ಕನ್ನಡಪ್ರಭ ವಾರ್ತೆ ಮಂಡ್ಯ
ಭೂಮಿಗೆ ಹಸಿರು ಹೊದಿಸುವ ಕಾಯಕ ಹೆಚ್ಚಾದಾಗ ಮಾತ್ರ ತಾಪಮಾನ ಕಡಿಮೆ ಮಾಡಲು ಸಾಧ್ಯ ಎಂದು ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ತಿಳಿಸಿದರು.ತಾಲೂಕಿನ ಮಾರಗೌಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಬಾರ್ಡ್, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ವಿಶ್ವ ಸಹಕಾರ ವರ್ಷ ನಿಮಿತ್ತ ನಡೆದ ತಾಯಿ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾಗತಿಕ ತಾಪಮಾನ ತಡೆಗಟ್ಟಲು ಭೂಮಿಯಲ್ಲಿ ಹಸಿರು ಹೊದಿಕೆ ಹೆಚ್ಚಿಸಿ ಜನಸಂಖ್ಯೆಗೆ ಅನುಗುಣವಾಗಿ ಸಸ್ಯ ಪ್ರಬೇಧಗಳನ್ನು ಬೆಳೆಸಬೇಕು. ವಿಶ್ವ ಸಂಸ್ಥೆಯು ಇದನ್ನೆಲ್ಲ ಮನಗಂಡು ಪರಿಸರ ಸಂಬಂಧಿತ ಕಾರ್‍ಯಚಟುವಟಿಕೆಗಳಿಗೆ ವಿಶೇಷ ಆಸಕ್ತಿ ತಳೆದು ಪ್ರಜಾಸತ್ತಾತ್ಮಕ ನಡವಳಿಕೆಗಳನ್ನು ಅಳವಡಿಸಿಕೊಂಡಿರುವ ರಾಷ್ಟ್ರಗಳಲ್ಲಿ ಮತ್ತು ಸಂಸ್ಥೆಗಳ ಮುಖಾಂತರ ಪರಿಸರ ಸಂರಕ್ಷಣೆ ಮತ್ತು ರಕ್ಷಣಾ ಕಾಯಕಗಳನ್ನು ಮಾಡಲು ನಿರ್ದೇಶನ ನೀಡಿದೆ ಎಂದರು.ಪ್ಲಾಸ್ಟಿಕ್ ಬಳಕೆಯಿಂದಾಗಿ ಮಹಿಳೆಯರಲ್ಲಿ ಸಾಕಷ್ಟು ಹಾನಿಕಾರಕ ಕಾಯಿಲೆಗಳು ಬರುತ್ತಿವೆ. ಇದನ್ನು ತಡೆಗಟ್ಟಲು ದೈನಂದಿನ ಬದುಕಿನಲ್ಲಿ ಪರಿಸರಸ್ನೇಹಿ ಪದಾರ್ಥಗಳನ್ನು ಬಳಕೆ ಮಾಡಬೇಕಿದೆ ಎಂದು ತಿಳಿಸಿದರು.
ನೀರು, ಗಾಳಿ, ವಾತಾವರಣದಲ್ಲಿ ಮಲೀನಗೊಳ್ಳುತ್ತಿದೆ. ಶುದ್ಧ ಗಾಳಿ ಮತ್ತು ಸ್ವಚ್ಛ ಪರಿಸರದ ಧ್ಯೇಯದೊಡನೆ ಸ್ಥಳೀಯ ಸರ್ಕಾರಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಾಲಾ- ಕಾಲೇಜುಗಳು, ಗ್ರಾಮ ಪಂಚಾಯಿತಿಗಳು, ಸರ್ಕಾರಿ ಕಚೇರಿಗಳು, ಸ್ಥಳೀಯ ಸಂಘ ಸಂಸ್ಥೆಗಳು, ಗ್ರಾಮದಲ್ಲಿನ ಜೀವ ವೈವಿಧ್ಯತೆಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜು ಮಾತನಾಡಿ, ಸಹಕಾರ ಸಂಸ್ಥೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟಲು ಹಲವು ಕಾರ್‍ಯಗಳನ್ನು ನಮ್ಮ ಸಂಘ ಹಮ್ಮಿಕೊಂಡಿದೆ. ಸಭೆ ಸಮಾರಂಭಗಳು ಮತ್ತು ಇತರೆ ಕಾರ್‍ಯಕ್ರಮಗಳಲ್ಲಿ ನಾವು ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಮುಂದಾಗಿದ್ದೇವೆ ಎಂದು ತಿಳಿಸಿದರು.
ಎನ್.ಆರ್.ಎಲ್.ಎಂ.ನ ಸಂಯೋಜಕ ವೀರಣ್ಣ ಮಾತನಾಡಿ, ಮಹಿಳೆಯರ ಮೂಲಕ ಪರಿಸರ ಸಂರಕ್ಷಣಾ ಕಾಯಕವನ್ನು ಹಮ್ಮಿಕೊಳ್ಳಬೇಕು. ಮಹಿಳೆಯೇ ಕುಟುಂಬದ ಶಿಕ್ಷಕಿ. ಮಹಿಳೆ ಅನುಸರಿಸಿದರೆ ಕುಟುಂಬದ ಎಲ್ಲಾ ಸದಸ್ಯರು ಅನುಸರಿಸುತ್ತಾರೆ. ಪರಿಸರ ಜಾಗೃತಿ ಕಾರ್‍ಯಕ್ರಮಗಳಲ್ಲಿ ಸಕ್ರಿಯವಾಗಬೇಕು ಎಂದು ಕರೆ ನೀಡಿದರು.ಬ್ಯಾಂಕ್ ಆಫ್ ಬರೋಡಾದ ಸಾರಥಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ಕೆ.ಪಿ.ಅರುಣಕುಮಾರಿ ಮಾತನಾಡಿದರು. ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಶಿವಕುಮಾರ್, ಇತರೆ ನಿರ್ದೇಶಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಘದ ಆವರಣದಲ್ಲಿ ವಿವಿಧ ಜಾತಿಯ ಸಸ್ಯ ಪ್ರಬೇಧಗಳನ್ನು ತಾಯಿ- ಮಗು ಹೆಸರಿನಲ್ಲಿ ನೆಡಸಲಾಯಿತು.