ಸಾರಾಂಶ
ಬಾಗೇಪಲ್ಲಿ : ವಿದೇಶದಲ್ಲಿ ನಾನು ಆಸ್ತಿ ಮಾಡಿದ್ದೇನೆ ಎಂಬುದು ಇಡಿ ಸಂಸ್ಥೆ ದಾಳಿಯ ಮುಖ್ಯ ಕಾರಣವಾಗಿತ್ತು. ತಾವು ವಿದೇಶದಲ್ಲಿ ಯಾವುದೇ ಅಸ್ತಿ ಮಾಡಿಲ್ಲ. ಒಂದು ವೇಳೆ ನಾನು ವಿದೇಶದಲ್ಲಿ ಆಸ್ತಿ ಮತ್ತು ಒಂದು ರೂಪಾಯಿ ಹೂಡಿಕೆ ಮಾಡಿರುವ ಬಗ್ಗೆ ಸಾಬೀತಾದರೆ ನನ್ನ ಸಂಪೂರ್ಣ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸವಾಲು ಹಾಕಿದರು.
ಪಟ್ಟಣದ ಗೂಳೂರು ರಸ್ತೆಯಲ್ಲಿರುವ ಶಾಸಕರ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಡಿ ಅಧಿಕಾರಿಗಳು ಅವರ ಕೆಲಸ ಅವರು ಮಾಡಿದ್ದಾರೆ, ನಾನು ಸಹ ಇಡಿ ಅಧಿಕಾರಿಗಳಿಗೆ ಸಂಪೂರ್ಣವಾಗಿ ಸ್ಪಂಧಿಸಿದ್ದಾಗಿ ತಿಳಿಸಿದರು.
ಸೋತ ಅಭ್ಯರ್ಥಿಯಿಂದ ಕೇಸು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ತಮ್ಮ ಪ್ರತಿಸ್ಪರ್ಧಿ ಚುನಾವಣೆ ಸಂದರ್ಭದಲ್ಲಿ ಆರೋಪಿಸಿದ್ದು, ತಾವು ಆಸ್ತಿ ವಿವರ ನೀಡಿಲ್ಲ, ನೀಡಿರುವ ಆಸ್ತಿಗಿಂತ ಇನ್ನೂ ಹೆಚ್ಚಾಗಿದೆ, ವಿದೇಶಗಳಲ್ಲಿಯೂ ಸಹ ಇವರ ಆಸ್ತಿ ಇದೆ ಎಂಬುದಾಗಿ ಕೇಸು ದಾಖಲು ಮಾಡಿದ್ದಾರೆ.
ಆದರೆ ಇಡಿ ಅಧಿಕಾರಿಗಳು ಶೋಧ ಮಾಡಿದ ಸಂದರ್ಭದಲ್ಲಿ ಯಾವುದೇ ವಿದೇಶಿ ವ್ಯವಹಾರವಾಗಲಿ ನಮ್ಮ ಸಂಸ್ಥೆಯಲ್ಲಿ ನಿಯಮಬಾಹಿರ ಆಗಿರುವುದು ಕಂಡುಬರಲಿಲ್ಲ. ಇದೇ 14ರಂದು ಇಡಿ ಕಚೇರಿಗೆ ಬರುವಂತೆ ಸೂಚಿಸಿದ್ದಾರೆ. ತಾವು 14ರಂದು ಇಡಿ ಕಚೇರಿಗೆ ಬೇಟಿ ನೀಡಿ ಅವರ ಪ್ರಶ್ನೆಗಳಿಗೆ ಉತ್ತರ ನೀಡುವುದಾಗಿ ತಿಳಿಸಿದರು.
ದಾಳಿ ವೇಳೆ ಗಾಬರಿಯಾಗಿದ್ದೆ
ಭರಿಕಮಲ ಅಪರೇಷನ್ ಸಂದರ್ಭದಲ್ಲಿ ತಾವು ಬಿಜೆಪಿಗೆ ಹೋಗಲಿಲ್ಲ. ಇದರಿಂದ ಇಡಿ ದಾಳಿ ಮಾಡಿಸಲಾಗಿದೆ ಎನ್ನುವಂತ ಮಾತುಗಳು ಕೇಳಿಬರುತ್ತಿವೆ. ಸದ್ಯಕ್ಕೆ ನನ್ನ ಬಳಿ ಇಂತಹ ಯಾವುದೇ ಮಾಹಿತಿ ಇಲ್ಲ, ಇಡಿ ಅಧಿಕಾರಿಗಳು ನಮ್ಮ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸ್ವಲ್ಪ ಗಾಬರಿಯಾಗಿದ್ದೆ. ಆದರೆ ಮುಂದಿನ ವಿಚಾರಣೆ ವೇಳೆ ಆಗಬಹುದೇನೋ ನೋಡಬೇಕು ಎಂದರು.
ಸುಬ್ಬಾರೆಡ್ಡಿಗೆ ಸಚಿವನಾಗವ ಕನಸಿಗೆ ತಣ್ಣೀರು ಸುರಿದಂತಾಗಿದೆ ಎಂಬುದಾಗಿ ದಿನಪತ್ರಿಕೆಯಲ್ಲಿ ನೋಡಿದೆ. ಸಚಿವ ಸ್ಥಾನಕ್ಕೂ ಇಡಿ ದಾಳಿಗೂ ಯಾವುದೇ ಸಂಬಂಧವಿಲ್ಲ. ನಾನು ತಪ್ಪು ಮಾಡಿ ಶಿಕ್ಷೆಯಾದರೆ ಮಾತ್ರ ಸಚಿವ ಸ್ಥಾನಕ್ಕೆ ಮಾರಕವಾಗಬಹುದು. ನನ್ನ ಜೀವ ಇರುವವರೆಗೂ ಕ್ಷೇತ್ರದ ಜನತೆಗಾಗಿ ದುಡಿಯುವುದಾಗಿ ಹೇಳಿದರು.