ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಸಂವಿಧಾನ ಉಳಿದರೆ ದೇಶ ಉಳಿದಂತೆ ಈ ದೇಶ ಉಳಿದರೆ ನಾವೆಲ್ಲರೂ ಉಳಿದಂತೆ. ಹಾಗಾಗಿ ನಾವು ಭಾರತದ ಗಣತಂತ್ರ ಉಳಿಸಲು ಶ್ರಮಿಸೋಣ. ಇದುವೇ ನಿಜವಾದ ರಾಷ್ಟ್ರೀಯತೆ ಹಾಗೂ ದೇಶಪ್ರೇಮ ಎಂದು ನಗರದ ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ ತಿಳಿಸಿದರು.ನಗರದ ಕಲ್ಪತರು ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅಖಂಡ ಭಾರತದ ಸಮಗ್ರತೆಯನ್ನು ಭಾಷಾ ವೈವಿಧ್ಯತೆಯನ್ನು ಒಗ್ಗೂಡಿಸಿಕೊಂಡು ಭಾರತ ದೇಶದ ಆಡಳಿತ ನಡೆಸಲು ಕಾನೂನಿನ ಅಗತ್ಯತೆಯನ್ನು ಮನಗಂಡು ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ತಂಡವನ್ನು ರಚಿಸಿ 1950 ಜನವರಿ 26 ರಂದು ಸಂವಿಧಾನವನ್ನು ಜಾರಿಗೊಳಿಸಲಾಯಿತು. ಭಾರತವು ಏಕತೆಯಲ್ಲಿ ವಿವಿಧತೆಯನ್ನು ಪಾಲಿಸುವ ದೇಶವಾಗಿದೆ. ವಿದೇಶಿಯರ ದಾಸ್ಯದಿಂದ ಮುಕ್ತರಾಗಿ ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದೇವೆ ಎಂದರು.
ಸ್ವಾತಂತ್ರ್ಯ ಪಡೆದ ನಂತರ ದೇಶವು ಬಹಳಷ್ಟು ಪ್ರಗತಿ ಹೊಂದಿರುವುದು ನಿಜಕ್ಕೂ ಶ್ಲಾಘನೀಯ. ಈ ಪ್ರಗತಿಯು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವೈಜ್ಞಾನಿಕ ಮುಂತಾದ ಕ್ಷೇತ್ರಗಳಲ್ಲಿಯೂ ಸಾಗಿದೆ. ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮುಂತಾದ ಕ್ಷೇತ್ರದಲ್ಲಿ ನಮ್ಮ ದೇಶದ ಪ್ರಯತ್ನಗಳು ವಿಶ್ವದಲ್ಲಿಯೇ ಕೀರ್ತಿ ಮತ್ತು ಮನ್ನಣೆ ಪಡೆದಿವೆ. ಸಾರ್ವಭೌಮ ಭಾರತ ಕಳೆದ 74ವರ್ಷಗಳಲ್ಲಿ, ಪ್ರಗತಿಯ ಹಲವು ಹಂತಗಳನ್ನು ದಾಟಿ ಬಂದಿದೆ. ನಮ್ಮ ಅಭಿವೃದ್ದಿ ಸಾಧನೆಯನ್ನು ಅವಲೋಕಿಸಿದಾಗ ಜಗತ್ತಿನ ಅತ್ಯಂತ ಮುಂದುವರಿದ ದೇಶಗಳಿಗೆ ಸರಿಸಮಾನವಾಗಿ ಪ್ರಗತಿ ಸಾಧಿಸಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಟಿ.ಎಸ್. ಬಸವರಾಜು, ಬಾಗೆಪಲ್ಲಿ ನಟರಾಜ್, ಜಿ.ಪಿ. ದೀಪಕ್, ಬಿ.ಎಸ್. ಉಮೇಶ್, ಕಾರ್ಯದರ್ಶಿಗಳಾದ ಎಂ.ಆರ್. ಸಂಗಮೇಶ್, ಎಚ್.ಜಿ. ಸುಧಾಕರ್, ಜಿ.ಎಸ್. ಉಮಾಶಂಕರ್, ಟಿ.ಯು. ಜಗದೀಶ್‌ಮೂರ್ತಿ, ಖಜಾಂಚಿ ಟಿ.ಎಸ್. ಶಿವಪ್ರಸಾದ್ ಸೇರಿದಂತೆ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ನಂತರ ಕಲ್ಪತರು ವಿದ್ಯಾಸಂಸ್ಥೆಯ ಮಾಂಟೆಸ್ಸೊರಿ, ಕಲ್ಪತರು ಸೆಂಟ್ರಲ್ ಸ್ಕೂಲ್, ಕಲ್ಪತರು ಪ್ರಥಮ ದರ್ಜೆ ವಿಜ್ಞಾನ ಕಾಲೇಜು, ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು, ಕಲ್ಪತರು ಪದವಿ ಪೂರ್ವ ಕಾಲೇಜು, ಕಲ್ಪತರು ಬಿ.ಎಡ್ ಕಾಲೇಜು, ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ ಮತ್ತು ಎಂ.ಬಿ.ಎ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ವಿಭಾಗಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿ ಮತ್ತು ಬಹುಮಾನ ವಿತರಿಸಲಾಯಿತು. ಸುಮಾರು 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಭಾಗವಹಿಸಿದ್ದರು. ನಂತರ ಎಲ್ಲರಿಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.