ಯಾವುದೇ ಧಾರ್ಮಿಕ ಕ್ಷೇತ್ರಗಳು ಬೆಳೆದರೆ, ಪ್ರಸಿದ್ಧಿಯಾದರೆ ಸುತ್ತಮುತ್ತಲಿನ ಜನರಿಗೆ ಒಳಿತಾಗುತ್ತದೆ. ಕ್ಷೇತ್ರಕ್ಕೆ ಬಂದು ಪ್ರಾರ್ಥಿಸಿದವರಿಗೆ ಪ್ರಯೋಜನವಾಗುತ್ತದೆ.
ಹೂತ್ಕಳದ ಧನ್ವಂತರಿ ದೇವಸ್ಥಾನದಲ್ಲಿ ಶ್ರೀಗಳ ಆಶೀರ್ವಚನ
ಕನ್ನಡಪ್ರಭ ವಾರ್ತೆ ಭಟ್ಕಳಯಾವುದೇ ಧಾರ್ಮಿಕ ಕ್ಷೇತ್ರಗಳು ಬೆಳೆದರೆ, ಪ್ರಸಿದ್ಧಿಯಾದರೆ ಸುತ್ತಮುತ್ತಲಿನ ಜನರಿಗೆ ಒಳಿತಾಗುತ್ತದೆ. ಕ್ಷೇತ್ರಕ್ಕೆ ಬಂದು ಪ್ರಾರ್ಥಿಸಿದವರಿಗೆ ಪ್ರಯೋಜನವಾಗುತ್ತದೆ. ಅಂತಹ ಒಳಿತಾದವರಿಂದಲೇ ಈ ಕ್ಷೇತ್ರ ಬೆಳೆಯುತ್ತದೆ, ಕ್ಷೇತ್ರಕ್ಕೆ ಸಹಾಯವೂ ಆಗಲಿದೆ ಎಂದು ಸಿದ್ದಾಪುರದ ಶಿರಳಗಿಯ ಚೈತನ್ಯ ಶ್ರೀರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಹೇಳಿದರು.
ಮಾರುಕೇರಿಯ ಹೂತ್ಕಳದ ಶ್ರೀ ಧನ್ವಂತರಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಕೃತಕೋಟಿ ಶ್ರೀಧನ್ವಂತರಿ ಜಪ ಸಾಂಗತಾ ಹೋಮದ ಪೂರ್ಣಾಹುತಿಯ ನಂತರ ಏರ್ಪಡಿಸಲಾಗಿದ್ದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.ಒಂದು ಕಾಲದಲ್ಲಿ ಊರಿನ ಭಕ್ತರೇ ಬಾರದಿದ್ದ ದೇವಸ್ಥಾನ ಇಂದು ಬಹುವಾಗಿ ಪ್ರಸಿದ್ಧಿಯಾಗಿದೆ, ಮುಂದೊಂದು ದಿನ ಇದು ರಾಷ್ಡ್ರವ್ಯಾಪಿ ತನ್ನ ಪ್ರಸಿದ್ಧಿಯನ್ನು ಪಸರಿಲಿದೆ. ಕ್ಷೇತ್ರದಲ್ಲಿ ನೆಲೆಸಿರುವ ಆದಿಧನ್ವಂತರಿ ದೇವರು ಸರ್ವರೋಗ ನಿವಾರಕನಾಗಿದ್ದು, ಕ್ಷೇತ್ರವನ್ನು ಭಕ್ತರು ಹುಡುಕಿಕೊಂಡು ಬರುತ್ತಿದ್ದಾರೆ. ಈ ಕ್ಷೇತ್ರದ ಅರ್ಚಕರು ಅತ್ಯಂತ ಸಾತ್ವಿಕರು ಹಾಗೂ ಶ್ರೀ ದೇವರ ಅರ್ಚನೆಯನ್ನು ಮಾಡುವ ರೀತಿ, ಶ್ರದ್ಧೆಯು ಕ್ಷೇತ್ರವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದ ಶ್ರೀಗಳು ಕ್ಷೇತ್ರದಲ್ಲಿ ನಡೆದ ಹೋಮ, ಹವನಗಳು ಅತ್ಯಂತ ಶಾಸ್ತ್ರಸಮ್ಮತವಾಗಿ ನಡೆಯುತ್ತಿದ್ದು ಶ್ರೀ ದೇವರು ಪ್ರಸನ್ನತೆಯಿಂದ ಸ್ವೀಕರಿಸಿದ್ದಾನೆ ಎನ್ನುವುದು ಇಲ್ಲಿನ ವಾತಾವರಣದಿಂದಲೇ ತಿಳಿದು ಬರುತ್ತದೆ. ಇಲ್ಲಿನ ವೈದಿಕ ಪರಿಷತ್ ಮಾಡಿದ ಕಾರ್ಯ ಕೂಡಾ ಶ್ಲಾಘನೀಯವಾಗಿದೆ ಎಂದು ಅವರ ಕಾರ್ಯವನ್ನು ಶ್ಲಾಘಿಸಿದರು.ಆಯುರ್ವೇದ ವೈದ್ಯ ಮಕ್ಕಿದೇವಸ್ಥಾನದ ಡಾ. ಬಾಲಚಂದ್ರ ಭಟ್ಟ ಅವರನ್ನು ಶ್ರೀಗಳು ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ, ಆಯುರ್ವೇದಲ್ಲಿ ಆರೋಗ್ಯದ ಕುರಿತು ಏನು ಹೇಳುತ್ತದೆ ಎನ್ನುವುದನ್ನು ಅತ್ಯಂತ ಸರಳವಾದ ರೀತಿಯಲ್ಲಿ ವಿವರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಹಾಗೂ ದೇವಿಮನೆ ಮೊಕ್ತೇಸರ ಉಮೇಶ ಹೆಗಡೆ ಸ್ವಾಗತಿಸಿದರು. ಗಣೇಶ ಹೆಬ್ಬಾರ್ ಮೂಡ್ಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಾಯಕ ಭಟ್ಟ ತೆಕ್ಕಿನಗದ್ದೆ ಹಾಗೂ ಅನಂತ ಹೆಬ್ಬಾರ್ ಕೋಣಾರ ನಿರೂಪಿಸಿದರು. ಶ್ರೀ ಧನ್ವಂತರಿ ಕ್ಷೇತ್ರದ ಪ್ರಧಾನ ಅರ್ಚಕ ಶಂಕರ ಭಟ್ಟ ವಂದಿಸಿದರು.