ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಜಗತ್ತಿನ ಸೃಷ್ಟಿ ಹಾಗೂ ತ್ರಿಮೂರ್ತಿಗಳ ಸೃಷ್ಟಿ ಕ್ರಿಯೆಗೂ ದೈವಿಶಕ್ತಿಯೇ ಪ್ರಮುಖ ಕಾರಣವಾಗಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ತಾಲೂಕಿನ ದಸರಿಘಟ್ಟ ಶ್ರೀ ಆದಿಚುಂಚನಗಿರಿ ಶಾಖಾಮಠದಲ್ಲಿ ಶ್ರೀ ಚೌಡೇಶ್ವರಿ ದೇವಿ ೩೨ನೇ ವರ್ಷದ ಮುಳ್ಳುಗದ್ದಿಗೆ ಉತ್ಸವ ಅಂಗವಾಗಿ ಶನಿವಾರ ಏರ್ಪಡಿಸಿದ್ದ ನವರಾತ್ರಿಯ ನಂತರ ವಿಜಯದಶಮಿಯ ಮಹಾಮಂಗಳಾರತಿ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಮನುಷ್ಯನ ವೈಯಕ್ತಿಕ ಜೀವನದಲ್ಲಿ ಹಾಗೂ ಕುಟುಂಬಗಳಲ್ಲಿ ಕಷ್ಟ ಸುಖಗಳು ಬರುತ್ತವೆ. ಬಂದ ಕಷ್ಟಗಳು ನಿವಾರಣೆಯಾಗಲು ದೈವಿಭಕ್ತಿಯ ಮೇಲೆ ನಂಬಿಕೆ ಇಡಬೇಕು. ಸುಖ ಹಾಗೂ ದುಃಖಗಳು ಬಂದಾಗ ದೇವರ ಸ್ಮರಣೆ ಮಾಡಲೇಬೇಕು. ಹಾಗಾಗಿ ಮನುಷ್ಯನಾದವನು ಮಾನವೀಯತೆ, ಧರ್ಮ, ನಂಬಿಕೆ ಹಾಗೂ ದಾನಗಳಿಂದ ಬದುಕಿದಾಗ ಸೃಷ್ಟಿಕರ್ತೆ ಎಲ್ಲರಿಗೂ ದಯೆ ತೋರುತ್ತಾಳೆ ಎಂದರು.
ವಿಜ್ಞಾನ ಎಷ್ಟೇ ಮುಂದುವರೆದರೂ ಭಕ್ತಿ, ಧರ್ಮಮಾರ್ಗ ಹಾಗೂ ಜ್ಞಾನ ಮಸುಕಾಗುತ್ತಿರುವುದು ನೋವಿನ ಸಂಗತಿ. ಪ್ರಕೃತಿಯ ಮುಂದೆ ಮನುಷ್ಯ ಕ್ಷಣಿಕನಾಗುತ್ತಿದ್ದಾನೆ. ಅಂತಃಕರಣ ಶುದ್ಧವಾದರೆ ಮತ್ತಷ್ಟು ಶಕ್ತಿ ಪಡೆಯಬಹುದು. ದಸರೀಘಟ್ಟ ಕ್ಷೇತ್ರದ ಅಧಿದೇವತೆ ಶ್ರೀಚೌಡೇಶ್ವರಿ ದೇವಿಗೆ ರಾಜ್ಯಾದ್ಯಂತ ಸಾಕಷ್ಟು ಭಕ್ತರಿದ್ದಾರೆ. ಈ ಪುಣ್ಯಕ್ಷೇತ್ರದ ಅಭಿವೃದ್ದಿಗೆ ಇಲ್ಲಿನ ಶಾಖಾಮಠದ ಭಕ್ತರು, ಶ್ರೀ ಚಂದ್ರಶೇಖರನಾಥ ಶ್ರೀಗಳು, ಟ್ರಸ್ಟಿಗಳು, ಗ್ರಾಮಸ್ಥರು ಇಲ್ಲಿನ ರಾಜಕಾರಣಿಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.ದಸರೀಘಟ್ಟ ಶಾಖಾಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಕುಂಬಳಗೋಡು ಶಾಖಾಮಠದ ಶ್ರೀ ಪ್ರಕಾಶನಾಥ ಸ್ವಾಮೀಜಿ, ಮಂಗಳೂರಿನ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಹೊಸಕೊಪ್ಪಳದ ಶಕ್ತಿಮಠದ ಶ್ರೀ ಬಸವೇಶ್ವರ ಚೈತನ್ಯ ಸ್ವಾಮೀಜಿ, ಹಾಸನದ ಶ್ರೀ ಶಂಭುನಾಥ ಸ್ವಾಮೀಜಿ, ಸುಕ್ಷೇತ್ರದ ಶ್ರೀ ಚೈತನ್ಯನಾಥ ಸ್ವಾಮೀಜಿ, ಮಾಜಿ ವಿಧಾನಪರಿಷತ್ ಸದಸ್ಯ ಡಿ.ಎಲ್. ಜಗದೀಶ್, ಟ್ರಸ್ಟಿಗಳಾದ ಜಿತೇಂದ್ರ, ಕೈಲಾಷ್, ಸುಕ್ಷೇತ್ರದ ಆಡಳಿತಾಧಿಕಾರಿ ಎ.ಟಿ. ಶಿವರಾಮ್, ಗುಡಿಗೌಡರಾದ ಕುಮಾರಸ್ವಾಮಿ, ಗ್ರಾ.ಪಂ. ಸದಸ್ಯ ಶ್ರೀನಿವಾಸ್ ಭಾಗವಹಿಸಿದ್ದರು.ಮುಳ್ಳು ಗದ್ದುಗೆ ವಿಶೇಷತೆ ಏನು? ; ಸುಮಾರು ೮ ರಿಂದ ೧೨ ಅಡಿಯಷ್ಟು ಉದ್ದ-ಅಗಲದ ಜಾಗದಲ್ಲಿ ಅಳೆತ್ತರದಷ್ಟು ಗಟ್ಟಿ ಕಾರೆಮುಳ್ಳುಗಳಿರುವ ಗಿಡಗಳನ್ನು ರಾಶಿ ಹಾಕಲಾಗುತ್ತದೆ. ಈ ಮುಳ್ಳಿನ ರಾಶಿಯ ಮೇಲೆ ಶ್ರೀ ಚೌಡೇಶ್ವರಿ ದೇವಿಯವರ ಉತ್ಸವ ಮೂರ್ತಿಯನ್ನು ಭಕ್ತರು ಹೊತ್ತುಕೊಂಡು ಅತ್ಯಂತ ಶ್ರದ್ಧಾಭಕ್ತಿಯಿಂದ ಸರಾಗವಾಗಿ ಮುಳ್ಳಿನ ರಾಶಿಯನ್ನು ತುಳಿದುಕೊಂಡು ಹತ್ತುತ್ತಾ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಮೂರು ಬಾರಿ ಹತ್ತಿ ನಡೆಯುತ್ತಾರೆ. ಇದರ ಜೊತೆಗೆ ಹರಕೆ ಮಾಡಿಕೊಂಡ ಮಕ್ಕಳಿಂದ ವಯೋವೃದ್ದರಾದಿಯಾಗಿ ದೇವಿಯ ಹಿಂದೆ ನಡೆದುಕೊಂಡು ಹೋಗುವ ಮೂಲಕ ತಮ್ಮ ಹರಕೆ ತೀರಿಸಿ ಧನ್ಯತಾಬಾವ ಮೆರೆಯುತ್ತಾರೆ.