ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡದಿದ್ದರೆ ನಿಷ್ಪ್ರಯೋಜಕ ಗ್ಯಾರಂಟಿ ಯೋಜನೆ ಅನುಷ್ಠಾನ ಮಂಡಳಿಯನ್ನು ಸರ್ಕಾರ ವಿಸರ್ಜಿಸಿ ಜನತೆಯ ಕ್ಷಮೆ ಕೋರಲಿ ಎಂದು ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡದೆ ಒಂದೆಡೆ ಜನತೆಯನ್ನು ವಂಚಿಸುತ್ತಿದ್ದರೆ, ಮತ್ತೊಂದೆಡೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಎಂಬ ಬಿಳಿಯಾನೆ ಮಾತ್ರ ಹಣದ ಹೊಳೆ ಹರಿಸಿ ಸಾಕುತ್ತಿದೆ. ಕಳೆದ ನಾಲ್ಕು ತಿಂಗಳಿಂದಲೂ ಗೃಹಲಕ್ಷ್ಮೀ, ಅನ್ನ ಭಾಗ್ಯದ ಹಣ ನೀಡದೆ ವಂಚಿಸಿದೆ. ಸಾರಿಗೆ ಇಲಾಖೆಗೂ ಹಣದ ಬಾಕಿ ಪಾವತಿಸಿಲ್ಲ. ಆದರೆ ಸಮಿತಿಯನ್ನು ಮಾತ್ರ ಐಷಾರಾಮಿ ಕೊಠಡಿ, ಸವಲತ್ತು ನೀಡಿ ಸಾಕುತ್ತಿದೆ. ಜನರಿಗೆ ಈ ಸಮಿತಿಯಿಂದ ನಯಾ ಪೈಸೆಯೂ ಪ್ರಯೋಜನವಿಲ್ಲ. ಇಂತಹ ಸಮಿತಿಗೆ ಹಣದ ಹೊಳೆ ಹರಿಸಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರೋಟೋ ಕಾಲ್ ನಿಯಮಾವಳಿಯಲ್ಲಿ ಸ್ಥಾನಮಾನ ನೀಡಿ ಮೆರೆಸುತ್ತಿರುವುದರ ಔಚಿತ್ಯವೇನು ಎಂದು ಪ್ರಶ್ನಿಸಿದರು.
ಮುಂದಿನ ತಿಂಗಳಿಂದ 10 ಕೆಜಿ ಅಕ್ಕಿ ನೀಡುವುದು ಸ್ವಾಗತಾರ್ಹ. ಆದರೆ ಮೂರು ತಿಂಗಳ ಬಾಕಿ ಕೂಡ ಪಾವತಿಸಲೇಬೇಕು. ಗ್ಯಾರಂಟಿ ಸಮಿತಿ ಇದರ ಹೊಣೆ ಹೊರಲಿ, ಇಲ್ಲದಿದ್ದರೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ. ಒಂದು ವಾರದ ಒಳಗಾಗಿ ಗ್ಯಾರಂಟಿ ಯೋಜನೆಗಳ ಹಣ ನೀಡದಿದ್ದರೆ ಮಹಿಳೆಯರ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕೊಠಡಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.ರಾಜ್ಯ ರೈತ ಸಂಘದ ಸಂಚಾಲಕರಾದ ಚೀಲೂರು ಮುನಿರಾಜು ಮಾತನಾಡಿ, ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಇಲಾಖೆಗಳಿಗೆ ಹಣದ ಬಾಕಿ ಇರಿಸಿಕೊಂಡು ಹೆಣಗಾಡುತ್ತಿದೆ. ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ರೈತರ ಬದುಕಿಗೆ ಭದ್ರ ಬುನಾದಿ ಹಾಕುವ ಯಾವುದೇ ಯೋಜನೆಗಳನ್ನು ಜಾರಿಗೆ ತರದೇ ಕೇವಲ ಬೂಟಾಟಿಕೆ ಹೇಳಿಕೊಂಡು ಕಾಲ ಕಳೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಮುನಿಗೌಡ ಹಾಜರಿದ್ದರು.