ಸಾರಾಂಶ
ಬೆಳಗಾವಿ : ಮುಂಬರುವ ದಿನಮಾನಗಳಲ್ಲಿ ದಕ್ಷಿಣ ಕರ್ನಾಟಕಕ್ಕೆ ಸಿಗಬೇಕಾದ ಸೇವಾ ಸವಲತ್ತುಗಳು ಉತ್ತರ ಕರ್ನಾಟಕಕ್ಕೂ ಸಿಗದೇ ಹೋದರೇ ಅಭಿವೃದ್ಧಿ ಇಲ್ಲವೇ ಪ್ರತ್ಯೇಕ ರಾಜ್ಯ ಎಂಬ ಘೋಷ ವಾಕ್ಯದೊಂದಿಗೆ ಪ್ರತ್ಯೇಕ ರಾಜ್ಯಕ್ಕೆ ಹೋರಾಡುತ್ತೇವೆ ಎಂದು ಕೆಕೆಕೆಆರ್ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಸಿದ್ದನಗೌಡ ಪಾಟೀಲ ಗುಡುಗಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾ (ಪಾರ್ಟಿ) ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಿ ಮಾತನಾಡಿದ ಅವರು, ಪದಾಧಿಕಾರಿಗಳು ಮುಂಬರುವ ದಿನಮಾನಗಳಲ್ಲಿ ಗ್ರಾಮಮಟ್ಟದಲ್ಲಿ ಪಕ್ಷ ಸಂಘಟನೆ ಕೆಲಸಕ್ಕೆ ಮುಂದಾಗಬೇಕು ಎಂದು ತಿಳಿಸಿದರು.ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾ ಪಕ್ಷದ ಮಹಿಳಾ ರಾಜ್ಯಾಧ್ಯಕ್ಷೆ ಅನ್ನಪೂರ್ಣಾ ಅನಿಲ್ ನಿರ್ವಾನಿ ಮಾತನಾಡಿ, ಮುಂಬರುವ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆ ಚುನಾವಣೆಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಕಣಕ್ಕಿಳಿಸುವುದು ಶತ ಸಿದ್ಧ.
ಮಹಿಳೆಯರಿಗೆ ಮಹಿಳಾ ಮೀಸಲಾತಿ ಜತೆಗೆ ಆದ್ಯತೆವಿರುವಾಗ ಎಲ್ಲ ಹೆಣ್ಣು ಮಕ್ಕಳು ತಮ್ಮ ಅಧಿಕಾರ, ಹಕ್ಕನ್ನು ತಮ್ಮಿಂದಲೇ ನಡೆಸುವಂತಾಗಬೇಕು ಎಂದು ಕರೆ ನೀಡಿದರು.ಅಧಿವೇಶನ ಕೇವಲ ಕಾಟಾಚಾರಕ್ಕೆ ನಡೆಯುತ್ತಿರುವುದು ತುಂಬಾ ನೋವನ್ನುಂಟು ಮಾಡುತ್ತಿದೆ. ಬಜೆಟ್‌ನಲ್ಲಿ ಏನಾಗಿದೆ? ಯಾವುದು ಬೆಲೆ ಏರಿಕೆಯಾಗಿದೆ? ಏನೂ ಅರಿಯದಂತ ಪರಿಸ್ಥಿತಿಯನ್ನು ಸೃಷ್ಟಿ ಮಾಡುವ ಆಡಳಿತ ಸರ್ಕಾರಗಳು ಯಾವುದೇ ಅಭಿವೃದ್ಧಿಯ ಚಿಂತನೆ ಮಾಡಲಾರದೇ ಕಾಲ ಹರಣ ಮಾಡುತ್ತಿವೆ ಎಂದು ಕಿಡಿಕಾರಿದರು.ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಲು ಹಲವಾರು ಸಂಘಟನೆಗಳು ಹೋರಾಟ ಮಾಡುತ್ತಿದ್ದರೇ ಅಂತ ಸಂಘಟನೆಗಳ ಹೆಸರಲ್ಲಿ ಬಣ್ಣ, ಬಣ್ಣದ ಶಾಮಿಯಾನಗಳನ್ನು ಹಾಕಿ ಜನರ ದಾರಿ ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಪ್ರಸಾದ್ ಜಿಲ್ಲಾಧ್ಯಕ್ಷ, ಭಾಗ್ಯಶ್ರೀ ಜಿಲ್ಲಾಧ್ಯಕ್ಷೆ
ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿ ಇಲ್ಲವೇ ಪ್ರತ್ಯೇಕ ರಾಜ್ಯ ಎಂಬ ವಿಷಯದೊಂದಿಗೆ ಕೆಕೆಕೆಆರ್ ಪಾರ್ಟಿಯ ಉದ್ದೇಶಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಸಂಘಟನಾ ಕಾರ್ಯದರ್ಶಿಗಳ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಕೆಕೆಕೆಆರ್ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಸಿದ್ದನಗೌಡ ಪಾಟೀಲ ಹಾಗೂ ರಾಜ್ಯ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಅನ್ನಪೂರ್ಣಾ ಅನಿಲ್ ನಿರ್ವಾನಿ ಜಂಟಿಯಾಗಿ ಪದಾಧಿಕಾರಿಗಳ ಆದೇಶಪತ್ರ ನೀಡಿ ಮುಂಬರುವ ದಿನಮಾನಗಳಲ್ಲಿ ಗ್ರಾಮಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಸೂಚಿಸಿದರು.ಈ ಸಂದರ್ಭದಲ್ಲಿ ಕೆಕೆಕೆಆರ್ ಪಾರ್ಟಿಯ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಪ್ರಸಾದ್ ಕುಲಕರ್ಣಿ, ಕೆಕೆಕೆಆರ್‌ಎಸ್ ಬೆಳಗಾವಿ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ಭಾಗ್ಯಶ್ರೀ ಹಣಬರ, ರಾಜ್ಯ ಉಪಾಧ್ಯಕ್ಷರಾಗಿ ಉಮೇಶ್ ದೇಶನೂರ, ಬೆಳಗಾವಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ ಆನಂದ ದಬ್ಬನವರ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಕಾಂತ ಮಠಪತಿ ಅವರಿಗೆ ಆದೇಶ ಪತ್ರ ನೀಡಿದರು.