ಲೋಕಸಭೆಗೆ ಮತ್ತೆ ಬಿಜೆಪಿ ಗೆಲ್ಲಿಸಿದರೆ ಸಂವಿಧಾನಕ್ಕೆ ಸಂಚಕಾರ

| Published : Apr 13 2024, 01:15 AM IST / Updated: Apr 13 2024, 11:25 AM IST

ಸಾರಾಂಶ

ನ್ಯಾಯಾಂಗ ವ್ಯವಸ್ಥೆಯ ಮೇಲೂ ಕೇಂದ್ರ ಸರ್ಕಾರ ಪ್ರಹಾರ ನಡೆಸಿದೆ. ಒಂದು ವೇಳೆ ಮತ್ತೆ ಬಿಜೆಪಿ ಗೆಲ್ಲಿಸಿದರೆ ಸಂವಿಧಾನಕ್ಕೆ ಸಂಚಕಾರ ಬಂದೊದಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆತಂಕ ವ್ಯಕ್ತಪಡಿಸಿದರು.

ಹಾನಗಲ್ಲ: ನ್ಯಾಯಾಂಗ ವ್ಯವಸ್ಥೆಯ ಮೇಲೂ ಕೇಂದ್ರ ಸರ್ಕಾರ ಪ್ರಹಾರ ನಡೆಸಿದೆ. ಒಂದು ವೇಳೆ ಮತ್ತೆ ಬಿಜೆಪಿ ಗೆಲ್ಲಿಸಿದರೆ ಸಂವಿಧಾನಕ್ಕೆ ಸಂಚಕಾರ ಬಂದೊದಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆತಂಕ ವ್ಯಕ್ತಪಡಿಸಿದರು.ತಾಲೂಕಿನ ಆಡೂರು ಗ್ರಾಮದಲ್ಲಿ ನಡೆದ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಸಂವಿಧಾನ ಬದಲಿಸಿ ಜನಸಾಮಾನ್ಯರ ಹಕ್ಕು ಕಸಿಯುವುದು ಬಿಜೆಪಿ ಲೆಕ್ಕಾಚಾರ. ಹಾಗಾಗಿಯೇ 400 ಸ್ಥಾನಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಲಾಗುತ್ತಿದೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಆಕ್ರಮಣ ನಡೆದಿದೆ. ಅನ್ಯಾಯ ಪ್ರಶ್ನಿಸಿದರೆ ಬೆದರಿಸಲಾಗುತ್ತಿದೆ. ನ್ಯಾಯಕ್ಕಾಗಿ ಹೋರಾಟ ನಡೆಸುವವರ ಮೇಲೆ ಪಿತೂರಿ ಹೂಡಿ ಅಂಥವರನ್ನು ಜೈಲಿಗಟ್ಟಲಾಗುತ್ತಿದೆ. 

ಬಿಜೆಪಿ ಆಡಳಿತಕ್ಕೆ ಕೊನೆ ಹಾಡದಿದ್ದರೆ ಅಪಾಯ ಆಹ್ವಾನಿಸಿದಂತೆ ಎಂದು ಎಚ್ಚರಿಸಿದರು. ವಿಶ್ವಗುರು ಬಸವಣ್ಣನ ಪರಿಕಲ್ಪನೆಯಂತೆ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದು ಎಲ್ಲ ವರ್ಗದ ಜನರನ್ನೂ ಜೊತೆಗೆ ಕರೆದೊಯ್ಯುತ್ತಿದೆ. ಸಂವಿಧಾನ ಉಳಿದರೆ ಮಾತ್ರ ಎಲ್ಲ ವರ್ಗಗಳಿಗೂ ನ್ಯಾಯ, ಅವಕಾಶ ಸಿಗಲಿದೆ. ಆದರೆ ಸಂವಿಧಾನ ಬದ್ಧವಾಗಿ ನೀಡಿರುವ ಹಕ್ಕುಗಳನ್ನೆಲ್ಲ ಕಸಿದು ಮತ್ತೆ ಗುಲಾಮಗಿರಿಗೆ ದೂಡುವ ಷಡ್ಯಂತ್ರ ಬಿಜೆಪಿ ಹೂಡಿದೆ. 

ಲೋಕಸಭೆ ಚುನಾವಣೆ ಜನಸಾಮಾನ್ಯರ ಅಸ್ತಿತ್ವ, ಉಳಿವಿನ ಪ್ರಶ್ನೆಯಾಗಿದ್ದು, ಸಂವಿಧಾನ ವಿರೋಧಿ ಬಿಜೆಪಿ ಸೋಲಬೇಕಿದೆ ಎಂದರು.ಜಿಪಂ ಮಾಜಿ ಸದಸ್ಯ ನಿಂಗಪ್ಪ ಪೂಜಾರ ಮಾತನಾಡಿ, ಬರ ಪರಿಹಾರ, ವಿವಿಧ ಯೋಜನೆಗಳ ಅನುದಾನ ಬಿಡುಗಡೆ ವಿಚಾರದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ನಮ್ಮ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ಕರ್ನಾಟಕವನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ನ್ಯಾಯಸಮ್ಮತ ಅನುದಾನಕ್ಕೂ ಅಂಗಲಾಚುವ ಸ್ಥಿತಿ ಇದೆ. ಕರುನಾಡು ವಿರೋಧಿ ಬಿಜೆಪಿ ಸೋಲಿಸಿ, ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.

ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜು ಗೊರಣ್ಣನವರ, ವಿಜಯಕುಮಾರ ದೊಡ್ಡಮನಿ, ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ತಾಪಂ ಮಾಜಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಗ್ರಾಪಂ ಅಧ್ಯಕ್ಷ ಮಾರ್ತಾಂಡಪ್ಪ ಬಾರ್ಕಿ, ಮುಖಂಡರಾದ ಭರಮಣ್ಣ ಶಿವೂರ, ಅನಿತಾ ಶಿವೂರ, ಗೀತಾ ಪೂಜಾರ, ನಾಗಪ್ಪ ಪೋಲೇಶಿ, ಬಾಬು ನಿಕ್ಕಂ, ಪುಟ್ಟಪ್ಪ ನರೇಗಲ್, ಶರಣ ಬಳಿಗಾರ, ಬಾಬುಲಾಲ್ ನಾಯ್ಕರ್, ಬಸವರಾಜ ಬಡಿಗೇರ, ಚಂದ್ರಣ್ಣ ಗಂಗೇರ, ವೀರಭದ್ರಗೌಡ ಪಾಟೀಲ, ಜಾಫರಸಾಬ ಬಡಿಗೇರ, ಕರಬಸಪ್ಪ ದೇವಗಿರಿ, ಮೈಲಾರಿ ಬಾರ್ಕಿ, ಸಲೀಂ ಪೀರಜಾದೆ ಭಾಗವಹಿಸಿದ್ದರು.