ಸಿಎಂಗೆ ಪ್ರಾಮಾಣಿಕತೆ ಇದ್ರೆ ಜಮೀನು ಕಬಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಿ

| Published : Nov 05 2024, 12:45 AM IST

ಸಾರಾಂಶ

ಮಠ-ಮಾನ್ಯಗಳು, ದೇವಸ್ಥಾನಗಳು, ದಲಿತರ ಜಮೀನುಗಳನ್ನು ಸಹ ಲಪಟಾಯಿಸುವ ಹುನ್ನಾರ ಕಾಂಗ್ರೆಸ್ ಸರ್ಕಾರದಿಂದ ನಡೆದಿದೆ.

ಬಳ್ಳಾರಿ: ಪ್ರಾಮಾಣಿಕತೆ ಬಗ್ಗೆ ಪಾಠ ಮಾಡುವ ಸಿಎಂ ಸಿದ್ದರಾಮಯ್ಯ ಅವರಲ್ಲಿ ಒಂದಷ್ಟಾದರೂ ಪ್ರಾಮಾಣಿಕತೆ ಉಳಿದುಕೊಂಡಿದ್ದರೆ ವಕ್ಫ್‌ ಹೆಸರಿನಲ್ಲಿ ಜಮೀನು ಲೂಟಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸವಾಲು ಹಾಕಿದರು.

ವಕ್ಫ್‌ ಬೋರ್ಡ್‌ ಮೂಲಕ ರೈತರ ಜಮೀನುಗಳಿಗೆ ಕನ್ನ ಹಾಕಲಾಗುತ್ತಿದ್ದು, ಕೂಡಲೇ ವಕ್ಫ್ ಆಸ್ತಿಗೆ ಸಂಬಂಧಿಸಿದ 1974ರ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಜಯೇಂದ್ರ, ಮಠ-ಮಾನ್ಯಗಳು, ದೇವಸ್ಥಾನಗಳು, ದಲಿತರ ಜಮೀನುಗಳನ್ನು ಸಹ ಲಪಟಾಯಿಸುವ ಹುನ್ನಾರ ಕಾಂಗ್ರೆಸ್ ಸರ್ಕಾರದಿಂದ ನಡೆದಿದೆ. ಇದಕ್ಕೆ ಸಚಿವ ಜಮೀರ್ ಅಹ್ಮದ್ ಸಾರಥ್ಯ ವಹಿಸಿದ್ದು, ಸಿಎಂ ಸಿದ್ದರಾಮಯ್ಯ ಸಮ್ಮತಿಯಿಂದಲೇ ಬಡಜನರ ಜಮೀನು ಕಬಳಿಕೆಯಾಗುತ್ತಿದೆ ಎಂದು ದೂರಿದರು.

ವಕ್ಫ್ ಬೋರ್ಡ್ ಮೂಲಕ ರಾಜ್ಯದಲ್ಲಿ 15 ಸಾವಿರ ಎಕರೆಯಷ್ಟು ರೈತರ ಜಮೀನು ಕೊಳ್ಳೆ ಹೊಡೆಯಲು ಸಂಚು ನಡೆದಿದೆ. ದೇಶದ್ರೋಹಿ ಜಮೀರ್ ಅಹ್ಮದ್ ಮೂಲಕವೇ ಈ ಕೃತ್ಯ ನಡೆಯುತ್ತಿದೆ. ಆಯಾ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಬೆದರಿಸಿ ಬಡಜನರ ಆಸ್ತಿ ಕಬಳಿಸಲಾಗುತ್ತಿದೆ. ವಕ್ಫ್‌ ಬೋರ್ಡ್‌ ನಿಲುವಿನಿಂದಾಗಿ ರೈತರು ಕಂಗಾಲಾಗಿದ್ದಾರೆ. ಆದರೆ, ನಾವು ರೈತರ ಪರ ನಿಲ್ಲುತ್ತೇವೆ. ಯಾವುದೇ ಕಾರಣಕ್ಕೂ ಒಂದಿಂಚೂ ಜಮೀನು ವಕ್ಫ್‌ಗೆ ಹೋಗಲು ಬಿಡುವುದಿಲ್ಲ ಎಂದು ತಿಳಿಸಿದರು.

ಪ್ರಧಾನಿ ಮೋದಿ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಸಮಿತಿ ರಚಿಸಿದ್ದಾರೆ. ಇದರಿಂದ ಕಂಗಾಲಾದ ಜಮೀರ್‌ನಂತಹವರು ಬಡಜನರ ಜಮೀನುಗಳ ಮೇಲೆ ಕಣ್ಣು ಹಾಯಿಸಿದ್ದಾರೆ. ಸಾವಿರಾರು ಎಕರೆ ಜಮೀನು ಕಬಳಿಸಲು ಹುನ್ನಾರ ನಡೆಸಿದ್ದಾರೆ. ಇದಕ್ಕೆ ಸಿಎಂ ಸಾಥ್ ನೀಡುತ್ತಿದ್ದಾರೆ. ಇದು ನಮ್ಮ ರಾಜ್ಯದ ಜನರ ದುರ್ದೈವ ಎಂದು ವಿಜಯೇಂದ್ರ ಟೀಕಿಸಿದರು.

ಮುಖಂಡ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯದ ರೈತ ಸಮುದಾಯ ವಕ್ಫ್ ಬೋರ್ಡ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ. ನಾವು ಸಹ ಅವರ ಜತೆಗಿದ್ದು ನ್ಯಾಯಪರ ಧ್ವನಿ ಎತ್ತುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಬಳ್ಳಾರಿ ಜಿಲ್ಲೆಯ 4 ಸಾವಿರ ಎಕರೆ ಜಮೀನನ್ನು ವಕ್ಫ್ ಎಂದು ನಮೂದು ಮಾಡಲಾಗಿದೆ. ರಾಜ್ಯದ ಎಲ್ಲ ಕಡೆ ರೈತರ ಜಮೀನು ಕಬಳಿಸಲು ಕಾಂಗ್ರೆಸಿಗರು ಮುಂದಾಗಿದ್ದಾರೆ. ಸಚಿವ ಜಮೀರ್ ಅಹಮದ್ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಬಿ. ಶ್ರೀರಾಮುಲು, ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಡಾ. ಅರುಣ ಕಾಮಿನೇನಿ, ಮಾಜಿ ಸಂಸದ ಸಣ್ಣ ಫಕ್ಕೀರಪ್ಪ, ಮುಖಂಡರಾದ ಪಾರ್ವತಿ ಇಂದುಶೇಖರ್, ಎಚ್.ಹನುಮಂತಪ್ಪ, ಗಣಪಾಲ್ ಐನಾಥರೆಡ್ಡಿ, ಎಸ್.ಗುರುಲಿಂಗನಗೌಡ, ಕೆ.ಎ.ರಾಮಲಿಂಪ್ಪ, ಸುರೇಖಾ ಮಲ್ಲನಗೌಡ, ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್, ಕೆ.ಎಸ್. ದಿವಾಕರ್, ದಮ್ಮೂರು ಶೇಖರ್ ಇದ್ದರು.

ನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ನಗರೂರ್ ನಾರಾಯಣರಾವ್ ಪಾರ್ಕಿನಿಂದ ಶುರುಗೊಂಡ ಪ್ರತಿಭಟನೆ ಗಡಗಿಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಸೇರಿತು. ಕಚೇರಿ ಮುಂಭಾಗ ಜರುಗಿದ ಪ್ರತಿಭಟನಾ ಸಮಾವೇಶದಲ್ಲಿ ಪಕ್ಷದ ರಾಜ್ಯನಾಯಕರು ವಕ್ಫ್‌ ಬೋರ್ಡ್ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ಹರಿಹಾಯ್ದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜರುಗಿದ ಬಿಜೆಪಿ ಪ್ರತಿಭಟನಾ ವೇಳೆ ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕರೆದ ಪ್ರಸಂಗ ಜರುಗಿತು.

ನಾವು ರೈತರ ಪರ ಬಂದಿದ್ದೇವೆ. ನಾವ್ಯಾರೂ ಇಲ್ಲಿ ಪುಢಾರಿಗಳಾಗಿ ಬಂದಿಲ್ಲ. ರೈತರ ಹಿತ ಕಾಯಲು ಬಂದಿದ್ದೇವೆ. ಇಲ್ಲಿಯೇ ಬಂದು ಮನವಿ ಸ್ವೀಕರಿಸಿ ಸರ್ ಎಂದು ಜೋರು ದನಿಯಲ್ಲಿ ವಿಜಯೇಂದ್ರ ಕರೆದರು. ಬಳಿಕ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಸ್ಥಳಕ್ಕೆ ತೆರಳಿ ಮನವಿ ಪಡೆದರು.