ಸಾರಾಂಶ
ಮಾಗಡಿ: ತಾಲೂಕಿನ ರೈತರ ಸಮಸ್ಯೆಗಳನ್ನು ಪರಿಹರಿಸಲು ಹಲವು ಬಾರಿ ಮನವಿಯನ್ನು ಸಲ್ಲಿಸಿದರೂ ಕಡೆಗಣಿಸಲಾಗುತ್ತಿದೆ. ರೈತರ ಮನವಿ ಕಡೆಗಣಿಸುತ್ತಿರುವ ತಾಲೂಕು ಆಡಳಿತದ ಅಧಿಕಾರಿಗಳನ್ನು 3 ದಿನದೊಳಗೆ ಸಭೆ ಕರೆಯಬೇಕು. ತಹಸೀಲ್ದಾರರು ರೈತರ ಉಪಸ್ಥಿತಿಯಲ್ಲಿ ಸಭೆಯನ್ನು ಕರೆದು ಸಮಸ್ಯೆ ಬಗೆಹರಿಸಲು ಮುಂದಾಗದಿದ್ದರೆ ಬೃಹತ್ ರಸ್ತೆ ತಡೆ ಚಳವಳಿಯನ್ನು ನಡೆಸಬೇಕಾಗುತ್ತದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೆಡೆ ಬರ, ಇನ್ನೊಂದೆಡೆ ನೆರೆ, ಜೊತೆಗೆ ಒಂದಷ್ಟು ರೈತ ವಿರೋಧಿ ನೀತಿಗಳಿಂದಾಗಿ ರೈತರು ಅಕ್ಷರಶಃ ಹೈರಾಣಾಗಿದ್ದಾರೆ. ಜನರಿಗೆ ಅನ್ನ ನೀಡುವ ರೈತನ ಗೋಳು ಮಗಿಲು ಮುಟ್ಟುತ್ತಿದೆ. ತಾಲೂಕಿನಲ್ಲಿ ಹೈಟೆನ್ಷನ್ ವೈರ್ ಅಳವಡಿಸಿ ರೈತರಿಗೆ ಪರಿಹಾರ ನೀಡದಿರುವುದು, ಮಳಿಗೆಯವರು ರೈತರಿಗೆ ಬೆಳೆ ಔಷಧಿಗಳನ್ನು ನಿಖರವಾದ ಬೆಲೆಗೆ ಕೊಡುತ್ತಿಲ್ಲದಿರುವುದರ ವಿಚಾರವಾಗಿ ಕೃಷಿ ಇಲಾಖೆ ಮೌನ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಉಪ ನೋಂದಣಾಧಿಕಾರಿ ಕಚೇರಿ ಅಧಿಕಾರಿಗಳ ಸೇವೆ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದೆ. ಕೆಲವು ಕಡೆ ಅವೈಜ್ಞಾನಿಕವಾದ ಕೆಶಿಪ್ ರಸ್ತೆ ಕಾಮಗಾರಿ, ಗ್ರಾಮೀಣ ಭಾಗದ ರೈತರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆ ಸರಿಯಾಗಿ ಕಲ್ಪಿಸಿಲ್ಲ. ಕುಡಿಯುವ ನೀರಿನ ವ್ಯವಸ್ಥೆ, ಕಲುಷಿತ ನೀರು ಭಗವತಿ ಕೆರೆಗೆ ಹರಿಯುತ್ತಿದೆ. ಕೊಳಚೆ ನೀರನ್ನು ಕೆರೆಗೆ ಹರಿಸದಂತೆ ಪುರಸಭಾ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಜಾಣಕುರುಡು ಪ್ರದರ್ಶನ ಮಾಡುತ್ತಿದ್ದಾರೆ. ಇದರ ಬಗ್ಗೆ ತಹಸೀಲ್ದಾರರು ಸಭೆ ಕರೆಯದಿದ್ದರೆ ರಸ್ತೆ ತಡೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ತಾಲೂಕು ಯುವ ಘಟಕ ಅಧ್ಯಕ್ಷ ರವಿಕುಮಾರ್, ಶಿವಲಿಂಗಣ್ಣ, ಚನ್ನರಾಯಪ್ಪ, ಬುಡನ್ ಸಾಬ್, ಪಟೇಲ್ ಹನುಮಂತಯ್ಯ, ನಿಂಗಣ್ಣ ಗುಡ್ಡಳ್ಳಿ ರಾಮಣ್ಣ, ನಾರಾಯಣಪ್ಪ ರಾಮಚಂದ್ರಪ್ಪ, ಸಿದ್ದಪ್ಪ, ಮುನಿರಾಜು, ಚಿಕ್ಕಣ್ಣ, ನಾಗರಾಜ್, ಕಲೀಂ, ಬಶೀರ್, ಬೆಳಗೋಡಿ ಗಂಗಣ್ಣ, ಕಾಂತರಾಜು ಕೃಷ್ಣ, ಕರ್ಲಹಳ್ಳಿ ಶಿವಲಿಂಗಣ್ಣ ರಾಜಣ್ಣ, ನಾಗರಾಜು, ರಘು ಸೇರಿದಂತೆ ಇತರರು ಭಾಗವಹಿಸಿದ್ದರು. ಫೋಟೊ 23ಮಾಗಡಿ3:ಮಾಗಡಿಯಲ್ಲಿ ಕೆಂಪೇಗೌಡ ಪ್ರತಿಮೆ ಎದುರು ರೈತ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.