀನಾಮೆ ಕೊಡಲು ಸಿದ್ಧವೇ ಎಂದು ಏಕವಚನದಲ್ಲೇ ಪ್ರಶ್ನಿಸಿದರು.

ದೂಡಾದಿಂದ ಶಾಬನೂರು ಗ್ರಾಮದ ರಿ.ಸ.ನಂ.127-1 ಬಿ ಮತ್ತು 127-2 ಎಬಿಸಿ ನಲ್ಲಿರುವ ಸ್ವಾಮಿ ವಿವೇಕಾನಂದ ಬಡಾವಣೆಯ ಪಾರ್ಕ್ 1984ರಲ್ಲೇ ಅನುಮೋದನೆಯಾದ ಲೇಔಟ್‌ನಲ್ಲಿರುವ 210-80 ಅಡಿ ಅಳತೆಯ ಪಾರ್ಕನ್ನು ಹಾಲಿ ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ ಖಾಸಗಿ ವ್ಯಕ್ತಿಗಳಿಗೆ ಏಕ ನಿವೇಶನ ಮಾಡಿಕೊಟ್ಟಿದ್ದು ಯಾವ ಕಾರಣಕ್ಕೆಂಬುದುನ್ನು ಬಹಿರಂಗಪಡಿಸಲಿ ಎಂದು ಕಿಡಿಕಾರಿದರು.

ಗಾಂಧಿ ನಗರದ ಮುಖಂಡರಿಗೆ ದೂಡಾ ಅಧ್ಯಕ್ಷ ಮಾಡಬಹುದಿತ್ತು. ಆದರೆ, ದಿನೇಶ್‌ ಶೆಟ್ಟಿಗೆ ಯಾಕೆ ಮಾಡಿದ್ದಾರೆಂಬ ಮಾತನ್ನೂ ಅದೇ ಪಕ್ಷದವರೆ ಮಾತನಾಡಿಕೊಳ್ಳುತ್ತಾರೆ ಎಂದು ಕುಟುಕಿದರು.

ಬಿಜೆಪಿ ಮುಖಂಡರಾದ ರಮೇಶ ನಾಯ್ಕ, ಶಿವನಗೌಡ ಪಾಟೀಲ, ನವೀನಕುಮಾರ, ಹರೀಶ, ರವಿಕುಮಾರ, ಹನುಮಂತ, ಪುಲಯ್ಯ, ಟಿಂಕರ್ ಮಂಜಣ್ಣ, ಹೊರಗೂರ ರವೀಶ, ಬಾಲಚಂದ್ರ ಶ್ರೇಷ್ಠಿ, ಪರಶುರಾಮ, ರಾಜು ನೀಲಗುಂದ, ಕುಂದುವಾಡ ಮಂಜು, ರಾಹುಲ್, ಪ್ರಜ್ವಲ್, ರಾಜು ಇತರರು ಇದ್ದರು.

ಕಾಂಗ್ರೆಸ್ಸಿನ ಗೂಂಡಾ ಜಿಲ್ಲಾಧ್ಯಕ್ಷ: ಶಿವು ಕಿಡಿ

ಹಿಂದೂ ಕಾರ್ಯಕರ್ತರ ಬಗ್ಗೆ ಹಗುರವಾಗಿ ದಿನೇಶ್‌ ಶೆಟ್ಟಿ ಮಾತನಾಡಿದ್ದು, ವಿಧಾನಸೌಧದ ಅಂಗಳದಲ್ಲಿ ಪಾಕಿಸ್ತಾನ ಪರ ಜೈಕಾರ ಹಾಕಿದ, ದಾವಣಗೆರೆಯಲ್ಲಿ ಹಿಂದೂಗಳ ಹತ್ಯೆಗೆ ಕರೆ ನೀಡಿದ್ದ ಕಾಂಗ್ರೆಸ್ಸಿನ ಪಾಲಿಕೆ ಮಾಜಿ ಸದಸ್ಯ, ಹಿಂದೂ ದೇವರುಗಳ ಫ್ಲೆಕ್ಸ್ ಹರಿದು ಹಾಕಿದ್ದ ಮತಾಂಧ ಮುಸ್ಲಿಮರ ಪರ ದಿನೇಶ್‌ ಶೆಟ್ಟಿಯಂತಹವರು ಇದ್ದಾರೆ. ದಾವಣಗೆರೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರಿದ್ದರೂ ಕಾಂಗ್ರೆಸ್ಸಿಗರು ಮೌನ ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷವೇ ಕೋಮುವಾದಿ ಪಕ್ಷವಾಗಿದೆ ಎಂದು ಶಿವಕುಮಾರ ಕಿಡಿಕಾರಿದರು.