ಬೇಡಿಕೆ ಈಡೇರದಿದ್ದರೆ ಫೆ. 15ರಿಂದ ಅನಿರ್ದಿಷ್ಟಾವಧಿ ಮುಷ್ಕರ

| Published : Feb 11 2024, 01:45 AM IST / Updated: Feb 11 2024, 03:57 PM IST

News

ಸಾರಾಂಶ

ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಳಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರದಿಂದ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ.

ಕಾರವಾರ: ಸಮುದಾಯ ಆರೋಗ್ಯ ಅಧಿಕಾರಿಗಳ ಸೇವೆ ಕಾಯಂ, ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು. 

ಅದಿಲ್ಲವಾದಲ್ಲಿ ಫೆ. ೧೫ರಂದು ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ರವಿ ನಾಯ್ಕ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಳಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. 

ಆದರೆ ಸರ್ಕಾರದಿಂದ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಬೇಡಿಕೆಗಳು ಈಡೇರದೇ ಇದ್ದರೆ ಕೆಲಸ ನಿಲ್ಲಿಸಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.

ಬೇಡಿಕೆಗಳು: ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆ ಮಾರ್ಗಸೂಚಿ ಅನ್ವಯ ೬ ವರ್ಷ ಸೇವೆ ಪೂರೈಸಿದ ಎಲ್ಲ ಸಮುದಾಯ ಆರೋಗ್ಯ ಅಧಿಕಾರಿಗಳ ಸೇವೆ ಕಾಯಂಗೊಳಿಸಬೇಕು. 

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಇತರೆ ಉದ್ಯೋಗಿಗಳಿಗೆ ನೀಡಿದ ಶೇ. ೧೫ ರಷ್ಟು ವೇತನ ಹೆಚ್ಚಳವನ್ನು ಸಮುದಾಯ ಆರೋಗ್ಯ ಅಧಿಕಾರಿಗಳಿಗೂ ಅನ್ವಯಿಸಬೇಕು. 

ತಡೆಹಿಡಿದಿರುವ ಶೇ. ೫ರಷ್ಟು ವಾರ್ಷಿಕ ವೇತನ ಮತ್ತು ಶೇ. ೧೦ ಲಾಯಿ ಬೋನಸ್ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ವೇತನ ಪರಿಷ್ಕರಣೆಯಾಗದೇ ಆರ್ಥಿಕವಾಗಿ ತೊಂದರೆಯಾಗುತ್ತಿದೆ. 

ಈ ಹಿಂದೆ ನಡೆದ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಎಲ್ಲ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ವಿನಾಕಾರಣ ವಜಾಗೊಳಿಸಿದ್ದು ಕೂಡಲೇ ಅವರನ್ನು ನೇಮಕ ಮಾಡಿಕೊಳ್ಳಬೇಕು. 

ಕಾರ್ಮಿಕ ನೀತಿಯಂತೆ ಮೊದಲೇ ಸರ್ಕಾರಕ್ಕೆ ತಿಳಿಸಿಯೇ ಮುಷ್ಕರ ನಡೆಸಲಾಗಿತ್ತು. ಆದರೂ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಕೆಲವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಜತೆಗೆ ಒಂದು ದಿನದ ವೇತನ ಕಡಿತ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಪಿಎಚ್‌ಸಿ-ಯುಎಚ್‌ಸಿ ಮಾರ್ಗ ಸೂಚಿ ಅನ್ವಯ ₹ ೧೫,೦೦೦ ಮಾಸಿಕ ಪ್ರೋತ್ಸಾಹಧನ ಪಾವತಿಸಬೇಕು. 

ವಿಮೆ ಇಲ್ಲದೇ ರಾಜ್ಯದಲ್ಲಿ ಈ ಕೆಲಸದಲ್ಲಿ ಇರುವ ೧೦-೧೨ ಜನ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಏನು ಸಿಕ್ಕಿಲ್ಲ. 

ಕಾರಣ ಸಮುದಾಯ ಆರೋಗ್ಯ ಅಧಿಕಾರಿಗಳ ಕುಟುಂಬಕ್ಕೆ ಆರೋಗ್ಯ ವಿಮೆ ಹಾಗೂ ಪಿಎಫ್ ಸೌಲಭ್ಯ ಒದಗಿಸಬೇಕು. 

ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. 

ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕುಡಿಯುವ ನೀರು, ಶೌಚಾಲಯ, ಔಷಧ, ವೈದ್ಯಕೀಯ ಉಪಕರಣಗಳನ್ನು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಕಾರ್ಯದರ್ಶಿ ಸಂದೀಪ ಕುಮಾರ, ಖಜಾಂಚಿ ಪ್ರವೀಣ ಡಯಾಸ್, ಉಪಾಧ್ಯಕ್ಷ ಈರಣ್ಣ ಪಾಟೀಲ್, ಗಣೇಶ, ಕಿರಣಕುಮಾರ ಇದ್ದರು.