ರೈತ ರಜೆ ಹಾಕಿದರೆ ದೇಶಕ್ಕೆ ಅನ್ನ ಸಿಗುವುದಿಲ್ಲ

| Published : Dec 26 2024, 01:03 AM IST

ಸಾರಾಂಶ

ಮಾಗಡಿ: ಪ್ರತಿಯೊಬ್ಬರಿಗೂ ತಮ್ಮ ಕೆಲಸದಲ್ಲಿ ರಜೆ ಸಿಗುತ್ತದೆ. ಆದರೆ ರೈತ ರಜೆ ಹಾಕಿದರೆ ದೇಶಕ್ಕೆ ಅನ್ನ ಸಿಗುವುದಿಲ್ಲ ಎಂದು ಚನ್ನಪಟ್ಟಣ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಮಲ್ಲೇಶ್ ಗುರೂಜಿ ಹೇಳಿದರು.

ಮಾಗಡಿ: ಪ್ರತಿಯೊಬ್ಬರಿಗೂ ತಮ್ಮ ಕೆಲಸದಲ್ಲಿ ರಜೆ ಸಿಗುತ್ತದೆ. ಆದರೆ ರೈತ ರಜೆ ಹಾಕಿದರೆ ದೇಶಕ್ಕೆ ಅನ್ನ ಸಿಗುವುದಿಲ್ಲ ಎಂದು ಚನ್ನಪಟ್ಟಣ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಮಲ್ಲೇಶ್ ಗುರೂಜಿ ಹೇಳಿದರು.ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕ ಆಯೋಜಿಸಿದ್ದ 9ನೇ ವರ್ಷದ ರೈತ ದಿನಾಚರಣೆ ಹಾಗೂ ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರೈತ ರಜೆ ಹಾಕಿದರೆ ದೇಶಕ್ಕೆ ಅನ್ನ ಸಿಗುವುದಿಲ್ಲ. ಇಂತಹ ರೈತನಿಗೆ ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯಗಳು ಸಿಗದೇ ಸಂಕಷ್ಟದಲ್ಲಿದ್ದಾನೆ. ಊಟ ಕೊಡುವ ಅನ್ನದಾತನ್ನು ಪ್ರತಿಯೊಬ್ರೂ ಗೌರವಿಸಬೇಕು. ಕೃಷಿಯಲ್ಲಿ ರೈತನಿಗೆ ಹೆಚ್ಚಿನ ಆದಾಯ ಸಿಗುವಂತಹ ಕಾಲ ಬರಬೇಕು ಎಂದು ತಿಳಿಸಿದರು.ಜಗದೇವರ ಮಠಾಧ್ಯಕ್ಷ ಇಮ್ಮಡಿ ಬಸವರಾಜ ಸ್ವಾಮೀಜಿ ಮಾತನಾಡಿ, ಮೊದಲು ರೈತರನ್ನು ಗೌರವಿಸಬೇಕು. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯಬೇಕು. ಆದರೆ ಇಂದು ರೈತ ತಾನು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ, ಸೂಕ್ತ ಮಾರುಕಟ್ಟೆಯಿಲ್ಲದೆ, ನೈಸರ್ಗಿಕ ವಿಕೋಪಗಳಿಗೆ ಸಿಲುಕಿ ನರಳುತ್ತಿದ್ದಾನೆ. ಸರ್ಕಾರ ರೈತರಿಗೆ ಪ್ರೋತ್ಸಾಹಿಸಿ, ಬೆನ್ನುಲುಬಾಗಿ ನಿಂತಾಗ ಮಾತ್ರ ರೈತರ ಬದಕು ಹಸನಾಗುತ್ತದೆ ಎಂದು ತಿಳಿಸಿದರು.ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ತಾಲೂಕಿನ ರೈತರು ನೀರಾವರಿ ಅವಲಂಬಿಸಿ ಯಾವುದೇ ಬೆಳೆ ಬೆಳೆಯುತ್ತಿಲ್ಲ. ಹೇಮಾವತಿ ಯೋಜನೆ, ಕೃಷಿಯೇತರ ಯೋಜನೆಯಾಗಿದೆ. ಕುಡಿಯುವ ನೀರು ಯೋಜನೆಗೆ ಅಡ್ಡಿಪಡಿಸುವಂತಿಲ್ಲ. ನಾವು ಕಾವೇರಿ ಕೊಳದವರು. ನಮಗೆ ಬರಬೇಕಾದ ಹೇಮಾವತಿ ಕುಡಿಯುವ ನೀರು ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದ್ದು ರೈಸಿಂಗ್ ಮೇನ್ ಮೂಲಕ 17ಕ್ಕೂ ಹೆಚ್ಚು ಕೆರೆಗಳಿಗೆ ತುಂಬಿಸಲಾಗುವುದು ಎಂದು ತಿಳಿಸಿದರು.ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಮಾತನಾಡಿ, ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ರೈತ ಸಂಘ ಲೋಕೇಶ್ ನೇತೃತ್ವದಲ್ಲಿ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದೆ. ರೈತರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸಿಗುವಂತಾಗಲಿ ಎಂದರು.ರೈತರಿಗೆ ಸನ್ಮಾನ: ತಾಲೂಕಿನ ಪ್ರಗತಿಪರ ರೈತರಾದ ಅಂಕನಹಳ್ಳಿ ಕೇಶವಮೂರ್ತಿ, ಯಲ್ಲಾಪುರ ಸೋಮಸುಂದರ್, ಹುಚ್ಚನಮೇಗೌಡ, ಪಾಳ್ಯದ ಹೇಮಂತ್, ಹೊಸಪಾಳ್ಯ ಸಂಜೀವಯ್ಯ, ಬಾಚೇನಟ್ಟಿ ಶಿವಮೂರ್ತಿ, ವರದೇನಹಳ್ಳಿ ಹೋರಿ ನರಸಿಂಹಯ್ಯ, ತಗ್ಗೀಕುಪ್ಪೆ ಗ್ರಾಪಂ ಅಧ್ಯಕ್ಷೆ ತೇಜಸ್ವಿನಿ ರಮೇಶ್, ಮರಳುದೇವನಪುರ ನರಸಿಂಹಮೂರ್ತಿ, ನಿವೃತ್ತ ಯೋಧ ಗಿರಿಯಪ್ಪ ಅವರನ್ನು ರೈತ ಸಂಘದಿಂದ ಸನ್ಮಾನಿಸಲಾಯಿತು.ತಾಲೂಕಿನಲ್ಲಿ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಧಿಕಾರಿ ಶಿಲ್ಪ ಅರುಣ್ ಕುಮಾರ್, ಇತಿಹಾಸ ಸಂಶೋಧಕ ಡಾ.ಮುನಿರಾಜಪ್ಪ, ನಿವೃತ್ತ ವಾಯುಸೇನೆ ಅಧಿಕಾರಿ ಶಿವಲಿಂಗಯ್ಯರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್, ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಎಚ್.ಎನ್.ಅಶೋಕ್, ಕನ್ನಡ ಚಲನಚಿತ್ರ ಪೋಷಕ ನಟ ಕರಿಸುಬ್ಬು, ಬಮುಲ್ ನಿರ್ದೇಶಕ ನರಸಿಂಹಮೂರ್ತಿ, ಕಸಾಪ ತಾಲೂಕು ಅಧ್ಯಕ್ಷ ತಿ.ನಾ.ಪದ್ಮನಾಭ, ಮುಖಂಡರಾದ ಎಂ.ಕೆ.ಧನಂಜಯ್ಯ, ಜೆ.ಪಿ.ಚಂದ್ರೇಗೌಡ, ಶೈಲಜ, ವನಜ, ಸಿ.ಜಯರಾಂ, ಆಗ್ರೋ ಪುರುಷೋತ್ತಮ್ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿಯಲ್ಲಿ ರಾಜ್ಯ ರೈತ ಸಂಘದ ತಾಲೂಕು ಘಟಕ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ರೈತರು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಅಭಿನಂದಿಸಲಾಯಿತು.