ಕಾಮಗಾರಿ ಗುಣಮಟ್ಟದ ಬಗ್ಗೆ ದೂರು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ: ಚಲುವರಾಯಸ್ವಾಮಿ

| Published : Oct 08 2024, 01:01 AM IST

ಕಾಮಗಾರಿ ಗುಣಮಟ್ಟದ ಬಗ್ಗೆ ದೂರು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದಿಂದ ಅಭಿವೃದ್ಧಿಯಾಗುವ ರಸ್ತೆ, ಕೆರೆ, ಶಾಲೆ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ಧಿ ಕೆಲಸಗಳ ಬಗ್ಗೆ ಆಯಾ ಗ್ರಾಮಸ್ಥರು, ಮುಖಂಡರು ಹಾಗೂ ಅಧಿಕಾರಿಗಳು ಎಚ್ಚರವಹಿಸಬೇಕು. ಇಲ್ಲದಿದ್ದರೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವುದು ಕಷ್ಟವಾಗುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದರೆ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸುವ ಜೊತೆಗೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಎಚ್ಚರಿಸಿದರು.

ತಾಲೂಕಿನ ದೊಡ್ಡಜಟಕ ಗ್ರಾಮದಲ್ಲಿ 1 ಕೋಟಿ ರು. ವೆಚ್ಚದಲ್ಲಿ ಸುಮಾರು 32 ಹೆಕ್ಟೇರ್ ಪ್ರದೇಶದ ಕೆರೆ ಕೋಡಿ ಮತ್ತು ಏರಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸರ್ಕಾರದಿಂದ ಅಭಿವೃದ್ಧಿಯಾಗುವ ರಸ್ತೆ, ಕೆರೆ, ಶಾಲೆ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ಧಿ ಕೆಲಸಗಳ ಬಗ್ಗೆ ಆಯಾ ಗ್ರಾಮಸ್ಥರು, ಮುಖಂಡರು ಹಾಗೂ ಅಧಿಕಾರಿಗಳು ಎಚ್ಚರವಹಿಸಬೇಕು. ಇಲ್ಲದಿದ್ದರೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವುದು ಕಷ್ಟವಾಗುತ್ತದೆ ಎಂದರು.

ಕಳೆದ ಎರಡು ವರ್ಷಗಳ ಹಿಂದೆ ಮಳೆಯಿಂದ ಕೆರೆ ಕೋಡಿ ಹೊಡೆದು ಹೊಗಿತ್ತು. ಅಲ್ಲದೇ, ಕೆರೆಯಲ್ಲಿ ನೀರು ಸಮರ್ಪಕವಾಗಿ ನಿಲ್ಲುತ್ತಿರಲಿಲ್ಲ. ಇದರಿಂದಾಗಿ ಕೋಡಿ ಬದಲಿಗೆ ಹೊಸದಾಗಿ ಕೆರೆ ಕೋಡಿಯನ್ನು ನಿರ್ಮಾಣ ಮಾಡಬೇಕು. ಜೊತೆಗೆ ಕೋಡಿಹಳ್ಳದ ರಸ್ತೆಗೆ ಜನರ ಓಡಾಟಕ್ಕೆ ಮತ್ತು ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆಯನ್ನು ನಿರ್ಮಾಣ ಮಾಡಬೇಕು. ವಾಹನ ಸವಾರರ ಸುರಕ್ಷತೆಗಾಗಿ ಸಂರಕ್ಷಣಾ ತಡೆಗೋಡೆ ನಿರ್ಮಿಸಬೇಕು ಎಂದರು.

ದೊಡ್ಡಜಟಕ ಗ್ರಾಮದಿಂದ ಕುಪ್ಪೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ನಿರ್ಮಿಸಿರುವ ರಸ್ತೆಯು ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ಕೇವಲ ಮೂರ್ನಾಲ್ಕು ತಿಂಗಳಲ್ಲಿ ಕಿತ್ತು ಹೋಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ರಮವಹಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯ ಜನರು ಸಚಿವರಿಗೆ ದೂರು ಹೇಳಿದರು.

ತಕ್ಷಣ ಸಂಬಂಧಿಸಿದ ಅಧಿಕಾರಿಗೆ ದೂರವಾಣಿ ಕರೆ ಮಾಡಿದ ಸಚಿವರು ಕಾಮಗಾರಿ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದುಕೊಂಡರು. ಯಾವುದೇ ಕಾಮಗಾರಿಯಾಗಲಿ ದೀರ್ಘಕಾಲ ಬಾಳಿಕೆ ಬರುವಂತೆ ಗುಣಮಟ್ಟದಿಂದ ಕೂಡಿರಬೇಕು. ಇಲ್ಲದಿದ್ದರೆ ಕಾಮಗಾರಿಯ ಮೊತ್ತವನ್ನು ಹಿಂಪಡೆಯುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಲೆಕೊಪ್ಪ ದಿನೇಶ್, ಸಣ್ಣ ನೀರಾವರಿ ಇಲಾಖೆಯ ಇಇ ಶಂಕರ್, ಎಇಇ ನಿರ್ಮಲೇಶ್, ಎಇ ವಿಜಯದರ್ಶನ್, ಗುತ್ತಿಗೆದಾರ ತಿಬ್ಬನಹಳ್ಳಿ ರಮೇಶ್, ಮುಖಂಡ ಸಂಪತ್‌ಕುಮಾರ್ ಸೇರಿದಂತೆ ಗ್ರಾಮಸ್ಥರು ಇದ್ದರು.