ಸಾರಾಂಶ
-ಬಿಜೆಪಿಯ ಸಂಘಟನಾ ಪರ್ವದ ಚುನಾವಣಾಧಿಕಾರಿ ಜೀವನಮೂರ್ತಿ ಆತಂಕ । ಬಿಜೆಪಿ ಸಂಘಟನಾ ಪರ್ವದ ಜಿಲ್ಲಾ ಮಟ್ಟದ ಕಾರ್ಯಗಾರಕ್ಕೆ ಚಾಲನೆ
-----ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬಿಜೆಪಿ ಸದಸ್ಯತ್ವದ ಗುರಿ ಕಡಿಮೆ ಇದೆ. ಸದಸ್ಯತ್ವ ಮಾಡಲು ಇನ್ನೂ ಹತ್ತು ದಿನಗಳ ಕಾಲಾವಕಾಶ ಇದೆ. ಈ ಸಮಯದಲ್ಲಿ ರಾಜ್ಯ ಘಟಕ ನೀಡಿದ ಗುರಿಯನ್ನು ಸಾಧಿಸಬೇಕು. ಇಲ್ಲದಿದ್ದರೆ ಸಂಘಟನೆ ಶಕ್ತಿ ಕ್ಷೀಣಿಸುತ್ತದೆ ಎಂದು ಸಂಘಟನಾ ಪರ್ವದ ಚುನಾವಣಾಧಿಕಾರಿ ಜೀವನಮೂರ್ತಿ ಹೇಳಿದರು.ಚಿತ್ರದುರ್ಗ ನಗರದ ಜಗಲೂರು ಮಹಾಲಿಂಗಪ್ಪ ಟವರ್ಸ್‍ನಲ್ಲಿ ಮಂಗಳವಾರ ಬಿಜೆಪಿಯಿಂದ ಆಯೋಜಿಸಿದ್ದ ಚಿತ್ರದುರ್ಗ ಸಂಘಟನಾ ಪರ್ವದ ಜಿಲ್ಲಾ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ 1951ರಲ್ಲಿ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೂ ನಮ್ಮ ಪಕ್ಷದಲ್ಲಿ ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣೆ ಮೂಲಕವೇ ಮಾಡಲಾಗುತ್ತಿದೆ. ಪ್ರತಿ ಆರು ವರ್ಷಕ್ಕೆ ಒಮ್ಮೆ ಸದಸ್ಯತ್ವ ಅಭಿಯಾನವನ್ನು ಮಾಡುವುದರ ಮೂಲಕ ನೂತನವಾಗಿ ಸದಸ್ಯರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುವುದು. ಪ್ರತಿ ಬೂತ್‍ನಲ್ಲಿ 100 ಜನ ಸದಸ್ಯರನ್ನಾಗಿ ಮಾಡಿದವರು ಸಕ್ರಿಯ ಸದಸ್ಯರಾಗಿ ಸಮಿತಿಯಲ್ಲಿ ಪದಾಧಿಕಾರಿಗಳಾಗಲು ಅರ್ಹತೆ ಹೊಂದಿರುತ್ತಾರೆ ಎಂದರು.
ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆಯಲ್ಲಿ ಪ್ರತಿ ಬೂತ್‍ನಲ್ಲಿ ಬಿಜೆಪಿ ಪಕ್ಷದ ಪಡೆದ ಮತಗಳ ಶೇ.70 ರಷ್ಟು ಮತದಾರರನ್ನು ಪಕ್ಷಕ್ಕೆ ಸದಸ್ಯರನ್ನಾಗಿ ಮಾಡಬೇಕಿದೆ. ಇದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಿರ್ದೇಶನವಿದೆ. ಈಗಾಗಲೇ ಪಕ್ಷದ ಸದಸ್ಯತ್ವ ಅಭಿಯಾನ ಅವಧಿ ಮುಗಿದಿದ್ದರೂ ರಾಜ್ಯ ಘಟಕ ಮತ್ತೆ ಕಾಲಾವಕಾಶ ನ.15 ರವರೆಗೆ ಮುಂದುವರೆಸಿದೆ. ಈ ಅವಧಿಯಲ್ಲಿ ರಾಜ್ಯ ಘಟಕ ನೀಡಿದ ಗುರಿ ತಲುಪಬೇಕಿದೆ. ಪಕ್ಷದ ಪದಾಧಿಕಾರಿಗಳು ಶ್ರಮ ಹಾಕಬೇಕಿದೆ ಎಂದು ಜೀವನಮೂರ್ತಿ ಕರೆ ನೀಡಿದರು. ಮುಂದಿನ ದಿನದಲ್ಲಿ ಜಿಪಂ ಮತ್ತು ತಾಪಂ ಚುನಾವಣೆಗಳು ಸಮೀಪಿಸುತ್ತಿದ್ದು, ಇದಕ್ಕೆ ಈ ಸದಸ್ಯತ್ವ ಅನುಕೂಲವಾಗಲಿದೆ. ರಾಜ್ಯದಲ್ಲಿ ಅಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲಿ ಮುಳುಗಿದೆ, ವಾಲ್ಮೀಕಿ, ಮುಡಾ ಹಗರಣ ಹಾಗೂ ಇಂದಿನ ಲ್ಯಾಂಡ್ ಜಿಹಾದ್ ಹಗರಣ ಇದೆ. ಇದರ ಬಗ್ಗೆ ಜನರಿಗೆ ತಿಳಿಸುವುದರ ಮೂಲಕ ಸದಸ್ಯತ್ವವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಬೇಕು. ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲುವನ್ನು ಸಾಧಿಸಬೇಕಿದೆ. ಇದಕ್ಕೆ ಈಗಿನಿಂದಲೇ ಕಾರ್ಯ ಪ್ರಾರಂಭ ಮಾಡಬೇಕಿದೆ ಎಂದು ಹೇಳಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್ ಮಾತನಾಡಿ, ಬಿಜೆಪಿ ಸದಸ್ಯತ್ವ ಅಭಿಯಾನದ ನಂತರ ಈಗ ಸಂಘಟನಾ ಪರ್ವ ಪ್ರಾರಂಭವಾಗಿದೆ. ಪ್ರಪಂಚದಲ್ಲಿ ಬಿಜೆಪಿಯ ಸದಸ್ಯತ್ವದ ಸಂಖ್ಯೆ 12 ಕೋಟಿಯನ್ನು ದಾಟಿದೆ. ಇದರಿಂದ, ದೇಶದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷವಾಗಿ ಹೂರಹೊಮ್ಮಿದೆ. ರಾಜ್ಯದಲ್ಲಿ 1 ಕೋಟಿ ಸದಸ್ಯರನ್ನು ಮಾಡುವ ಗುರಿಯನ್ನು ರಾಷ್ಟ್ರ ಘಟಕ ನೀಡಿದೆ. ಈಗಾಗಲೇ 70 ಲಕ್ಷ ಸದಸ್ಯರನ್ನು ಮಾಡಲಾಗಿದೆ. ಜಿಲ್ಲೆಗೆ 4.60 ಲಕ್ಷದ ಸದಸ್ಯತ್ವ ಮಾಡಲು ಗುರಿಯನ್ನು ನೀಡಲಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯ 2 ಮಂಡಲಗಳು ಮಾತ್ರ 15,000 ಸದಸ್ಯರನ್ನು ಮಾಡಿದ್ದರೆ ಉಳಿದ 2 ಮಂಡಲಗಳು 14, 000 ಸದಸ್ಯರನ್ನು ಮಾಡಿದ್ದಾರೆ. ಇನ್ನೂ ಉಳಿದ 2 ಮಂಡಲಗಳು ಸದಸ್ಯತ್ವ ಮಾಡುವಲ್ಲಿ ಹಿಂದೆ ಇವೆ. ಇದರ ಬಗ್ಗೆ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಿದೆ. ಚಿತ್ರದುರ್ಗ ಸದಸ್ಯತ್ವ ಅಭಿಯಾನದಲ್ಲಿ ರಾಜ್ಯದಲ್ಲಿಯೇ ಮೇಲಿಂದ ಮೂರನೆ ಸ್ಥಾನವನ್ನು ಪಡೆಯುತ್ತಿತು. ಆದರೆ, ಈಗ ಕೆಳಗಿನಿಂದ ಮೂರನೇ ಸ್ಥಾನವನ್ನು ಪಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾತನಾಡಿ, ಬಿಜೆಪಿ ಬೂತ್ ಅಧ್ಯಕ್ಷರ ನೇಮಕಾತಿಯನ್ನು ನ.15 ರಿಂದ 30ರೂಳಗಾಗಿ ಪೂರ್ಣ ಮಾಡಬೇಕಿದೆ. ನ.21 ರಂದು ರಾಷ್ಟ್ರ ಹಾಗೂ ನ.27 ರಂದು ರಾಜ್ಯ ಮಟ್ಟ ಮತ್ತು ಡಿ.1 ರಂದು ಜಿಲ್ಲಾ ಮಟ್ಟದ ಕಾರ್ಯಾಗಾರಗಳು ನಡೆಯಲಿವೆ. ಈ ಸಮಯದಲ್ಲಿ ಎಲ್ಲರು ಸಕ್ರಿಯವಾಗಿ ಸದಸ್ಯರನ್ನು ಮಾಡಬೇಕಿದೆ. ಬಿಜೆಪಿ ಪಕ್ಷಕ್ಕೆ ಮಹಿಳಾ ಕಾರ್ಯಕರ್ತರ ಅಗತ್ಯ ಇದೆ, ಈ ಹಿನ್ನಲೆಯಲ್ಲಿ ಮಹಿಳಾ ಸದಸ್ಯತ್ವಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಹೇಳಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಾಪುರದ ಸುರೇಶ್ ಇದ್ದರು.
---------------ಪೋಟೋ: ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಸಂಘಟನಾ ಪರ್ವದ ಜಿಲ್ಲಾ ಮಟ್ಟದ ಕಾರ್ಯಗಾರಕ್ಕೆ ಜೀವನ್ ಮೂರ್ತಿ ಚಾಲನೆ ನೀಡಿದರು.
--------ಫೋಟೋ: 5 ಸಿಟಿಡಿ 1