ಚುನಾವಣೆ ಸಂಬಂಧಿಸಿದ ದೂರುಗಳಿದ್ದರೆ ಗಮನಕ್ಕೆ ತನ್ನಿ

| Published : Apr 24 2024, 02:26 AM IST

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀದರ್‌ ಲೋಕಸಭಾ ಸಾರ್ವತ್ರಿಕ ಚುನಾವಣಾ ಕಣದಲ್ಲಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಎಜೆಂಟರಿಗೆ ಕರೆದ ಸಭೆ ಮಂಗಳವಾರ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್‌

ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಎಜೆಂಟರು ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೆ ಚುನಾವಣಾ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವಿಕ್ಷಕರ ಗಮನಕ್ಕೆ ತರಬೇಕೆಂದು ಚುನಾವಣಾ ಸಾಮಾನ್ಯ ವೀಕ್ಷಕರಾದ ದೀಪಂಕರ್ ಮೋಹಪಾತ್ರ ಹೇಳಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀದರ್‌ ಲೋಕಸಭಾ ಸಾರ್ವತ್ರಿಕ ಚುನಾವಣಾ ಕಣದಲ್ಲಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಎಜೆಂಟರಿಗೆ ಕರೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಬೀದರ್‌ ಲೋಕಸಭಾ ಸಾರ್ವತ್ರಿಕ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನೋಡಿಕೊಳ್ಳಬೇಕು ಮತ್ತು ಏ.25 ಮತ್ತು 30ಹಾಗೂ ಮೇ.4ರಂದು ತಮ್ಮ ಪಕ್ಷದ ಖರ್ಚು ವೆಚ್ಚದ ಮಾಹಿತಿಯನ್ನು ಚುನಾವಣಾ ವೆಚ್ಚ ವೀಕ್ಷಕರಿಗೆ ನೀಡಬೇಕು ಎಂದರು.

ಬೀದರ್‌ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು 1,528 ಪೋಲಿಂಗ್ ಸ್ಟೇಷನಗಳಲ್ಲಿ 328 ಕ್ರಿಟಿಕಲ್ ಪೋಲಿಂಗ್ ಸ್ಟೇಷನಗಳಿವೆ. ಇವುಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ. ರಾಜಕೀಯ ಪಕ್ಷಗಳ ಸಭೆ, ಸಮಾರಂಭ ಹಾಗೂ ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿಯಮ ಪಾಲಿಸಬೇಕು ಎಂದು ಹೇಳಿದರು.

85 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ತುರ್ತು ಅಗತ್ಯ ಸೇವೆ ಹಾಗೂ ಚುನಾವಣಾ ಕರ್ತವ್ಯದ ಮೇಲೆ ಇರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಮತದಾನ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಮತದಾನದಿಂದ ಯಾರು ಹೊರ ಉಳಿಯಬಾರದು ಎಂಬುದು ಚುನಾವಣಾ ಆಯೋಗದ ಉದ್ದೇಶವಾಗಿದೆ. ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಶಾಂತಿ ಹಾಗೂ ಸುವ್ಯವಸ್ಥಿತವಾಗಿ ನಡೆಯುವಂತೆ ಎಲ್ಲರೂ ನೋಡಿಕೊಳ್ಳಬೇಕೆಂದು ಹೇಳಿದರು.

ಸಭೆಯಲ್ಲಿ ಚುನಾವಣಾ ವೆಚ್ಚ ವೀಕ್ಷಕ ಎಸ್. ಈಶ್ವರ, ಪೊಲೀಸ್ ವೀಕ್ಷಕರಾದ ಜೆ.ಎಸ್.ರಜಪೂತ, ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಚುನಾವಣಾ ತಹಸೀಲ್ದಾರ್‌ ಅಣ್ಣಾರಾವ್ ಪಾಟೀಲ, ಡಿವೈಎಸ್ಪಿ ಶಿವನಗೌಡ ಪಾಟೀಲ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಎ) ಪಕ್ಷದ ಅಭ್ಯರ್ಥಿ ಮಹೇಶ ಗೋರನಾಳಕರ್, ಪಕ್ಷೇತರ ಅಭ್ಯರ್ಥಿಗಳಾದ ದಿಲಿಪ ಕಾಡವಾದ, ಬಲಭೀಮ ಉಣ್ಣೆ, ರಾಮವಿಲಾಸ ರಾಮುಲಾಲಜಿ ನಾವಂದರ, ರೌಫ ಅಬ್ದುಲ ಗನಿ ಸೇರಿ ಇತರರಿದ್ದರು.