ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಆರ್,ಗಿರೀಶ್ ಅವರು ತೋಟಗಾರಿಕಾ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತೋವಿವಿ 18 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರೈತರನ್ನು ಸಬಲರನ್ನಾಗಿ ಮಾಡಿದಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶ ಸಫಲವಾಗುತ್ತದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಆರ್. ಗಿರೀಶ್ ಹೇಳಿದರು.

ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತೋವಿವಿ 18ನೇ ಸಂಸ್ಥಾಪನೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿಯ ರೈತರು ಆರ್ಥಿಕವಾಗಿ ಸಬಲರಾಗುವುದು ವಿರಳ. ಈ ಹಿನ್ನೆಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಪದವಿ ಪಡೆದ ಯುವ ಸಮೂಹ ಉದ್ಯೋಗಾಕಾಂಕ್ಷಿಗಳಾಗುವುದಕ್ಕಿಂತ ನವೋದ್ಯಮಿಗಳಾಗಿ ರೈತರನ್ನು ಪ್ರೋತ್ಸಾಹಿಸಬೇಕು. ಹೆಚ್ಚಿನ ಯುವಕರು ರೈತರಾಗಲು ಆಸಕ್ತಿವಹಿಸಬೇಕಿದೆ. ತೋಟಗಾರಿಕೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, 1 ಎಕರೆಯಲ್ಲಿ ₹20 ಲಕ್ಷ ಆದಾಯ ಬರುವ ರೀತಿಯಲ್ಲಿ ಮಾಡಿಕೊಳ್ಳಬಹುದು. ಈ ಎಲ್ಲ ಕಾರಣಗಳಿಂದ ಯುವ ವಿದ್ಯಾರ್ಥಿಗಳನ್ನು ಮತ್ತು ರೈತರನ್ನು ಒಂದುಗೂಡಿಸಿ ಪರಸ್ಪರನ್ನು ಆಕರ್ಷಿಸಲು ತೋವಿವಿ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ ಎಂದರು. ಎಂಎಲ್‌ಸಿ ಹಾಗೂ ತೋಟಗಾರಿಕೆ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿರುವ ಹಣಮಂತ ಆರ್. ನಿರಾಣಿ ಮಾತನಾಡಿ, ಇತರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದಲ್ಲಿ ಬಾಗಲೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಕೇವಲ 18 ವರ್ಷಗಳ ಕಾಲಾವಧಿಯಲ್ಲಿಯೇ ಸಾಕಷ್ಟು ಸಂಶೋಧನೆ ಕೈಗೊಂಡಿರುವುದು ಹೆಮ್ಮೆಯ ವಿಷಯ. ತೋವಿವಿಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿದ್ದು, ಇನ್ನೂ ಹೆಚ್ಚಿನ ಮಟ್ಟದ ಅಭಿವೃದ್ಧಿ ಕಾರ್ಯಗಳಾಗಬೇಕಾಗಿದೆ. ತೋಟಗಾರಿಕೆ ವಿಶ್ವವಿದ್ಯಾಲಯದ ಬೇಡಿಕೆ ಅನುಸಾರವಾಗಿ ಅನುದಾನ ಬಿಡುಗಡೆಗೊಂಡಿಲ್ಲ. ಅನುದಾನ ಬಂದಲ್ಲಿ ಈ ವಿಶ್ವವಿದ್ಯಾಲಯ ಬೆಳೆಯಲು ಸಾಧ್ಯವಾಗುತ್ತದೆ. ವಿಶ್ವವದ್ಯಾಲಯಕ್ಕೆ ಇನ್ನೂ ಸ್ವಲ್ಪ ಭೂಮಿ ಕೂಡ ಬೇಕಾಗಿದ್ದು, ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಭೂಮಿಯ ಫಲವತ್ತತೆ ಹಿತದೃಷಿಯಿಂದ ರೈತರು ಕಬ್ಬು ಬೆಳೆಯುವ ಬದಲಾಗಿ ಪರ್ಯಾಯ ಬೆಳೆಗಳತ್ತ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 2026 ವರ್ಷದಲ್ಲಿ ಸಂಶೋಧನಾ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿ ಪಡೆದ ಸಂಶೋಧಕ, 2026 ವರ್ಷದ ಅತ್ಯುತ್ತಮ ವಿಸ್ತರಣಾ ವಿಜ್ಞಾನಿ, ಅತುತ್ತಮ ಶಿಕ್ಷಕ, ಶಿಕ್ಷಕೇತರ, ಕ್ರೀಡೆ ಮತ್ತು ಯುವಜನೋತ್ಸವದಲ್ಲಿ ಭಾಗಿಯಾಗಿ ಪ್ರಶಸ್ತಿ ಪಡೆದ ಸಾಧಕರನ್ನು ಸನ್ಮಾನೀಸಲಾಯಿತು.

ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ತೋಟಗಾರಿಕೆ ವ್ಯವಸ್ಥಾಪಕ ಸಂಸ್ಥೆ ನಿರ್ದೇಶಕ ಡಾ. ಎಸ್. ಸೆಂಥಿಲ್ ವಿನಾಯಗಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತೋವಿವಿ ವಿಸ್ತರಣೆ ನಿರ್ದೇಶಕ ಡಾ.ವೆಂಕಟೇಶಲು ವಂದಿಸಿದರು.

ಕಾರ್ಯಕ್ರಮದಲ್ಲಿ ತೋವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ಎಸ್.ಎನ್. ವಾಸುದೇವನ್, ಮಹಾಂತಗೌಡ ಬಿ.ಪಾಟೀಲ, ತೋವಿವಿ ಶಿಕ್ಷಣ ನಿರ್ದೇಶಕ ತಮ್ಮಯ್ಯ ಎನ್, ಆಡಳಿತಾಧಿಕಾರಿ ಆರ್.ವೈ ಕಾಂಬಳೆ, ಸ್ನಾತಕೋತ್ತರ ಡೀನ್ ಡಾ.ಬಾಲಾಜಿ ಕುಲಕರ್ಣಿ, ವಿದ್ಯಾರ್ಥಿ ಕಲ್ಯಾಣದ ಡೀನ್ ಡಾ.ಎಂ.ಜಿ. ಕೆರುಟಗಿ, ಇತರರು ಇದ್ದರು.