ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ಹಲವು ಕಾನೂನು, ಕಾಯ್ದೆಗಳು ಜಾರಿಯಲ್ಲಿವೆ. ಇವುಗಳ ಬಗ್ಗೆ ಬಹುತೇಕರಿಗೆ ಅರಿವು ಇಲ್ಲ. ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಸೇರಿದಂತೆ ಯಾವುದೇ ಸಮಸ್ಯೆಗಳು ಎದುರಾದಾಗ ತಾಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಸಹಾಯವಾಣಿ, 1091 ಪೊಲೀಸ್ ಮಹಿಳಾ ಠಾಣೆಗೆ ದೂರು ನೀಡಿ ರಕ್ಷಣೆ ಪಡೆಯಬಹದು.

ಕನ್ನಡಪ್ರಭ ವಾರ್ತೆ ಮದ್ದೂರು

ಕಾರ್ಖಾನೆಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರು ದೌರ್ಜನ್ಯಕ್ಕೆ ಒಗಳಾದರೆ ಕಾನೂನು ಸೇವಾ ಸಮಿತಿಯಿಂದ ನೆರವು ಪಡೆದು ದೂರು ದಾಖಲಿಸುವಂತೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಸ್.ಸಿ.ನಳಿನ ಸಲಹೆ ನೀಡಿದರು.

ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕರೂನ್ ಇಂಡಿಯಾ ಪ್ರವೈಟ್ ಲಿ. ಕಾರ್ಖಾನೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಕಾರ್ಮಿಕ ಇಲಾಖೆ ಸಹಯೋಗದಲ್ಲಿ ನಡೆದ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಕಾಯ್ದೆ, ಮಹಿಳೆಯರ ದೌರ್ಜನ್ಯ ನಿರ್ಮೂಲನೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿದರು.

ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ಹಲವು ಕಾನೂನು, ಕಾಯ್ದೆಗಳು ಜಾರಿಯಲ್ಲಿವೆ. ಇವುಗಳ ಬಗ್ಗೆ ಬಹುತೇಕರಿಗೆ ಅರಿವು ಇಲ್ಲ. ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಸೇರಿದಂತೆ ಯಾವುದೇ ಸಮಸ್ಯೆಗಳು ಎದುರಾದಾಗ ತಾಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಸಹಾಯವಾಣಿ, 1091 ಪೊಲೀಸ್ ಮಹಿಳಾ ಠಾಣೆಗೆ ದೂರು ನೀಡಿ ರಕ್ಷಣೆ ಪಡೆಯಬಹದು ಎಂದರು.

ಮಹಿಳಾ ಕಾರ್ಮಿಕರಿಗೆ ಬೇಕಾದ ಸೌಲಭ್ಯಗಳು, ಭದ್ರತೆ, ರಕ್ಷಣೆ ನೀಡಬೇಕಾದ ಜವಾಬ್ದಾರಿ ಕಾರ್ಖಾನೆ ಮಾಲೀಕರ ಮೇಲಿದೆ. ಒಂದು ವೇಳೆ ತಮ್ಮ ಹಕ್ಕುಗಳು, ಸೌಲಭ್ಯ ಸಿಗದರೆ ಕೇಳಿ ಪಡೆಯಲು ಕಾನೂನು ಅರಿವು ಮೂಡಿಸಿಕೊಳ್ಳಬೇಕು ಎಂದರು.

ಈ ಹಿಂದೆ ಮಹಿಳೆಯರು ಕೇವಲ ಮನೆ ಕೆಲಸಕ್ಕಷ್ಟೆ ಬಳಕೆ ಎಂಬುದಾಗಿತ್ತು. ಮನೆಯಲ್ಲಿ ಕುಳಿತು ಅಡುಗೆ ಮಾಡಿ, ಊಟ ಬಡಿಸುವುದೇ ಕಾಯಕವಾಗಿತ್ತು. ಈಗ ಸಮಾಜದ ಮುಖ್ಯವಾಹಿನಿಗೆ ಬಂದಿದ್ದೀರಿ. ದೇಶದ ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಎಷ್ಟಿದೆ ಎಂಬುದು ಈಗ ತಿಳಿಯಬಹುದು ಎಂದರು.

ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಮಹಿಳಾ ಕಾರ್ಮಿಕರಿಗೆ ಸಮಾನಾದ ವೇತನ ಸಿಗುತ್ತಿಲ್ಲ. ಪಿಎಫ್, ಇಎಫ್ ಐ ಕೊಡುತ್ತಿಲ್ಲ. ಹೆರಿಗೆ ಭತ್ಯೆ ನೀಡುತ್ತಿಲ್ಲ. ಈ ಹದ್ದೆ ಕಾನೂನು ಹೇಳಿದ್ದರೂ ಅದು ಪಾಲನೆಯಾಗುತ್ತಿಲ್ಲ. ಇದರ ಬಗ್ಗೆ ಮಾತನಾಡುತ್ತೇವೆ ಹೊರತು ಪ್ರಶ್ನೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳೆಯರು ವಕೀಲರಿಂದ ಕಾನೂನು ಅರಿವು ಸಲಹೆ ಪಡೆಯಬೇಕು. ತಪ್ಪುಗಳ ಬಗ್ಗೆ ಧ್ವನಿ ಎತ್ತಿ, ತಮ್ಮ ಹಕ್ಕುಗಳನ್ನು ಹೋರಾಟ ಮಾಡಬೇಕು. ದೇಶದ ಪ್ರಗತಿಗೆ ಕೈಜೋಡಿಸಿ ಮಹಿಳೆ ಅಬಲೆಯಲ್ಲ ಎಂಬುದನ್ನು ಸಾಬೀತು ಪಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶ ಲವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಹಾಗೂ ಉಚಿತ ಕಾನೂನು ಸಲಹೆಗಾರ ಎಸ್.ಜಯರಾಂ ಸಂಪನ್ಮೂಲ ಭಾಷಣ ಮಾಡಿದರು. ಒಂದನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಿ.ಎಂ.ಪಾರ್ವತಿ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಕಾರ್ಯದರ್ಶಿ ಎಂ.ಜೆ.ಸುಮಂತ್ , ಕಾರ್ಮಿಕ ನಿರೀಕ್ಷಕಿ ನಾಗರತ್ನ, ಮಾನವ ಸಂಪನ್ಮೂಲ ಅಧಿಕಾರಿಗಳಾದ ಕಾವ್ಯ, ನವನೀತ, ರಾಜೇಶ ಇದ್ದರು.