ಪರಿಕರ ಅನ್ಯರಿಗೆ ಮಾರಿದರೆ ಉತಾರದ ಮೇಲೆ ಭೋಜಾ

| Published : Dec 25 2024, 12:50 AM IST

ಪರಿಕರ ಅನ್ಯರಿಗೆ ಮಾರಿದರೆ ಉತಾರದ ಮೇಲೆ ಭೋಜಾ
Share this Article
  • FB
  • TW
  • Linkdin
  • Email

ಸಾರಾಂಶ

ನೀರಾವರಿಗೆ ನೀರನ್ನು ಮಿತವಾಗಿ ಬಳಸಿಕೊಳ್ಳಬೇಕು. ಆಧುನಿಕ ವಿಧಾನ ಬಳಸಿಕೊಂಡು ಫಲಾನುಭವಿಗಳು ಆರ್ಥಿಕವಾಗಿ ಮುಂದೆ ಬರಬೇಕು

ಶಿರಹಟ್ಟಿ: ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಆಯ್ಕೆಯಾದ ತಾಲೂಕಿನ ೧೯ ಜನ ಫಲಾನುಭವಿಗಳಿಗೆ ₹೩.೭೫ ಲಕ್ಷ ವೆಚ್ಚದ ಕೃಷಿ ಪರಿಕರ ವಿತರಿಸಲಾಗುತ್ತಿದ್ದು, ದುಡ್ಡಿನ ಆಸೆಗೆ ಬಿದ್ದು ಹೆಚ್ಚಿನ ಹಣಕ್ಕೆ ಯಾರಾದರು ಮಾರಾಟ ಮಾಡಿದರೆ ನಿಮ್ಮ ಹೊಲದ ಉತಾರದಲ್ಲಿ ಭೋಜಾ ಕುರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಎಚ್ಚರಿಸಿದರು.

ಗುರುವಾರ ಪಟ್ಟಣದಲ್ಲಿ ಅಂಬೇಡ್ಕರ್, ಭೋವಿ, ಆದಿ ಜಾಂಭವ ಅಭಿವೃದ್ಧಿ ನಿಗಮದಿಂದ ಕೊಡಲಾದ ಪಂಪ್‌ಸೆಟ್, ಪೈಪ್ ಹಾಗೂ ಎಲ್ಲ ಪರಿಕರ ವಿತರಣೆ ಮಾಡಿ ಮಾತನಾಡಿದರು.

ಸರ್ಕಾರದ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಕೃಷಿಯಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಎಸ್ಸಿ ಫಲಾನುಭವಿಗಳಿಗೆ ಈ ಎಲ್ಲ ಸವಲತ್ತು ನೀಡಲಾಗುತ್ತಿದೆ. ಉತ್ತಮ ಗುಣಮಟ್ಟದ ಸಾಮಗ್ರಿ ಇಲಾಖೆ ಒದಗಿಸಿದೆ. ಇಲ್ಲಿನ ಪ್ರದೇಶದಲ್ಲಿ ಯಾವುದೇ ನೀರಾವರಿ ಅನುಕೂಲತೆಗಳಿಲ್ಲ. ಹೀಗಾಗಿ ಪಂಪ್‌ಸೆಟ್‌ಗಳು ಅನಿವಾರ್ಯವಾಗಿವೆ. ಯೋಜನೆ ಬಳಸಿಕೊಂಡು ಕೃಷಿಕಾರ್ಯ ಕೈಗೊಳ್ಳಿ. ನೀರಾವರಿಗೆ ನೀರನ್ನು ಮಿತವಾಗಿ ಬಳಸಿಕೊಳ್ಳಬೇಕು. ಆಧುನಿಕ ವಿಧಾನ ಬಳಸಿಕೊಂಡು ಫಲಾನುಭವಿಗಳು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಪ್ರತಿ ಫಲಾನುಭವಿಗಳಿಗೆ ಒಂದು ಮೋಟಾರ್, ಪಂಪ್, ಪ್ಯಾನಲ್ ಬೋರ್ಡ ನೀಡಲಾಗಿದೆ. ಇದರ ಜತೆಯಲ್ಲಿ ೧೭ರಿಂದ ೧೯ ಪೈಪ್‌ಗಳನ್ನು ವಿತರಣೆ ಮಾಡಲಾಗಿದೆ. ಈ ಎಲ್ಲ ಪರಿಕರ ಐಎಸ್‌ಐ ಮಾನ್ಯತೆ ಪಡೆದಿದ್ದು, ಉತ್ತಮ ಗುಣಮಟ್ಟ ಹೊಂದಿವೆ. ಇವುಗಳನ್ನು ರೈತರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.

ಕೊಳವೆ ಬಾವಿ ಕೊರೆಸಿದ ಅರ್ಹ ಎಸ್ಸಿ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕಕ್ಕೂ ₹೭೫ ಸಾವಿರ ನೀಡಲಾಗುತ್ತಿದೆ. ಈ ಎಲ್ಲ ಸೌಲಭ್ಯ ಕಲ್ಪಿಸಿ ಕೊಡಲು ಈ ಹಿಂದೆ ಟೆಂಡರ್ ಕರೆಯಲಾಗುತ್ತಿತ್ತು. ಈ ಕುರಿತು ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಟೆಂಡರ್ ಪದ್ಧತಿ ತೆಗೆದು ಹಾಕಲಾಗಿದೆ. ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ತಲುಪಿಸಲಾಗುತ್ತಿದೆ. ಇದರಿಂದ ಹಣ ದುರ್ಬಳಕೆಯಾಗುವುದನ್ನು ತಡೆಯುವುದಲ್ಲದೇ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತಿದೆ. ಕೊಳವೆ ಬಾವಿ ಕೊರೆಸಲು ಅರ್ಜಿ ಹಾಕಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಎಲ್ಲರೂ ಸಹ ಅರ್ಜಿ ಸಲ್ಲಿಸಬಹುದು. ರೈತರು ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ಹಿಂದುಳಿದ ತಾಲೂಕಿನ ಬವಣೆ ಅರಿತು ಈಗಾಗಲೇ ಕುಡಿವ ನೀರು ಹಾಗೂ ಮೂಲ ಸೌಕರ್ಯಗಳಿಗೆ ಒತ್ತು ನೀಡಿ ಸರ್ಕಾರದ ಗಮನ ಸೆಳೆದು ಅನುದಾನ ಬಿಡುಗಡೆಗೆ ಒತ್ತಾಯಿಸಲಾಗಿದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ತಾಲೂಕು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಉದಯಕುಮಾರ ಯಲಿವಾಳ, ಮಂಜನಗೌಡ ಗಾಂಜಿ, ಮುಖಂಡರಾದ ಜಾನು ಲಮಾಣಿ, ಫಕ್ಕೀರೇಶ ರಟ್ಟಿಹಳ್ಳಿ, ಸಂದೀಪ ಕಪ್ಪತ್ತನವರ, ಗೂಳಪ್ಪ ಕರಿಗಾರ, ಅಶೊಕ ವರವಿ, ಅಕ್ಬರಸಾಬ್‌ ಯಾದಗೀರಿ, ಮಲ್ಲಿಕಾರ್ಜುನ ಕಬಾಡಿ, ಪರಶುರಾಮ, ಡೊಂಕಬಳ್ಳಿ, ಸಂಜೀವ ಸೋಗಿನ, ದೇವಪ್ಪ ಪೂಜಾರ ಸೇರಿ ಅನೇಕರು ಇದ್ದರು.