ಸಾರಾಂಶ
ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬಡವರ ಮನಸ್ಸು ಖುಷಿಯಾದರೆ ನೂರು ಚಂಡಿಕಾಯಾಗ ಮಾಡಿದ ಫಲ ಸಿಗುತ್ತದೆ ಎಂದು ಗೌರಿಗದ್ದೆ ಶ್ರೀ ಕ್ಷೇತ್ರದ ಅವಧೂತರಾದ ಶ್ರೀ ವಿನಯ್ ಗುರೂಜೀ ಹೇಳಿದರು.
ಶಿರವಾಸೆಯ ವಿವೇಕಾನಂದ ವಿದ್ಯಾಸಂಸ್ಥೆ 50 ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಗುರು ಶಿಷ್ಯರ ಸಮಾಗಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ತಿರುಗಾಟ, ವೇಷಭೂಷಣ, ಇಂಟರ್‌ನೆಟ್, ಮೊಬೈಲ್ ಸೇರಿದಂತೆ ನಾವು ಅನಗತ್ಯವಾಗಿ ನಿತ್ಯ ಮಾಡುವ ವೆಚ್ಚ ನಿಯಂತ್ರಿಸಿ ಅದೇ ಹಣವನ್ನು ಶಾಲೆ, ದೇವಸ್ಥಾನ, ಬಡವರ ಮನೆ ನಿರ್ಮಾಣಕ್ಕೆ ನೀಡಿದರೆ ಹೆಚ್ಚು ಉಪಯೋಗವಾಗುತ್ತದೆ. ಇವೆಲ್ಲವೂ ಚೆಂದ ಮಾಡಬಹುದು. ಇದೇ ನಿಜವಾದ ದೇವರ ಸೇವೆ. ಸನಾತನ ಧರ್ಮತತ್ತ್ವ ಪರೋಪಕಾರವನ್ನೆ ಪ್ರತಿಪಾದಿಸುತ್ತದೆ ಎಂದರು.ನಮ್ಮ ದೇಹ ಬೆಳೆದರೂ ಅದೇ ಪ್ರಮಾಣದಲ್ಲಿ ಬುದ್ಧಿ ಬೆಳೆದಿಲ್ಲ. ದೇಶದೆಲ್ಲೆಡೆ ಬಹುತೇಕ ಎಲ್ಲ ಮಹಾಪುರುಷರ ಹೆಸರಿನಲ್ಲಿ ಬಾರ್‌ಗಳಿವೆ. ಆದರೆ ಇಬ್ಬರ ಹೆಸರಿನಲ್ಲಿ ಮಾತ್ರ ಬಾರ್ ತೆರೆದಿಲ್ಲ. ಅವೆಂದರೆ ಒಂದು ಮಹಾತ್ಮಾಗಾಂಧಿ, ಇನ್ನೋರ್ವರು ಸ್ವಾಮಿ ವಿವೇಕಾನಂದ. ಏಕೆಂದರೆ ಈ ಹೆಸರುಗಳಿಗೆ ಪಾವಿತ್ರ್ಯಇದೆ ಎಂದು ನುಡಿದರು. ಅಹಂಕಾರ ಮತ್ತು ಅಜ್ಞಾನ ಮನುಷ್ಯರಲ್ಲಿ ಒಟ್ಟಿಗೆ ಇರುತ್ತದೆ. ಇವನ್ನು ಬದಿಗಿರಿಸಿ ಸೇವಾ ಮನೋಭಾವ ಬೆಳೆಸಿ ಕೊಳ್ಳಬೇಕು. ಆಗ ಮನೆ, ಹಳ್ಳಿ, ದೇಶಕ್ಕೆ ಕೊಡುಗೆ ಕೊಡಲು ಸಾಧ್ಯ. ತಂದೆ ತಾಯಿಯರು ವಿಶ್ವವಿದ್ಯಾನಿಲಯವಿದ್ದಂತೆ. ಇವರಿಂದ ಸಂಸ್ಕಾರ ಕಲಿತು ಬೆಳೆದರೆ ಬೆಳಕಾಗಬಹುದು. ತಂದೆ ಕೆಟ್ಟರೆ ಮನೆ ಹಾಳು. ತಾಯಿ ಕೆಟ್ಟರೆ ಕುಲ ಹಾಳಾಗುತ್ತದೆ ಎಂಬ ಮಾತಿದೆ. ಹಬ್ಬ ಹರಿದಿನಗಳು ಸುತ್ತಲಿನ ದ್ವೇಷ ಮರೆಯಲು ಹಿಂದಿನವರು ಮಾಡಿಕೊಟ್ಟ ಆಚರಣೆ. ನನ್ನೂರು, ಶಾಲೆ, ದೇವಸ್ಥಾನ, ಸುಗ್ಗಿಹಬ್ಬ, ಮಾರಿ ಹರಕೆ ಇವೆಲ್ಲವೂ ಜನರನ್ನು ಬೆಸೆಯುವ ಸಾಧನಗಳೆಂಬುದನ್ನು ಅರಿಯಬೇಕು. ಶಾಲೆ ಸುವರ್ಣಮಹೋತ್ಸವ ಊರಹಬ್ಬವಾಗಿರುವುದು ಸಂತಸದ ಸಂಗತಿ ಎಂದರು.
ಹಳ್ಳಿಗಳು ಸಂಸ್ಕೃತಿಯನ್ನು ಕಳೆದುಕೊಳ್ಳಬಾರದು. ಇಲ್ಲಿಯ ಯುವಕ ಯುವತಿಯರು ಪ್ರಕೃತಿ ಸಂಸ್ಕೃತಿ ಎರಡನ್ನೂ ಕಾಪಾಡಲು ಸಂಕಲ್ಪಿಸಬೇಕು. ಬ್ಯುಸಿನೆಸ್ ಮೀಟ್ ನಂತಹ ಯೋಜನೆಗಳು ಇಲ್ಲಿ ನಡೆಸಿದರೆ ಹಳ್ಳಿಯ ಪ್ರತಿಭಾನ್ವಿತರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಈ ಸವಿ ನೆನಪಿಗಾಗಿ ಸಭಾಭವನ ನಿರ್ಮಿಸುವುದಾದರೆ ಲಕ್ಷ ರುಪಾಯಿ ತಮ್ಮ ಟ್ರಸ್ಟ್‌ನಿಂದ ನೀಡುವುದಾಗಿ ನುಡಿದ ವಿನಯ್ ಗುರೂಜೀ, ಶಿಕ್ಷಣ ಸಂಸ್ಥೆ ರೂವಾರಿ ಮುಳ್ಳೇಗೌಡರದು ಆದರ್ಶ ಬದುಕು ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಿರಿಯ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ, ದಾನಗಳಲ್ಲೆ ವಿದ್ಯಾದಾನ ಶ್ರೇಷ್ಠ. ವಿದ್ಯೆಯಿಂದ ನಮ್ಮ ಬದುಕಿನ ಸ್ಥರವನ್ನು ಎತ್ತರಿಸಿಕೊಳ್ಳಬಹುದು. ಗುಡ್ಡಗಾಡು ಗ್ರಾಮೀಣ ಪ್ರದೇಶದ ನೂರಾರು ಹುಡುಗರು ಉತ್ತಮವಾಗಿ ಬದುಕು ಕಟ್ಟಿಕೊಳ್ಳಲು ಈ ಶಾಲೆ ಸಹಕಾರಿ. ಮುಳ್ಳೇಗೌಡರು ಹಾಗೂ ಅವರ ಸ್ನೇಹಿತರ ಮುಂದಾಲೋಚನೆಯಿಂದ ಶಿಕ್ಷಣಸಂಸ್ಥೆ ನಿರ್ಮಾಣಗೊಂಡು ಸುವರ್ಣಮಹೋತ್ಸವ ಸಂಭ್ರಮಿಸುತ್ತಿರುವುದು ಹರ್ಷ ದಾಯಕ. ಇದರ ಸವಿ ನೆನಪಿಗೆ ಯಾವುದಾರೂ ಶಾಶ್ವತ ಕಾರ್‍ಯ ಆಗಬೇಕು. ತಾವೂ ಎಲ್ಲ ರೀತಿಯಿಂದಲೂ ಸಹಕಾರ ನೀಡುವುದಾಗಿ ಹೇಳಿದರು.
ಸಿರಿ ಕಾಫಿ ರೆಸಾರ್ಟ್ ಮಾಲೀಕ ಸ.ನಾ.ರಮೇಶ್ ಸಾಧಕರನ್ನು ಗೌರವಿಸಿ ಮಾತನಾಡಿ, ಭಾರತದ ಚೈತನ್ಯಶಕ್ತಿ ವಿವೇಕಾ ನಂದ ಎಂಬ ಸ್ವರಚಿತ ಕವನ ವಾಚಿಸಿದರು. ಶಿವಮೊಗ್ಗ ಸೂಡಾದ ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ್, ವಿಶ್ರಾಂತ ಮುಖ್ಯ ಶಿಕ್ಷಕರಾದ ಮಾಯಿಲಪ್ಪ, ರಾಮಪ್ಪ ಮತ್ತು ಎನ್.ಎಂ.ಅನುಸೂಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಸಾಧಕರಾದ ಡಾ.ಎಚ್.ಎನ್.ಅಶೋಕ್, ಡಾ.ಮಧುಸೂದನ್, ಬಾಲ ಮುರುಳಿಕೃಷ್ಣ, ಕೊಳಗಾಮೆ ಕಾಂತರಾಜ್, ಹಡ್ಲುಗದ್ದೆ ಶಿವಕುಮಾರ, ಸಾವಯವ ಕೃಷಿಕ ಉಮೇಶ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಸಂಸ್ಥೆ ಉಪಾಧ್ಯಕ್ಷ ಎನ್.ಶ್ರೀಕಾಂತಶೆಟ್ಟಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ಸಾಬಣ್ಣ ಮಾದರ್ ಸ್ವಾಗತಿಸಿ, ವಾಸು ಪೂಜಾರಿ ಮತ್ತು ರಾಜೇಶ್ ಕಾರ್‍ಯಕ್ರಮ ನಿರೂಪಿಸಿ, ನಿರ್ದೇಶಕ ಬಿ.ನೀ.ವಿಶ್ವನಾಥ್ ವಂದಿಸಿದರು. 13 ಕೆಸಿಕೆಎಂ 6ಚಿಕ್ಕಮಗಳೂರು ತಾಲೂಕಿನ ಸಿರವಾಸೆಯ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ವಿನಯ್ ಗುರೂಜಿ ಉದ್ಘಾಟಿಸಿದರು.