ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಸಕಾಲಕ್ಕೆ ಮಳೆಯಾಗಿ ನಾಡಿಗೆ ಅನ್ನ ನೀಡುವ ರೈತನ ಜಮೀನುಗಳಲ್ಲಿ ಉತ್ತಮ ಬೆಳೆ ಬೆಳೆದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕು ಆತನ ಬದುಕು ಸದಾ ಹಸನಾಗಿ ಉಜ್ವಲವಾಗಿದ್ದರೆ, ನಾಡಿನ ಅಭಿವೃದ್ಧಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಉಜ್ಜಯನಿ ಮಹಾಪೀಠದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನೇಶ್ವರ 1008 ಶ್ರೀಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.ತಾಲೂಕಿನ ತೊಳಮಟ್ಟಿ ಗ್ರಾಮದ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಉಚಿತ ಸರ್ವ ಧರ್ಮ ಸಾಮೂಹಿಕ ವಿವಾಹ, ಬಿರೇಶ್ವರ ದೇವರ ಪಲ್ಲಕ್ಕಿ ಉತ್ಸವ ಸಮಾರಂಭ ಮತ್ತು ರಥೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶ್ರಮದಿಂದ ಸಿಗುವ ಆನಂದ ಬೇರೆಯಾವುದರಿಂದ ಸಿಗಲಾರದು. ರೈತರು, ಜನರು ಮತ್ತು ವ್ಯಾಪಾರಸ್ಥರು ಜೀವನದಲ್ಲಿ ಮಾಡುವ ಕೆಲಸದಲ್ಲಿ ಶ್ರಮ ಅಳವಡಿಸಿಕೊಂಡರೆ ಬದುಕು ನೆಮ್ಮದಿಯಿಂದ ಕೂಡಿರುತ್ತದೆ. ಆದರೆ ಸರ್ಕಾರ ಭಾಗ್ಯ ನೀಡಿ ಶ್ರಮ ಎನ್ನುವ ಪದಕ್ಕೆ ಅರ್ಥಬಾರದಂತೆ ಮಾಡುವುದು ಸರಿ ಕ್ರಮವಲ್ಲ ಎದು ಶ್ರೀಗಳು ತಿಳಿಸಿದರು.
ಕಾಶಿ ತೀರ್ಥಯಾತ್ರೆ, ಶ್ರೀಶೈಲದ ಅದ್ಧೂರಿ ಜಾತ್ರೆ ಭಕ್ತ ಸಮೂಹದ ಆಶಯದಂತೆ ಜರಗುವುದು ಇವೆಲ್ಲಕ್ಕೂ ಶಾಸನಗಳಲ್ಲಿ ವಾಕ್ಯಗಳಿವೆ. ಹಾಗೇ ಬಾಗಲಕೋಟೆ ಜಿಲ್ಲೆ ತೋಳಮಟ್ಟಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸ ಇಷ್ಟೊಂದು ಅದ್ಧೂರಿಯಾಗಿ ಮಾಡುವುದು ಶಿವನು ಮೆಚ್ಚುವ ಕಾರ್ಯ ಮಾಡಿದಂತೆ. ಬಾಗಲಕೋಟೆ, ವಿಜಯಪುರ ಭಾಗದ ಜನರು ದುಡಿಮೆ ಮೇಲೆ ನಂಬಿಕೆಯಿಡುವುದರ ಜೊತೆಗೆ ಭಕ್ತಿಯಲ್ಲಿಯೂ ಸರ್ವಧರ್ಮ ಜನರೊಂದಿಗೆ ಮಾಡುವ ಕೆಲಸಗಳು ಪಂಚಪೀಠಗಳ ಸನ್ನಿಧಿಗೆ ತೃಪ್ತಿ ತರುವಂತಿವೆ. ಭಕ್ತಿಯಲ್ಲಿ ಗಟ್ಟಿತನ, ಒಗ್ಗಟ್ಟಿನಲ್ಲಿ ಶ್ರೀಮಂತಿಕೆ ತೋರುವ ಗ್ರಾಮ, ನಗರ ಎಲ್ಲದರಲ್ಲಿಯೂ ಆರೋಗ್ಯವಂತ ವಾತಾರಣ ಹೊಂದಿರುತ್ತದೆ ಎಂದು ಆಶೀರ್ವದಿಸಿದರು.ದಾಂಪತ್ಯ ಜೀವನಕ್ಕೆ ಕಾಲಿಟ್ಟ 9 ಜೋಡಿ:
ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳುವ ಮೂಲಕ ರಾಷ್ಟ್ರೀಯ ಸಂಪತ್ತು ಉಳಿಸುವ ಕೆಲಸ ಮಾಡಲಾಗಿದೆ ಎಂದು ಭಗವತ್ಪಾದರು ತಿಳಿಸಿದರು.ಸಾಮೂಹಿಕ ವಿವಾಹಗಳಲ್ಲಿ ಕೇವಲ ಬಡವರು ಮಾತ್ರ ವಿವಾಹ ಆಗುತ್ತಾರೆ ಎನ್ನುವುದು ತಪ್ಪು. ಇಂತಹ ಸಮಾರಂಭದಲ್ಲಿ ವಿವಾಹ ಆಗುವ ದಂಪತಿ ಜೀವನ ಸುಖಕರವಾಗಿ ಸಾಗುವುದರ ಜತೆಗೆ ದೇಶದ ಸಂಪತ್ತು ರಕ್ಷಣೆಯ ಪಾತ್ರದಾರಿಗಳಾಗುತ್ತಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ತಮ್ಮ ಸುಖ ಸಂಸಾರದೊಂದಿಗೆ ಹಿರಿಯರನ್ನು, ತಂದೆ-ತಾಯಿಯನ್ನು ಅತ್ತೆ ಮಾವನನ್ನು ಪ್ರೀತಿ ಗೌರವದಿಂದ ಕಂಡು ಆದರ್ಶ ದಂಪತಿಗಳಾಗಿ ಬದುಕು ಸಾಗಿಸಿ, ಹೆಣ್ಣು-ಗಂಡು ಸಂತಾನ ಭಾಗ್ಯ ಪಡೆದುಕೊಂಡು ದೇಶಭಕ್ತ ಮಕ್ಕಳಾಗಿ ಬೆಳೆಸಬೇಕು. ನಾವು ಭಾರತೀಯರು ನಮ್ಮ ಕೆಲಸ ಭಕ್ತಿಯಲ್ಲಿ ಇರುವಂತೆ ನೋಡಿಕೊಂಡು ಸುಖಮಯ ಜೀವನ ಸಾಗಿಸಿ ಎಂದು ಶ್ರೀಗಳು ಶುಭಾಶಿಸಿದರು.
ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಉಜ್ಜಯನಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಸುಮಂಗಲೆಯರ ಆರತಿ, ಕುಂಭಮೇಳದೊಂದಿಗೆ ಸಕಲ ವಾದ್ಯ ವೈಭವಗಳೊಂದಿಗೆ ನಡೆಯಿತು. ರಥೋತ್ಸವ ಸಮಾರಂಭವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಿತು. ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀ ಕಲ್ಮಠದ ಗುರುಪಾದ ಶಿವಾಚಾರ್ಯರರು, ಕಲಾದಗಿ ಗಂಗಾಧರ ಶಿವಾಚಾರ್ಯರರು, ಬಿಲ್ ಕೆರೂರ ಸಿದ್ದಲಿಂಗ ಶಿವಾಚಾರ್ಯರರು, ಮುತ್ತತ್ತಿ ಗುರುಲಿಂಗ ಶಿವಾಚಾರ್ಯರರು, ಬೀಳಗಿ ಬ್ರಹ್ಮಠದ ಶಿವಾನಂದ ದೇವರು, ಕುಮಾರ ಸ್ವಾಮಿ ಹಿರೇಮಠ ಶ್ರೀಗಳು ಸೇರಿದಂತೆ ಇತರರು ಮಾತನಾಡಿದರು.ಶಿವಾನಂದ ಬೊಳರಡ್ಡಿ ನಿರೂಪಿಸಿ, ಸಂತೋಷ ಸಜ್ಜನ ಸ್ವಾಗತಿಸಿದರು.
-------------ತೊಳಮಟ್ಟಿ ಗ್ರಾಮದ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು.
-------------ತೊಳಮಟ್ಟಿ ಗ್ರಾಮದ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು.