ಸಾರಾಂಶ
ಹಿರಿಯೂರು: ಪಕ್ಷಿಗಳ ಸಂಕುಲವನ್ನು ಸಂರಕ್ಷಿಸದೆ ಇದ್ದರೆ ಭವಿಷ್ಯದಲ್ಲಿ ಮಾನವ ಸಂಕುಲವೂ ಸರ್ವನಾಶವಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಡಾನ್ ಬೋಸ್ಕೋ ಸಂಸ್ಥೆಯ ಮುಖ್ಯಸ್ಥ ಫಾ.ಉದಯಕುಮಾರ್ ಅಭಿಪ್ರಾಯಪಟ್ಟರು.
ಹಿರಿಯೂರು: ಪಕ್ಷಿಗಳ ಸಂಕುಲವನ್ನು ಸಂರಕ್ಷಿಸದೆ ಇದ್ದರೆ ಭವಿಷ್ಯದಲ್ಲಿ ಮಾನವ ಸಂಕುಲವೂ ಸರ್ವನಾಶವಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಡಾನ್ ಬೋಸ್ಕೋ ಸಂಸ್ಥೆಯ ಮುಖ್ಯಸ್ಥ ಫಾ.ಉದಯಕುಮಾರ್ ಅಭಿಪ್ರಾಯಪಟ್ಟರು.
ನಗರದ ಡಾನ್ ಬೋಸ್ಕೋ ಸಭಾಂಗಣದಲ್ಲಿ ಬುಧವಾರ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಹಾಗೂ ಡಾನ್ ಬೋಸ್ಕೋ ಶಾಲೆಯ ಸಹಯೋಗದಲ್ಲಿ ಪಕ್ಷಿ ಪಿತಾಮಹ ಡಾ.ಸಲೀಂ ಅಲಿ ರವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಪರಿಸರದಲ್ಲಿ ಪಕ್ಷಿಗಳ ಪಾತ್ರ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿದ್ಯಾರ್ಥಿಗಳು ಪಕ್ಷಿಗಳ ಬಗ್ಗೆ, ಪರಿಸರದ ಬಗ್ಗೆ ಕಾಳಜಿವಹಿಸಬೇಕು. ಪಕ್ಷಿಗಳ ಸಂಕುಲ ಮತ್ತು ನಿಸರ್ಗವನ್ನು ಅರ್ಥೈಸುವಲ್ಲಿ ಸಲೀಂ ಅಲಿ ದೇಶಾದ್ಯಂತ ಪಕ್ಷಿಗಳ ಸಮೀಕ್ಷೆ ಮಾಡಿದ ಮೊದಲ ಭಾರತೀಯರಾಗಿದ್ದಾರೆ ಎಂದು ತಿಳಿಸಿದರು.
ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಪಕ್ಷಿಗಳ ಉಳಿವಿನ ಬಗ್ಗೆ, ಪಕ್ಷಿಗಳ ವಾಸಸ್ಥಾನಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.ವನ್ಯಜೀವಿ ಛಾಯಾಗ್ರಾಹಕ ಹಾಗೂ ಪಕ್ಷಿ ಪ್ರೇಮಿ ಎಂ.ಕಾರ್ತಿಕ್ ಮಾತನಾಡಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ, ಸಂಚಾಲಕ ಎಚ್.ಮಂಜುನಾಥ್, ಡಾನ್ ಬೋಸ್ಕೊ ಸಂಸ್ಥೆಯ ಡೈರೆಕ್ಟರ್ ಫಾ.ಸಜಿ, ಖಜಾಂಚಿ ಕೆ.ವಿ.ನಾಗಲಿಂಗರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.