ಫಲಾನುಭವಿಗಳ ಆಕ್ಷೇಪಣೆಗಳಿದ್ದರೆ ಮತ್ತೊಮ್ಮೆ ಪರಿಶೀಲನೆ

| Published : Mar 27 2025, 01:09 AM IST

ಫಲಾನುಭವಿಗಳ ಆಕ್ಷೇಪಣೆಗಳಿದ್ದರೆ ಮತ್ತೊಮ್ಮೆ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಅರ್ಜಿದಾರ ಬಸವರಾಜ ನವಲಗುಂದ ನೊಟೀಸ್ ಬೋರ್ಡ ಮೇಲೆ ಹಚ್ಚಿದ ಫಲಾನುಭವಿಗಳ ಹೆಸರಿನ ಮುಂದೆ ಅವರ ಸಂಪೂರ್ಣ ವಿಳಾಸ ಹಾಗೂ ಯಾವ ವಾರ್ಡಿನವರು ಎನ್ನುವ ವಿವರವಿಲ್ಲ. ಹೀಗಾಗಿ ಅವರು ಅರ್ಹ ಫಲಾನುಭವಿಗಳು ಹೌದೋ ಅಥವಾ ಅಲ್ಲ ಎನ್ನುವುದು ಗೊತ್ತಾಗುವುದಿಲ್ಲ

ಮುಂಡರಗಿ: ಕಳೆದ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪುರಸಭೆಯ ಆಶ್ರಯ ನಿವೇಶನಗಳ ಹಂಚಿಕೆ ಪ್ರಕ್ರೀಯೆ ಇದೀಗ ಕಾಲ ಕೂಡಿ ಬರುವಂತೆ ಮಾಡಿದ್ದು, 1 ಸಾವಿರ ನಿವೇಶನಗಳಲ್ಲಿ ಸದ್ಯಕ್ಕೆ 192 ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರ ಹೆಸರು ಸಹಿತ ಪಟ್ಟಿಯನ್ನು ಪುರಸಭೆ ನೊಟೀಸ್ ಬೋರ್ಡ್ ಹಾಗೂ ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಪಾರದರ್ಶಕವಾಗಿ ಫಲಾನುಭವಿಗಳ ಆಯ್ಕೆ ಪ್ರಕ್ರೀಯೆ ಮಾಡುತ್ತಿದ್ದು, 192 ನಿವೇಶನ ಆಯ್ಕೆ ಮಾಡಿದ್ದರಲ್ಲಿಯೂ ಆಕ್ಷೇಪಣೆಗಳಿದ್ದರೆ ಮತ್ತೊಮ್ಮೆ ಪರಿಶೀಲಿಸೋಣ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಇತ್ತೀಚೆಗೆ ತಹಸೀಲ್ದಾರ ಕಚೇರಿಯ ಸಭಾಭವನದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅರ್ಜಿದಾರ ಬಸವರಾಜ ನವಲಗುಂದ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಅರ್ಜಿದಾರ ಬಸವರಾಜ ನವಲಗುಂದ ನೊಟೀಸ್ ಬೋರ್ಡ ಮೇಲೆ ಹಚ್ಚಿದ ಫಲಾನುಭವಿಗಳ ಹೆಸರಿನ ಮುಂದೆ ಅವರ ಸಂಪೂರ್ಣ ವಿಳಾಸ ಹಾಗೂ ಯಾವ ವಾರ್ಡಿನವರು ಎನ್ನುವ ವಿವರವಿಲ್ಲ. ಹೀಗಾಗಿ ಅವರು ಅರ್ಹ ಫಲಾನುಭವಿಗಳು ಹೌದೋ ಅಥವಾ ಅಲ್ಲ ಎನ್ನುವುದು ಗೊತ್ತಾಗುವುದಿಲ್ಲ ಎಂದು ಶಾಸಕರಿಗೆ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಡಿವೆಪ್ಪ ಛಲಾದಿಯೂ ಧ್ವನಿಗೂಡಿಸಿ, ಈಗಾಗಲೇ ತಾವು ಅಂತಿಮಗೊಳಿಸಿದ 192ರಲ್ಲಿ ಅನೇಕರು ಮನೆ,ನಿವೇಶನ ಇರುವವರು ಹಾಗೂ ಪರಸ್ಥಳದಲ್ಲಿ ಮನೆ, ಆಸ್ತಿ ಇರುವವರೂ ಇದ್ದಾರೆ ಎಂದು ಆಕ್ಷೇಪ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಶಾಸಕ ಲಮಾಣಿ ನಾನು ಅತ್ಯಂತ ಪಾರದರ್ಶಕವಾಗಿ ಮಾಡುತ್ತಿದ್ದು, ಬೇರೆ ಗ್ರಾಮದವರನ್ನು ಈಗಾಗಲೇ ತೆಗೆದು ಹಾಕಿದ್ದು, ಇನ್ನೂ ಇದ್ದರೆ ತಾವು ದಾಖಲೆ ಸಹಿತ ತಕರಾರು ಕೊಡಿ ಅವುಗಳನ್ನು ತೆಗೆದು ಹಾಕುವೆ ಎಂದರು.

ಬಿದರಹಳ್ಳಿ ನವಗ್ರಾಮದಲ್ಲಿ ಪುನರ್ವಸತಿ ಯೋಜನೆಯಡಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ, ನವ ಗ್ರಾಮದಲ್ಲಿ ಸ್ಮಶಾನದ ವ್ಯವಸ್ಥೆ ಇಲ್ಲ ಎಂದು ಗ್ರಾಮದ ಜನತೆ ವಿವರಿಸಿದರು. ನವಗ್ರಾಮದಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಅಧಿಕಾರಿಗಳ ಕರ್ತವ್ಯ ಎಂದ ಶಾಸಕರು ನೀರಾವರಿ ಇಲಾಖೆಯ ಪುನರ್ ವಸತಿ, ಪುನರ್ ನಿರ್ಮಾಣ ವಿಭಾಗದ ಅಧಿಕಾರಿ ತಿಳಿಸಿ ಅಲ್ಲಿನ ಸ್ಮಶಾನದ ನಿವೇಶನ ಬೇರೆಯವರು ಮನೆ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆನ್ನುವ ಮಾತುಗಳು ಕೇಳಿ ಬಂದಿದ್ದು, ತಕ್ಷಣವೇ ಪರಿಶೀಲನೆ ನಡೆಸಬೇಕೆಂದು ತಿಳಿಸಿದರು.

ಪಟ್ಟಣದ ಕೋಟೆ ಭಾಗದಲ್ಲಿ ತಮ್ಮ ಮನೆಯ ಮುಂದಿನ ಕಂಪೌಂಡ್ ಗೋಡೆಯನ್ನು ಪುರಸಭೆಯವರು ವಿನಾಕಾರಣ ಕೆಡವಿಹಾಕಿದ್ದಾರೆ ಎಂದು ಚಿಕ್ಕಣ್ಣವರ ಎನ್ನುವ ಮಹಿಳೆಯೊಬ್ಬರು ಶಾಸಕರಿಗೆ ದೂರಿದರು. ಈ ಕುರಿತು ಶಾಸಕರು ಪುರಸಭೆ ಮುಖ್ಯಾಧಿಕಾರಿಯನ್ನು ಕೇಳಿದಾಗ ತಾವು ನಿಯಮಾವಳಿ ಪ್ರಕಾರ ಮಾಡಿರುವುದಾಗಿ ತಿಳಿಸಿದರು. ತಹಸೀಲ್ದಾರ್‌ ಹಾಗೂ ಪಿಎಸ್ಐ ಸ್ಥಳಕ್ಕೆ ತೆರಳಿ ಮತ್ತೊಮ್ಮೆ ಪರಿಶೀಲಿಸಲು ಶಾಸಕರು ತಿಳಿಸಿದರು.

ಬೀಡನಾಳ, ಹಮ್ಮಿಗಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಒಟ್ಟು 54ಕ್ಕೂ ಹೆಚ್ಚು ಸಾರ್ವಜನಿಕ ಅರ್ಜಿಗಳು ಬಂದಿದ್ದವು. ಸಭೆಯಲ್ಲಿ ತಹಸೀಲ್ದಾರ ಎರ್ರೀಸ್ವಾಮಿ ಪಿ ಎಸ್. ತಾಲೂಕು ಕಾರ್ಯನಿರ್ವಾಹ ಅಧಿಕಾರಿ ವಿಶ್ವನಾಥ ಹೊಸಮನಿ, ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಟಾಚಾರದ ಸಭೆ:ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗಬೇಕಾಗಿದ್ದ ಸಾರ್ವಜನಿಕರ ಕುಂದುಕೊರತೆಗಳ ಸಭೆ ಸಂಜೆ 4.30ರ ನಂತರ ಪ್ರಾರಂಭವಾಯಿತು. ಸಭೆ ನಡೆಸಲು ಯಾವುದೇ ಧ್ವನಿ ವರ್ಧಕದ ವ್ಯವಸ್ಥೆ ಮಾಡಿರದ ಕಾರಣ ಅರ್ಜಿದಾರರು ಹೇಳುವ ಸಮಸ್ಯೆ ಹಾಗೂ ಅದಕ್ಕೆ ಶಾಸಕರು ನೀಡುವ ಪರಿಹಾರ ಕೇಳದಂತಾಗಿತ್ತು. ಸಭೆ ನಡೆಸುವ ಸ್ಥಳ ಅತ್ಯಂತ ಕಿರಿದಾಗಿದ್ದರಿಂದ ನೂಕುನುಗ್ಗಲು ಉಂಟಾದಂತೆ ಕಂಡು ಬಂದಿತು. ಸಭೆಯಲ್ಲಿ 2-3 ಬಾರಿ ವಿದ್ಯುತ್ ಕಡಿತವಾಗಿದ್ದು, ಜಂಡ್ರೆಟರ್ ವ್ಯವಸ್ಥೆ ಇರದೇ ಇರುವುದರಿಂದ ಕಿಟಕಿ ತೆರೆಯುವುದು ಹಾಗೂ ಮೊಬೈಲ್ ಬೆಳಕನ್ನು ಹಾಕಿದ್ದು ಕಂಡು ಬಂದಿತು.