ರಾಮಮಂದಿರ ಮಾಡಿದ್ರೆ ಜವಾಬ್ದಾರಿ ಮುಗಿಯಲ್ಲ

| Published : May 29 2024, 01:01 AM IST

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿದರೆ ನಮ್ಮ ಕಾರ್ಯ ಮುಗಿಯಲಿಲ್ಲ. ಪ್ರತಿಯೊಬ್ಬರು ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕಾರ ಉಳಿಸಲು ಶ್ರಮಿಸಬೇಕು. ಈ ಮೂಲಕ ರಾಮರಾಜ್ಯ ನಿರ್ಮಾಣಕ್ಕೆ ಶ್ರಮಿಸಿದರೇ ಮಾತ್ರ ಹಿಂದೂಧರ್ಮ ವಿಶ್ವದಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯ ಎಂದು ಉಡುಪಿಯ ಪೇಜಾವರಮಠದ ವಿಶ್ವಪ್ರಸನ್ನತೀರ್ಥರು ನುಡಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿದರೆ ನಮ್ಮ ಕಾರ್ಯ ಮುಗಿಯಲಿಲ್ಲ. ಪ್ರತಿಯೊಬ್ಬರು ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕಾರ ಉಳಿಸಲು ಶ್ರಮಿಸಬೇಕು. ಈ ಮೂಲಕ ರಾಮರಾಜ್ಯ ನಿರ್ಮಾಣಕ್ಕೆ ಶ್ರಮಿಸಿದರೇ ಮಾತ್ರ ಹಿಂದೂಧರ್ಮ ವಿಶ್ವದಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯ ಎಂದು ಉಡುಪಿಯ ಪೇಜಾವರಮಠದ ವಿಶ್ವಪ್ರಸನ್ನತೀರ್ಥರು ನುಡಿದರು.

ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ 48 ದಿನಗಳ ಕಾಲ ಮಂಡಲಪೂಜೆ ನೆರವೇರಿಸಿದ ಹಿನ್ನೆಲೆಯಲ್ಲಿ ಮಂಗಳವಾರ ರಾಮದುರ್ಗದ ರಾಘವೇಂದ್ರಮಠದಲ್ಲಿ ಬ್ರಾಹ್ಮಣ ಸಮಾಜ ಮತ್ತು ಹಿಂದೂಪರ ಸಂಘಟನೆಗಳು ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಪೂಜ್ಯರು ಆಶೀರ್ವಚನ ನೀಡಿ ಮಾತನಾಡಿದ ಅವರು, ಹಿಂದೂಧರ್ಮ ಎಂಬ ಗರ್ಭಗುಡಿಯನ್ನು ರಕ್ಷಿಸಲು ವಿಶ್ವಹಿಂದೂ ಪರಿಷತ್, ಭಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳು ಒಂದಾಗಿ ಶ್ರಮಿಸಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಹಿಂದೂಧರ್ಮ ರಕ್ಷಣೆಗೆ ಮಂದಾಗಬೇಕು ಎಂದು ಕರೆ ನೀಡಿದರು.ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಅದು 500 ವರ್ಷಗಳ ನಂತರ ಶ್ರೀರಾಮಚಂದ್ರನ ಪ್ರತಿಷ್ಠಾಪಿಸುವ ಮೂಲಕ ಕನಸು ನನಸಾಗಿದೆ. ಮಂದಿರ ನಿರ್ಮಾಣ ಮಾಡಿದರೇ ಜವಾಬ್ದಾರಿ ಮುಗಿಯಲಿಲ್ಲ. ಮಂದಿರವನ್ನಾಗಿ ಉಳಿಸಬೇಕು. ಹಿಂದೂಗಳು ಹಿಂದೂಗಳಾಗಿ ಉಳಿಯಬೇಕು. ಇದಕ್ಕಾಗಿ ಮೂಲ ಸಂಸ್ಕೃತಿ ಬಗ್ಗೆ ಮತ್ತು ಹಿಂದುಗಳಾಗಿ ಉಳಿಯಲು ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು ಎಂದು ಸಲಹೆ ನೀಡಿದರು.ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ನೀತಿ ಶಿಕ್ಷಣದ ವ್ಯವಸ್ಥೆ ಇಲ್ಲದಂತಾಗಿದೆ. ಪರಿಣಾಮ ರಾಮ ರಾಜ್ಯವಾಗಬೇಕಾದರೇ ರಾಮ ಸಂಸ್ಕೃತಿ, ರಾಮಾಯಣದ ಕುರಿತು ಮಕ್ಕಳಿಗೆ ತಿಳಿಸುವ ಕೆಲಸ ಮನೆಯಿಂದ ಆರಂಭವಾಗಬೇಕು. ಮನೆಯಲ್ಲಿ ಮಕ್ಕಳಿಗೆ ನಾಮಕರಣದ ಪದ್ಧತಿ ಬದಲಾಗಬೇಕಿದೆ. ವೇದ, ಉಪನಿಷತ್ ಹಾಗೂ ರಾಮಾಯಣದಲ್ಲಿ ಬರುವ ದೇವರ ಹೆಸರನ್ನು ಇಡುವ ಮೂಲಕ ರಾಮರಾಜ್ಯದ ಕಲ್ಪನೆ ಮೂಡಿಸುವ ಕೆಲಸ ಮಾಡಿರಿ ಎಂದರು.ಕಾರ್ಯಕ್ರಮದಲ್ಲಿ ಅಯೋಧ್ಯೆಯಲ್ಲಿ ಕರಸೇವಕರಾಗಿ ಕಾರ್ಯನಿರ್ವಹಿಸಿದ ಜಿ.ಬಿ.ಮೋಡಕ, ಮಲ್ಲಿಕಾರ್ಜುನ ಭಾವಿಕಟ್ಟಿ, ರಮೇಶ ಪ್ರಭು ಅವರನ್ನು ಶ್ರೀಗಳು ಸನ್ಮಾನಿಸಿದರು. ಅಭಿನಂದನಾ ಸಮಿತಿ ಅಧ್ಯಕ್ಷರಾದ ಪ್ರಹ್ಲಾದ ಜೋಶಿ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಪ್ರಸಾದ ಕುಲಕರ್ಣಿ, ವ್ಯಾಸಾಚಾರ್ಯ ಕುಲಕರ್ಣಿ, ವೇದವತಿ ಕುಲಕರ್ಣಿ, ಆರ್. ಆರ್.ಕುಲಕರ್ಣಿ ಉಪಸ್ಥಿತರಿದ್ದರು. ಎಸ್.ಎಲ್.ಮಣ್ಣೂರು ನಿರೂಪಿಸಿದರು, ಪವನ ದೇಶಪಾಂಡೆ ವಂದಿಸಿದರು.