ಕುಡಿವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಪುರಸಭೆಗೆ ಮುತ್ತಿಗೆ?

| Published : Jan 30 2025, 12:32 AM IST

ಸಾರಾಂಶ

ಕೂಡಲೇ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕನಿಷ್ಠ 4 ದಿನಕ್ಕೆ ಒಮ್ಮೆಯಾದರೂ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಿ

ಸಂಡೂರು: ಚಳಿಗಾಲದಲ್ಲಿ 10-12 ದಿನಕ್ಕೊಮ್ಮೆ ನೀರನ್ನು ಪೂರೈಸಲಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ತೀವ್ರವಾದರೆ, ಜನತೆ ಪುರಸಭೆಗೆ ಖಾಲಿ ಕೊಡಗಳೊಂದಿಗೆ ಮುತ್ತಿಗೆ ಹಾಕುವ ಸಂಭವವಿದೆ. ಕೂಡಲೇ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕನಿಷ್ಠ 4 ದಿನಕ್ಕೆ ಒಮ್ಮೆಯಾದರೂ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಿ ಎಂದು ಪುರಸಭೆಯ ಸದಸ್ಯರು ಮುಖ್ಯಾಧಿಕಾರಿ ಕೆ. ಜಯಣ್ಣ ಅವರನ್ನು ಒತ್ತಾಯಿಸಿದರು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷ ಎಸ್.ಸಿರಾಜ್ ಹುಸೇನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ನಡೆದ ಕಾವೇರಿದ ಚರ್ಚೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಮುಖ್ಯಾಧಿಕಾರಿಯನ್ನು ಒತ್ತಾಯಿಸಿದರು.

ಸದಸ್ಯರಾದ ಎಲ್.ಎಚ್. ಶಿವಕುಮಾರ್, ಈರೇಶ್ ಶಿಂಧೆ, ಕೆ.ವಿ. ಸುರೇಶ್, ಹನುಮೇಶ್, ಕೆ.ಹರೀಶ್, ಅಬ್ದುಲ್ ಮುನಾಫ್, ಲಕ್ಷ್ಮೀದೇವಿ ಮಾತನಾಡಿ, ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ನಾರಿಹಳ್ಳ ಜಲಾಶಯ ತುಂಬಿದೆ. ನೀರಿಗೆ ಕೊರತೆ ಇಲ್ಲ. ಆದರೆ, ಪೂರೈಕೆ ಸರಿಯಾಗಿ ಆಗುತ್ತಿಲ್ಲ. ವಾರ್ಡ್‌ಗಳಲ್ಲಿ ಜನತೆ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ನಮ್ಮನ್ನು ಬಯ್ಯುತ್ತಿದ್ದಾರೆ. ಸಾರ್ವಜನಿಕರಿಂದ ನೀರಿನ ಬಿಲ್ಲನ್ನು ವಸೂಲಿ ಮಾಡುತ್ತೀರಿ. ಸಮರ್ಪಕವಾಗಿ ನೀರು ಬಿಡದಿದ್ದರೆ ಹೇಗೆ? ನೀರು ಪೂರೈಕೆಯ ಸೂಪರ್‌ವೈಜರ್‌ಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಕೆಲವೆಡೆ ನೀರು ಪೋಲಾಗುತ್ತಿರುತ್ತದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ನಾಲ್ಕು ದಿನಕ್ಕೊಮ್ಮೆಯಾದರೂ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖ್ಯಾಧಿಕಾರಿ ಕೆ. ಜಯಣ್ಣ ಮಾತನಾಡಿ, ಪಟ್ಟಣದಲ್ಲಿರುವ ನಾಲ್ಕು ಓವರ್‌ಹೆಡ್ ಟ್ಯಾಂಕ್‌ನಲ್ಲಿ 37 ಲಕ್ಷ ಲೀ. ನೀರು ಸಂಗ್ರಹಿಸಬಹುದಾಗಿದೆ. ಈಗಿರುವ ಪಟ್ಟಣದ ಜನಸಂಖ್ಯೆಗೆ ನೀರು ಪೂರೈಸಲು 65.50 ಲಕ್ಷ ಲೀ. ನೀರು ಬೇಕಾಗುತ್ತದೆ. ವಿದ್ಯುತ್ ಸಮಸ್ಯೆಯಾದಾಗ ಅದು ನೀರು ಪೂರೈಕೆಯ ಮೇಲೂ ಪರಿಣಾಮ ಬೀರುತ್ತದೆ. ಇತ್ತೀಚೆಗೆ ಪಂಪ್‌ಹೌಸ್‌ನಲ್ಲಿನ ಎರಡು ಟ್ರಾನ್ಸ್ಫಾರ್ಮರ್‌ಗಳು ಸುಟ್ಟ ಕಾರಣ, ನೀರಿನ ಪೂರೈಕೆಯಲ್ಲಿ ತೊಂದರೆಯಾಗಿತ್ತು. ಪಟ್ಟಣದಲ್ಲಿ 118 ಕೊಳವೆ ಬಾವಿಗಳಿದ್ದು, ಅವುಗಳಲ್ಲಿ 116 ಕೆಲಸ ನಿರ್ವಹಿಸುತ್ತಿವೆ. 111 ಮಿನಿ ಟ್ಯಾಂಕ್‌ಗಳಿವೆ ಎಂದು ಸಮಜಾಯಿಸಿ ನೀಡಿದರು.

ಸದಸ್ಯರ ಒತ್ತಾಯಕ್ಕೆ ಧ್ವನಿಗೂಡಿಸಿದ ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್ ಕನಿಷ್ಠ ನಾಲ್ಕು ದಿನಕ್ಕೊಮ್ಮೆಯಾದರೂ ನೀರು ಬಿಡಲು ಕ್ರಮ ಕೈಗೊಳ್ಳಿ ಎಂದು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಸದಸ್ಯರಾದ ಮಾಳ್ಗಿ ರಾಮಪ್ಪ, ಅಬ್ದುಲ್ ಮುನಾಫ್, ಕೆ.ಹರೀಶ್ ಮಾತನಾಡಿ, ಪುರಸಭೆಯ ಮಳಿಗೆಗಳಿಂದ ಪುರಸಭೆಗೆ ಬರಬೇಕಾದ ಬಾಡಿಗೆ ಹಣ ಸುಮಾರು ₹71 ಲಕ್ಷದಷ್ಟು ಬಾಕಿ ಇದೆ. ಇನ್ನು ಕೆಲ ದಿನಗಳಲ್ಲಿ ಪುರಸಭೆ ಮಳಿಗೆಗಳನ್ನು ಬಸ್ ನಿಲ್ದಾಣದ ಅಭಿವೃದ್ಧಿ ಹಿನ್ನೆಲೆಯಲ್ಲಿ ಕೆಡವಲಿದ್ದಾರೆ. ಈ ಹಣ ವಸೂಲಿ ಮಾಡಿದ್ದರೆ ಅಭಿವೃದ್ಧಿ ಕಾರ್ಯಗಳಿಗೆ, ಗುತ್ತಿಗೆ ಆಧಾರಿತ ಸಿಬ್ಬಂದಿ ವೇತನಕ್ಕೆ ಉಪಯೋಗಿಸಬಹುದಿತ್ತು. ಬಾಕಿ ಹಣ ವಸೂಲಿಗೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಮಳಿಗೆಗಳ ಬಾಡಿಗೆ ಬಾಕಿ ಉಳಿಸಿಕೊಂಡವರಿಗೆ ಬಾಕಿ ಹಣ ವಸೂಲಿಗೆ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಿ ಎಂದು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಉಪಾಧ್ಯಕ್ಷೆ ಎಂ.ಸಿ. ಲತಾ, ಸದಸ್ಯರು ಉಪಸ್ಥಿತರಿದ್ದರು.