ಸಾರಾಂಶ
ಹಾವೇರಿ: ರಾಜ್ಯ ಸರ್ಕಾರಕ್ಕೆ ಜಾತಿಗಣತಿ ವರದಿ ಸಲ್ಲಿಕೆ ಮಾಡಿರುವುದು ಸ್ವಾಗತಾರ್ಹ. ಮುಖ್ಯಮಂತ್ರಿ ಸಿದ್ದರಾಮಯ್ಯ ಏ. 17ರಂದು ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಷ್ಠಾನಕ್ಕೆ ತಂದರೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಯಾಗಲಿದೆ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದರು.ಭಾನುವಾರ ಮಾಧ್ಯಮಗಳ ಜತೆ ಮಾತನಾಡಿ, ಹಿಂದುಳಿದ ಸಮುದಾಯಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಪುನರ್‌ಪರಿಶೀಲನೆ ಮಾಡಬೇಕು. ಹೊಸ ಜಾತಿಗಣತಿ ಆಧಾರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಈಡಿಗ ಸಮುದಾಯ 15 ಲಕ್ಷ ಜನಸಂಖ್ಯೆ ಇದೆ ಎಂದು ಮಾಹಿತಿ ಸೋರಿಕೆಯಿಂದ ತಿಳಿದುಬಂದಿದ್ದು, ಇದು ಸತ್ಯಕ್ಕೆ ದೂರವಾಗಿರುವ ವರದಿಯಾಗಿದೆ.ಈಡಿಗ, ಬಿಲ್ಲವ ಸೇರಿ ರಾಜ್ಯದಲ್ಲಿ ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಈ ನಾಲ್ಕು ಜಿಲ್ಲೆಗಳಲ್ಲಿ 26 ಲಕ್ಷ ಜನಸಂಖ್ಯೆ ಇದೆ. ಇಡೀ ರಾಜ್ಯದಲ್ಲಿ ನೋಡಿದಾಗ ಸುಮಾರು 40 ಲಕ್ಷ ಜನಸಂಖ್ಯೆ ಇದೆ. ಎಲ್ಲೋ ಸುಳ್ಳು ವರದಿ ನೀಡಿದ್ದಾರೆಂಬ ಆತಂಕ ಶುರುವಾಗುತ್ತಿದೆ. ವರದಿ ಪಾರದರ್ಶಕವಾಗಿರಬೇಕು. ಕಾಂಗ್ರೆಸ್‌ನ ಸರ್ವೋಚ್ಚ ನಾಯಕರ ಆಶಯದಂತೆ ಜಾತಿಗಣತಿ ಜಾರಿಗೆ ತರಬೇಕಾಗುತ್ತದೆ ಎಂದರು. ಕೆಲವು ಸ್ವಾಮೀಜಿ, ಮಠಾಧಿಪತಿಗಳು ಜಾತಿಗಣತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ- ವಿರೋಧ ಅಭಿಪ್ರಾಯ ವ್ಯಕ್ತಪಡಿಸುವುದು ಇರುವಂತಹದ್ದೆ. ಹಾಗಾಗಿ ಸರ್ಕಾರ ಅವರ ಮಾತಿಗೆ ಮಣಿಯಬಾರದು. ಈ ನಡುವೆ ಕೆಲವು ಕಾಂಗ್ರೆಸ್‌ನ ಹಿರಿಯ ನಾಯಕರು ಚುನಾವಣಾ ಪೂರ್ವದಲ್ಲಿ ಜಾತಿಗಣತಿ ಮಾಡಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿ, ಈಗ ವರದಿ ಬರುತ್ತಿದ್ದಂತೆ ವಿರೋಧಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಏ. 17ರಂದು ಜಾತಿಗಣತಿ ವರದಿಯನ್ನು ಚರ್ಚಿಸಿ ಜಾರಿಗೆ ತಂದರೆ ಸಮಾಜದ ಸ್ವಾಮೀಜಿ, ಮಠಾಧೀಶರು ಸಿಎಂ ಭೇಟಿ ಮಾಡಿ ಅಭಿನಂದಿಸುತ್ತೇವೆ ಎಂದರು.ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಿ
ಹಾವೇರಿ: ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ವ್ಯವಸಾಯ ಕೂಲಿ ವೃತ್ತಿಪರ ಯುನಿಯನ್ ಜಿಲ್ಲಾ ಘಟಕವು ಏ. 16ರಿಂದ 18ರ ವರೆಗೆ ವಿವಿಧ ತಾಲೂಕುಗಳಲ್ಲಿ ತಹಸೀಲ್ದಾರಗಳಿಗೆ, ಏ. 21ರಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ ಎಂದು ಯುನಿಯನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮಾಕ್ಷಿ ರೇವಣಕರ ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ರಟ್ಟೀಹಳ್ಳಿ, ರಾಣಿಬೆನ್ನೂರು, ಹಿರೇಕೆರೂರು, ಬ್ಯಾಡಗಿ ಸೇರಿದಂತೆ ಜಿಲ್ಲಾದ್ಯಂತ 13 ಸಾವಿರಕ್ಕೂ ಅಧಿಕ ಅಸಂಘಟಿತ ಕಾರ್ಮಿಕರು ಇದ್ದು, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಏ. 14ರಂದು ಅಂತಾರಾಷ್ಟ್ರೀಯ ಭೂರಹಿತ ಕಾರ್ಮಿಕರ ಹೋರಾಟ ದಿನವಾಗಿದ್ದು, ಸರ್ಕಾರ ಭೂರಹಿತ ಕಾರ್ಮಿಕರಿಗೆ ಭೂಮಿ ವಿತರಿಸುವಂತೆ ಆಗ್ರಹಿಸಲಾಗುವುದು. ಕಳೆದ 20 ವರ್ಷಗಳಿಂದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಅಸಂಘಟಿತ ಕಾರ್ಮಿಕರು ಗುಡಿಸಲಿನಲ್ಲೇ ವಾಸವಿದ್ದು, ಅಂತಹವರಿಗೆ ಪಟ್ಟಾ ಹಂಚಿಕೆ ಮಾಡಿ ಮನೆ ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗರಾಜ ಮಳೂರ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಅಸಂಘಟಿತ ಕಾರ್ಮಿಕ ಮಹಿಳೆಯರು ಒತ್ತಡದ ಜೀವನ ನಡೆಸುತ್ತಿದ್ದು, ₹60 ಸಾವಿರ ಹೆರಿಗೆ ಭತ್ಯೆಯೊಂದಿಗೆ ಕನಿಷ್ಠ ಆರು ತಿಂಗಳು ಹೆರಿಗೆ ರಜೆ ನೀಡಬೇಕು. ಕಾರ್ಮಿಕರ ಅರ್ಹತೆಗನುಗುಣವಾಗಿ ಕನಿಷ್ಠ ₹5 ಸಾವಿರ ಪಿಂಚಣಿ ಸೌಲಭ್ಯ ನೀಡಬೇಕು. ಎಲ್ಲ ಕಾರ್ಮಿಕರಿಗೂ ಇಎಸ್‌ಐ ಸೌಲಭ್ಯ ವಿಸ್ತರಿಸಬೇಕು. ಕಾರ್ಮಿಕರು ಆಕಸ್ಮಿಕವಾಗಿ ಮೃತಪಟ್ಟರೆ, ಅಂಗವಿಕಲರಾದರೆ ಕನಿಷ್ಠ ₹5 ಲಕ್ಷಗಳ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.ಸಂಘಟನೆ ಜಿಲ್ಲಾಧ್ಯಕ್ಷ ಕಾಂತೇಶ ಮುಗಳಿಹಳ್ಳಿ ಮಾತನಾಡಿದರು. ಹಿರೇಕೆರೂರು ತಾಲೂಕಾಧ್ಯಕ್ಷೆ ಅನಿತಾ ಮಾಳಗಿ, ಶೋಭಾ ಜಾಡರ, ನಾಗರಾಜ ಶಿರಗಂಬಿ ಇದ್ದರು.