ಸಾರಾಂಶ
ರಾಮನಗರ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಅಸ್ಥಿಪಂಜರ ದೊರೆಯದಿದ್ದರೆ ಅನಾಮಿಕ ವ್ಯಕ್ತಿ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರಾರು ಮೃತದೇಹಗಳನ್ನು ನನ್ನಿಂದ ಬಲವಂತವಾಗಿ ಹೂಳಿಸಲಾಗಿದೆ ಎಂದು ಅನಾಮಿಕ ವ್ಯಕ್ತಿ ದೂರು ನೀಡಿದ ಹಿನ್ನೆಲೆಯಲ್ಲಿ ಎಸ್‌ಐಟಿ ರಚಿಸಿ ತನಿಖೆ ನಡೆಸಲಾಗುತ್ತಿದೆ. ಆತ ತೋರಿಸಿದ ಕಡೆಯೆಲ್ಲಾ ಗುಂಡಿ ತೋಡಲಾಗುತ್ತಿದೆ. ಆದರೆ, ಇದುವರೆಗೆ ಅಸ್ಥಿಪಂಜರ ದೊರೆತಿಲ್ಲ. ಮುಂದೆಯೂ ಅಸ್ಥಿಪಂಜರ ದೊರೆಯದಿದ್ದರೆ ಆತನ ವಿರುದ್ಧ ಕ್ರಮ ವಹಿಸಲಾಗುವುದು ಎಂದರು.ಧರ್ಮಸ್ಥಳ ಪ್ರಕರಣವನ್ನು ರಾಜಕೀಯಗೊಳಿಸಬಾರದು. ಬಿಜೆಪಿ ಪಕ್ಷದವರಿಗಿಂತಲೂ ಹೆಚ್ಚಾಗಿ ಕಾಂಗ್ರೆಸ್ ಪಕ್ಷದವರು ಧರ್ಮಸ್ಥಳಕ್ಕೆ ಹೋಗುತ್ತಾರೆ. 2012ರಲ್ಲಿ ಸೌಜನ್ಯ ಅತ್ಯಾಚಾರ, ಕೊಲೆ ನಡೆದ ನಂತರ ಕೆಲ ಯೂಟ್ಯೂಬ್ ವಾಹಿನಿಗಳಲ್ಲಿ ಹಾಗೂ ಸಾರ್ವಜನಿಕವಾಗಿ ಕೆಲ ಆರೋಪಗಳು ಕೇಳಿಬಂದವು. ಇತ್ತೀಚೆಗೆ ಮುಸುಕುಧಾರಿ ವ್ಯಕ್ತಿ ನೂರಾರು ಮೃತದೇಹಗಳನ್ನು ಹೂತಿರುವುದಾಗಿ ಕೋರ್ಟ್‌ಗೆ ಹೇಳಿಕೆ ನೀಡಿದ್ದನು. ಈ ಹಿನ್ನೆಲೆಯಲ್ಲಿ ಸತ್ಯ ತಿಳಿಯುವುದಕ್ಕೆ ಎಸ್‌ಐಟಿ ರಚಿಸಲಾಗಿದೆ. ಇದೀಗ ತನಿಖೆ ನಡೆಯುತ್ತಿದ್ದು ಪೂರ್ಣಗೊಂಡ ನಂತರ ಸತ್ಯ ಹೊರಬರಲಿದೆ ಎಂದು ಹೇಳಿದರು.
ಧರ್ಮಸ್ಥಳದಲ್ಲಿ ಒಟ್ಟು 17 ಕಡೆ ಗುಂಡಿ ತೆಗೆಯಲಾಗಿದೆ. ಯಾವುದೇ ಅಸ್ತಿಪಂಜರ ಇದುವರೆಗೂ ಕಂಡುಬಂದಿಲ್ಲ. ಆದಾಗ್ಯೂ ಆತ ತೋರಿಸಿದ ಕಡೆಯಲ್ಲಾ ಅಗೆಯಲಾಗುತ್ತಿದೆ. ಒಂದು ವೇಳೆ ಅಸ್ಥಿಪಂಜರ ದೊರೆಯದಿದ್ದರೆ ಅನಾಮಿಕ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸದನದಲ್ಲೂ ಈ ವಿಚಾರ ಪ್ರಸ್ತಾಪವಾಗಿದ್ದು, ಸೋಮವಾರ ಗೃಹಸಚಿವರು ಈ ವಿಚಾರವಾಗಿ ಸದನಕ್ಕೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.ದೇವಾಲಯ ಆವರಣದಲ್ಲಿ ಪ್ಲಾಸ್ಟಿಕ್ ನಿಷೇಧ:
ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ದೇವಾಲಯಗಳ ಆವರಣದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಹೊರತುಪಡಿಸಿ ಇನ್ನುಳಿದ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ.ದೇವಾಲಯದ ಆವರಣದಲ್ಲಿ ಮಾತ್ರ ಇಲಾಖೆ ಪ್ಲಾಸ್ಟಿಕ್ ನಿಷೇಧಿಸಿದೆ. ಆದರೆ, ದೇವಾಲಯದ ಹೊರಗೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲಿ ಸರ್ಕಾರ ಇಲ್ಲವೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಕೊಡಗು ಜಿಲ್ಲೆಯಲ್ಲಿ ಜಿಲ್ಲಾಡಳಿತ ಪ್ಲಾಸ್ಟಿಕ್ ನಿಷೇಧಿಸಿದೆ. ಅಂತೆಯೇ ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪ್ಲಾಸ್ಟಿಕ್ ನಿಷೇಧಿಸಿದೆ ಎಂದರು.
ಸ್ವಚ್ಛತೆ ಕಾಪಾಡುವುದು ಹಾಗೂ ಪರಿಸರಕ್ಕೆ ಹಾನಿಯಾಗುವುದನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಪರಿಸರಕ್ಕೆ ಮಾರಕವಾಗದ ಕ್ಯಾರಿ ಬ್ಯಾಗ್‌ಗಳನ್ನು ಹಾಗೂ ವಸ್ತುಗಳನ್ನು ಬಳಕೆ ಮಾಡುವಂತೆ ಸೂಚಿಸಲಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ದೇವಾಲಯಗಳಿಗೆ ಮಾತ್ರ ನಿಷೇಧ ಅನ್ವಯವಾಗಲಿದೆ. ವ್ಯಾಪ್ತಿಗೆ ಬಾರದ ದೇವಾಲಯಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿಯೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ಕ್ರಾಂತಿ ಎಂಬುದು ಭ್ರಾಂತಿ:
ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಕ್ರಾಂತಿ ನಡೆಯಲಿದೆ ಎಂಬುದೆಲ್ಲಾ ಭ್ರಾಂತಿ. ಐದು ವರ್ಷ ನಮ್ಮ ಸರ್ಕಾರವೇ ಅಧಿಕಾರದಲ್ಲಿರಲಿದೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಒಂದು ವೇಳೆ ಯಾವುದೇ ಬದಲಾವಣೆ ಆಗಬೇಕಿದ್ದರೆ ನಮ್ಮ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ರಾಮಲಿಂಗಾರೆಡ್ಡಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಶಾಸಕ ಇಕ್ಬಾಲ್ ಹುಸೇನ್ ,ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್ ಇತರರಿದ್ದರು.
15ಕೆಆರ್ ಎಂಎನ್ 7.ಜೆಪಿಜಿಸಚಿವ ರಾಮಲಿಂಗಾರೆಡ್ಡಿ