ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನರ ಕಷ್ಟ ಕೇಳಿ ಬಗೆಹರಿಸುವ ತಾಳ್ಮೆ ಇದ್ದರೆ ಮಾತ್ರ ಜನತಾದರ್ಶನ ಕಾರ್ಯಕ್ರಮ ಮಾಡಲಿ ಎಂದು ಜನತಾ ದರ್ಶನ ದೂರುದಾರರುಗಳ ಒಕ್ಕೂಟದ ಮುಖಂಡ ಲಿಂಗರಾಜು ಶಂಕನಪುರ ತಿಳಿಸಿದರು.ಜನಸಾಮಾನ್ಯರು ಸಮಸ್ಯೆ ಹೊತ್ತುಕೊಂಡು ಹೋದರೆ, ಅವರ ಸಮಸ್ಯೆಗೆ ಸ್ಪಂದಿಸುವ ಬದಲು ಕಿಡಿಕಾರುತ್ತಾರೆ. ಇಂತಹ ನಾಟಕದ ಜನತಾ ದರ್ಶನದ ಅಗತ್ಯ ಇಲ್ಲ ಎಂದು ಜಿಲ್ಲಾ ಕಾರ್ಯನಿರತ ಪರ್ತಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಜನತಾದರ್ಶನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ದೂರು ಅರ್ಜಿಗಳ ವಿಲೇವಾರಿಯು ಕ್ರಮಬದ್ಧವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.ಜನತಾದರ್ಶನ ಬೆಳಗ್ಗೆ 9ರಿಂದ ಸಂಜೆ 5ರ ತನಕ ನಡೆಯಬೇಕು. ಆದರೆ, ಜಿಲ್ಲೆಯಲ್ಲಿ ಕಾಟಾಚಾರಕ್ಕೆ ಕೆಲ ಗಂಟೆಗಳ ಕಾಲ ನಡೆಸಲಾಗುತ್ತಿದೆ. ಅರ್ಜಿಗಳ ವಿಲೇವಾರಿಗೆ ಕಾಲಮಿತಿ ನಿಗದಿಯಾಗಿಲ್ಲ. ದೂರುದಾರರ ಸಮ್ಮುಖದಲ್ಲಿ ಇತ್ಯರ್ಥ ಮಾಡುತ್ತಿಲ್ಲ. ಕಚೇರಿಯ ಟಿಪ್ಪಣಿ, ಸ್ಥಳ ಪರಿಶೀಲನೆಯ ಭಾವಚಿತ್ರ ಹಾಗೂ ದೃಶ್ಯಗಳ ದೃಢೀಕರಣ ಮಾಹಿತಿಗಳಿಲ್ಲ ಎಂದು ದೂರಿದರು.ದೂರುಗಳ ತನಿಖೆಯ ಸಮಯದಲ್ಲಿ ದೂರುದಾರರ ಮಾಹಿತಿಯನ್ನು ಪರಿಗಣಿಸಬೇಕು. ತನಿಖೆ ಮಾಡುವ ಸರ್ಕಾರಿ ಅಧಿಕಾರಿಗಳು ಸ್ಥಳ ತನಿಖೆ ನಡೆಸಿದ ಭಾವಚಿತ್ರ ಅಥವಾ ದೃಶ್ಯಗಳನ್ನು ದೂರುದಾರರಿಗೆ ನೀಡಬೇಕು ಎಂದು ಆಗ್ರಹಿಸಿದರು. ಸಲ್ಲಿಕೆಯಾಗಿರುವ ದೂರುಗಳ ಪಟ್ಟಿಯನ್ನು ಹಾಗೂ ತನಿಖಾಧಿಕಾರಿಗಳ ಹೆಸರನ್ನು ಜಿಲ್ಲಾಧಿಕಾರಿಗಳ ಆನ್‌ಲೈನ್ ಪುಟದಲ್ಲಿ ಪ್ರದರ್ಶಿಸಬೇಕು. ದೂರಿನ ಬಗ್ಗೆ ತನಿಖೆಯ ಮಹಜರು, ಭಾವಚಿತ್ರಗಳು ಮೇಲಧಿಕಾರಿಗಳಿಂದ ದೃಢೀಕರಣ ಆಗಿರಬೇಕು. ದೂರುಗಳು ನೀಡಿದ ದೂರಿಗೆ ಸರಿಯಾದ ನ್ಯಾಯ ವಿಲೇವಾರಿಗೆ ಕಾಲಮಿತಿ ನಿಗದಿಯಾಗಬೇಕು. ತನಿಖೆ ನಡೆಸುವಾಗ ಸ್ಥಳೀಯರು ಇರುವಂತೆ ನೋಡಿಕೊಳ್ಳಬೇಕು. ಕೇವಲ ಕಾಗದದ ಮೇಲೆ ಸ್ಥಳಕ್ಕೆ ಹೋಗಿದ್ದೆವು. ಪರಿಶೀಲಿಸಿದ್ದೆವು ಎಂಬ ಸಿದ್ಧ ಉತ್ತರ ಬೇಕಿಲ್ಲ. ಸಂಪೂರ್ಣ ತನಿಖಾತ್ಮಕ ಉತ್ತರಗಳು ದೂರುದಾರರಿಗೆ ಲಭ್ಯವಾಗಬೇಕು ಎಂದು ಒತ್ತಾಯಿಸಿದರು. ನಾನು 12 ದೂರುಗಳನ್ನು ಸಲ್ಲಿಸಿದ್ದೇನೆ. ಕೇವಲ 4 ದೂರುಗಳು ಮಾತ್ರ ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಉಳಿದವುಗಳ ಬಗ್ಗೆ ವಿಲೇವಾರಿ ಯಾವಾಗ ನಡೆಯಲಿದೆ ಎಂದು ಪ್ರಶ್ನಿಸಿದರು. ಒಕ್ಕೂಟದ ಮುಖಂಡರಾದ ನಾ.ಅಂಬರೀಶ್, ನಿಜಧ್ವನಿ ಗೋವಿಂದರಾಜು, ನಮ್ಮನೆ ಪ್ರಶಾಂತ್, ಕೆ.ಆರ್‌ಎಸ್ ಪಕ್ಷದ ಗಿರೀಶ್ ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))