ಬೇಡಿಕೆ ಈಡೇರಿಸದಿದ್ದರೆ 31ರಿಂದ ಕೆಲಸ ಸ್ಥಗಿತ

| Published : Dec 10 2024, 01:31 AM IST

ಸಾರಾಂಶ

ಸರ್ಕಾರ ಭರವಸೆ ನೀಡಿದಂತೆ 1.1.2024ಕ್ಕೆ ಅನ್ವಯವಾಗುವಂತೆ ಕೆಎಸ್‌ಆರ್‌ಟಿಸಿ ನೌಕರರ ವೇತನ ಹೆಚ್ಚಳ ಮಾಡಬೇಕು, ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಕೈಬಿಡಬೇಕು, ಚಾಲಕರು, ನಿರ್ವಾಹಕರಿಗೆ ನೀಡಬೇಕಾದ ಬಾಕಿ ಪ್ರೋತ್ಸಾಹಧನ ಕೂಡಲೇ ಬಿಡುಗಡೆಗೊಳಿಸಲು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸೋಮವಾರ ನಗರದ ಸುವರ್ಣಸೌಧ ಗಾರ್ಡನ್‌ ಬಳಿಯ ಟೆಂಟ್‌ನಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್ ಯೂನಿಯನ್‌ ಮುಖಂಡ ಅನಂತಸುಬ್ಬರಾಯ ಮಾತನಾಡಿ, ಸಾರಿಗೆ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಈಗಾಗಲೇ ನಾಲ್ಕು ಕಡೆಗಳಲ್ಲಿ ಹೋರಾಟ ನಡೆಸಿದ್ದೇವೆ. ಅಕ್ಟೋಬರ್‌ 9 ರಂದು ಹುಬ್ಬಳ್ಳಿಯಲ್ಲಿ ನಡೆದ ಹೋರಾಟದ ವೇಳೆ ಸಾರಿಗೆ ಸಚಿವರು ಕ್ರಿಯಾ ಸಮಿತಿ ಜತೆಗೆ ಉನ್ನತಮಟ್ಟದ ಮೀಟಿಂಗ್ ನಡೆಸಿ ವೇತನ ಹೆಚ್ಚಳದ ಬೇಡಿಕೆಯನ್ನು 15 ದಿನದೊಳಗೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಎರಡು ತಿಂಗಳಾದರೂ ಭರವಸೆ ಈಡೇರಿಲ್ಲ. ಈಚೆಗೆ ಸಾರಿಗೆ ಸಚಿವರು ಉಲ್ಟಾ ಹೊಡೆದಿದ್ದಾರೆ. ರಾತ್ರಿ, ಹಗಲು, ಮಳೆ, ಚಳಿ ಎನ್ನದೇ ಅತ್ಯಂತ ಶ್ರಮಿಕ ಕೆಲಸ ಮಾಡುತ್ತೇವೆ. ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯನ್ನು ಅನೇಕ ಅಡೆತಡೆಗಳ ಮಧ್ಯೆಯೂ ಯಶಸ್ವಿಗೊಳಿಸುವಲ್ಲಿ ಸಾರಿಗೆ ನೌಕರರು ಶ್ರಮ ಬಹಳಷ್ಟಿದೆ. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸಮಾಜವಾದ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯನವರಿಗೆ ಶ್ರಮಿಕ ವರ್ಗದ ಸಮಸ್ಯೆ ತಿಳಿಯುತ್ತಿಲ್ಲವೇ ಎಂದು ಪ್ರಶ್ನಿಸಿದರು.ಸರ್ಕಾರಕ್ಕೆ ಡಿ.31ರ ಗಡುವು ನೀಡುತ್ತೇವೆ. ಅಷ್ಟರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೇ ಡಿ.31 ರಿಂದ ಕೆಲಸ ಸ್ಥಗಿತಗೊಳಿಸಿ ಹೋರಾಟ ಆರಂಭಿಸುತ್ತೇವೆ. ಚಾಲಕರು ಸ್ಟೇರಿಂಗ್‌ ಹಿಡಿಯಲ್ಲ, ನಿರ್ವಾಹಕರು ಟಿಕೆಟ್‌ ಮಷಿನ್‌ ಹಿಡಿಯಲ್ಲ, ಮೆಕ್ಯಾನಿಕ್‌ಗಳು ಪಾನಾ ಹಿಡಿಯಲ್ಲ, ನೂರಕ್ಕೆ ನೂರರಷ್ಟು ಹೋರಾಟ ಯಶಸ್ವಿಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಎಚ್‌.ಎಸ್‌, ಮಂಜುನಾಥ, ವಿಜಯ ಭಾಸ್ಕರ ಸೇರಿದಂತೆ ನೂರಾರು ಸಾರಿಗೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.