ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯದಲ್ಲಿ ನಡೆದ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರವನ್ನು ವಾರದೊಳಗೆ ಬಹಿರಂಗಪಡಿಸದಿದ್ದರೆ ‘ಲೆಕ್ಕ ಕೊಡಿ ಚಳವಳಿ’ ಆರಂಭಿಸಲಾಗುವುದು ಎಂದು ಜಿಲ್ಲಾಡಳಿತಕ್ಕೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಎಂ.ಬಿ. ನಾಗಣ್ಣಗೌಡ ಎಚ್ಚರಿಕೆ ನೀಡಿದರು.ಸಮ್ಮೇಳನ ನಡೆದು ಮೂರು ತಿಂಗಳಾದರೂ, ಈವರೆಗೂ ಲೆಕ್ಕಪತ್ರವನ್ನು ಸಾರ್ವಜನಿಕರ ಮುಂದಿಟ್ಟಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಾ ಕನ್ನಡಿಗರ ತೆರಿಗೆ ಹಣದಿಂದ ನಡೆಯುತ್ತದೆ. ಆದ ಕಾರಣ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾಡಳಿತ ಇದಕ್ಕೆ ಉತ್ತರದಾಯಿಯಾಗಿರಬೇಕು ಎಂದು ಸೋಮವಾರ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಆಗ್ರಹಿಸಿದರು.
ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಹಾಗೂ ಅದರ ಖರ್ಚು ವೆಚ್ಚಗಳನ್ನು ಸಾರ್ವತ್ರಿಕವಾಗಿ ಮಂಡಿಸುವುದು ಜಿಲ್ಲಾಡಳಿತ ಮತ್ತು ಸಾಹಿತ್ಯ ಪರಿಷತ್ತಿನ ಜವಾಬ್ದಾರಿಯಾಗಿದೆ. ಸಮ್ಮೇಳನದ ಖರ್ಚಿನ ವಿವರವನ್ನು ಸರಿಯಾದ ರೀತಿಯಲ್ಲಿ ದಾಖಲಿಸಿದ್ದರೆ ಇಷ್ಟೊತ್ತಿಗಾಗಲೇ ಲೆಕ್ಕ ಕೊಡಬೇಕಾಗಿತ್ತು. ರಾಜ್ಯ ಸರ್ಕಾರದಿಂದ ಬಂದ ಹಣವೆಷ್ಟು? ಸರ್ಕಾರಿ ನೌಕರರು ಹಾಗೂ ವಿವಿಧ ಸಂಘ ಸಂಸ್ಥೆಗಳು ಕೊಟ್ಟ ಹಣವೆಷ್ಟು? ಅದರಲ್ಲಿ ಖರ್ಚಾದ ಮೊತ್ತವೆಷ್ಟು ಎನ್ನುವುದನ್ನು ಹೇಳುವುದಕ್ಕೆ ವಿಳಂಬ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು.ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಡಾ. ಮಹೇಶ್ ಜೋಷಿ ಸಮ್ಮೇಳನದ ಹೆಸರಿನಲ್ಲಿ ತಾನು ಸಂಗ್ರಹಿಸಿದ ದೇಣಿಗೆ, ಖರ್ಚು ಮಾಡಿದ ವಿವರಗಳನ್ನು ಇದುವರೆಗೆ ಒದಗಿಸಿಲ್ಲ. ಖರ್ಚು- ವೆಚ್ಚಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿರುವುದೇಕೆ ಎನ್ನುವುದೂ ಅರ್ಥವಾಗುತ್ತಿಲ್ಲ. ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ಲೆಕ್ಕ ಕೊಡಲು ತಡ ಮಾಡುತ್ತಿರುವುದೇಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ಎಂದರು.
೧೯೯೪ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಗಳನ್ನು ಅಧ್ಯಕ್ಷರಾಗಿದ್ದ ಜಿ.ಟಿ.ವೀರಪ್ಪ ಅವರು ಒಂದೇ ತಿಂಗಳಲ್ಲಿ ಪ್ರಾಮಾಣಿಕವಾಗಿ ಮಂಡಿಸಿದ್ದರು. ಶೇ.೫೦ರಷ್ಟನ್ನು ಉಳಿಸಿ ಕಸಾಪ ಭವನವನ್ನು ನಿರ್ಮಿಸಿದ್ದರು. ಕುವೆಂಪು ಪ್ರತಿಮೆ ಮತ್ತು ಜಾನಪದ ಲೋಕಕ್ಕೂ ಅನುದಾನ ನೀಡಿದ್ದರು ಎಂದು ಹೇಳಿದರು.ಕಳೆದ ಬಾರಿ ಹಾವೇರಿಯಲ್ಲಿ ಸಮ್ಮೇಳನ ನಡೆದಾಗಲೂ ಅದರ ಖರ್ಚು ವೆಚ್ಚಗಳನ್ನು ಒಂದು ತಿಂಗಳಲ್ಲೇ ಮಂಡಿಸಲಾಗಿತ್ತು. ಆದರೂ ಈ ಬಾರಿಯ ಸಮ್ಮೇಳನದ ಲೆಕ್ಕ ಕೊಡಲು ವಿಳಂಬ ಮಾಡುತ್ತಿರುವುದಾದರೂ ಏಕೆ ಎಂದು ಜಿಲ್ಲಾಡಳಿತ ಮತ್ತು ಸಾಹಿತ್ಯ ಪರಿಷತ್ತು ಸ್ಪಷ್ಟಪಡಿಸುವಂತೆ ಒತ್ತಾಯಿಸಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ ಮಾತನಾಡಿ, ಈಗಾಗಲೇ ಮೂರು ಬಾರಿ ಜಿಲ್ಲಾಡಳಿತಕ್ಕೆ ಸಮ್ಮೇಳನದಿಂದ ಲೆಕ್ಕ ಪತ್ರಗಳನ್ನು ಕೊಡುವಂತೆ ಲಿಖಿತವಾಗಿ ಮನವಿ ಮಾಡಿದ್ದೇವೆ. ಆದರೂ, ನಮ್ಮ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿಲ್ಲ. ಇದೇ ವಿಳಂಬ ನೀತಿ ಮುಂದುವರಿದಲ್ಲಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದರು.ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಕನ್ನಡಿಗರನ್ನು ಒಂದೆಡೆ ಸೇರಿಸುವ ಅಕ್ಷರ ಜಾತ್ರೆಯ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಸಮ್ಮೇಳನಕ್ಕೆ ೩೦ ಕೋಟಿ ರು.ಗೂ ಹೆಚ್ಚು ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತಿದ್ದು, ಸಮ್ಮೇಳನ ಕೇವಲ ಜಾತ್ರೆಯಾಗಿ ರೂಪಾಂತರಗೊಂಡಿದೆಯೇ ಹೊರತು, ಅದರ ಮೂಲುದ್ದೇಶಗಳೇ ಮರೆಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೊಂದು ವಾರದೊಳಗೆ ಸಮ್ಮೇಳನದ ಲೆಕ್ಕವನ್ನು ಸಾರ್ವಜನಿಕರ ಮುಂದೆ ಇಡದಿದ್ದರೆ ರಾಜ್ಯಾದ್ಯಂತ ‘ಲೆಕ್ಕ ಕೊಡಿ ಚಳವಳಿ’ ಆರಂಭಿಸುವುದು ಅನಿವಾರ್ಯವಾಗಲಿದೆ. ಆದ್ದರಿಂದ ಜಿಲ್ಲಾಡಳಿತ ಮತ್ತು ಸಾಹಿತ್ಯ ಪರಿಷತ್ತು ಕೂಡಲೇ ಸಮ್ಮೇಳನದ ಖರ್ಚು, ವೆಚ್ಚಗಳನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದರು.ಒಕ್ಕೂಟದ ಜಿ.ಸಂತೋಷ್, ರಾಜೇಂದ್ರಬಾಬು, ಸಿ.ಕುಮಾರಿ, ಅರವಿಂದಪ್ರಭು, ಎಚ್.ಡಿ.ಜಯರಾಂ ಗೋಷ್ಠಿಯಲ್ಲಿದ್ದರು.