ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕಾಂಗ್ರೆಸ್ ಪಕ್ಷ ತನ್ನದೆಯಾದ ಸಿದ್ದಾಂತ ಹಾಗೂ ಘನತೆಯನ್ನು ಹೊಂದಿದೆ, ಮಾತ್ರವಲ್ಲದೇ ಬಡವರ ದೀನ ದಲಿತ, ಮಹಿಳೆಯರ ರೈತರ ಪರವಾದ ಪಕ್ಷವಾಗಿದೆ. ಯುವಕರು ಪಕ್ಷದ ಜವಾಬ್ದಾರಿ ವಹಿಸಿಕೊಂಡು ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಯುವ ಕಾಂಗ್ರೆಸ್ ಘಟಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ನಿಷ್ಠೆಯಿದ್ದರೆ ಪಕ್ಷ ಗುರುತಿಸಿ ಸ್ಥಾನಮಾನ ನೀಡುತ್ತದೆ ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಮಂಗಲ ಭವನದಲ್ಲಿ ನಡೆದ ಕಾಂಗ್ರೆಸ್ ಯುವ ಘಟಕ ಹಮ್ಮಿಕೊಂಡಿದ್ದ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಕೆಲವರು ಮಾತೆತ್ತಿದರೆ ನಾವು ಮೂವತ್ತು ವರ್ಷ, ನಲವತ್ತು ವರ್ಷ ದುಡಿದಿದ್ದೇವೆ ಎಂದು ಹೇಳುತ್ತಾರೆ. ಆದರೆ, ಪಕ್ಷದ ಸಿದ್ಧಾಂತದೊಂದಿಗೆ ಭಾವನಾತ್ಮಕವಾಗಿರಬೇಕು. ಲಾಭ ಸಿಗುತ್ತದೆ ಎಂದು ಪಕ್ಷದಲ್ಲಿದ್ದರೆ ನಿರಾಶೆಯಾಗಬೇಕಾಗುತ್ತದೆ ಎಂದರು.ನಾನು 1983 ರಿಂದ ರಾಜಕಾರಣದಲ್ಲಿರುವೆ. ನನ್ನನ್ನು ಮಂತ್ರಿ ಮಾಡುತ್ತೇನೆ ಎಂದು ಹಿಂದೆ ಕರೆದು ಕೊನೆ ಗಳಿಗೆಯಲ್ಲಿ ಕೈಬಿಟ್ಟರು. ಅದಕ್ಕಾಗಿ ಪಕ್ಷದ ವಿರುದ್ಧ ಎಂದಿಗೂ ನಾನು ಮಾತಾಡಿಲ್ಲ. ಪಕ್ಷದ ತತ್ವ ಸಿದ್ಧಾಂತ ನಂಬಿ ಪಕ್ಷನಿಷ್ಠನಾಗಿದ್ದು, ಮುಂದೆಯೂ ಹಾಗೇ ಇರುತ್ತೇನೆ. ಅಪೇಕ್ಷೆ ಇಟ್ಟುಕೊಂಡು ದುಡಿದವರಿಗೆ ನಿರಾಶೆಯಾಗುತ್ತದೆ. ಅಲ್ಲದೇ, ಅವರಿಂದ ಪಕ್ಷಕ್ಕೂ ಹಾನಿ. ಇದು ಇಂದಿನ ಸವಾಲಿನ ಪರಿಸ್ಥಿತಿಯಾಗಿದೆ. ವೋಟ್ ಚೋರಿ ಹಾಗೂ ಜಿಎಸ್ಟಿ ಬಗ್ಗೆ ದೇಶದಲ್ಲಿ ಧ್ವನಿ ಎತ್ತಿದ್ದು ನಾಯಕ ರಾಹುಲ್ ಗಾಂಧಿಯವರು, ಸದ್ಯ ದೇಶದ ಜನರಿಗೆ ಕೋಮುವಾದಿ ಬಿಜೆಪಿ ಬಗ್ಗೆ ಗೌರವ ಕಡಿಮೆಯಾಗಿದೆ. ಮುಂದೆ ರಾಹುಲ್ ಗಾಂಧಿಯನ್ನು ಬೆಂಬಲಿಸಿ ಪ್ರಧಾನಿ ಮಾಡಲು ಈಗಾಗಲೇ ನಿರ್ಧರಿಸಿದ್ದಾರೆ ಎಂದರು.
ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಂಜುನಾಥ.ಎಚ್.ಎಸ್ ಮಾತನಾಡಿ, ಬಿಜೆಪಿಯವರು ಆರಂಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು. ಆದರೆ, ಬೇರೆ ಬೇರೆ ರಾಜ್ಯಗಳಲ್ಲಿ ಇದೇ ಯೋಜನೆಗಳನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಗ್ಯಾರಂಟಿ ಯೋಜನೆಗಳನ್ನು ವಿಶ್ವಸಂಸ್ಥೆ ಪ್ರಶಂಸೆ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸರ್ವಧರ್ಮ ಒಗ್ಗೂಡಿಸುವ ಕೆಲಸ ಮಾಡಿದೆ. ಆದರೆ, ಪ್ರಧಾನಿ ಮೋದಿ ಅವರು ಧರ್ಮಧರ್ಮಗಳ ಮಧ್ಯೆ ಅಶಾಂತಿಯ ವಾತಾವರಣ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಈ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕಮೀಟಿ ಮಾಡಬೇಕು, ಬ್ಲಾಕ್, ವಿಧಾನಸಭೆ ಮಟ್ಟದಲ್ಲಿ ಬ್ಲಾಕ್ ಮಾಡಬೇಕು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪುರಸಭೆ ಚುನಾವಣೆಗಳಿಗೆ ಈಗಿನಿಂದಲೇ ಸಿದ್ಧರಾಗುವಂತೆ ತಿಳಿಸಿದರು. ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ನಿಗಂ ಭಂಡಾರಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಭಜಂತ್ರಿ ಮಾತನಾಡಿದರು. ಕೆಪಿಸಿಸಿ ಸದಸ್ಯ ರಾಮರಾಯ ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಯುವ ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷ ಸಚಿನಗೌಡ ಪಾಟೀಲ, ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ರಾಜ್ಯ ಯುವ ಕಾರ್ಯದರ್ಶಿ ಸತ್ಯಜೀತ, ವಿಧಾನಸಭಾ ಯುವ ಘಟಕದ ಅಧ್ಯಕ್ಷ ಮೊಹ್ಮದ ಇಲಿಯಾಸ ಢವಳಗಿ, ದೀಪಕಗೌಡ, ಜಿಲ್ಲಾಧ್ಯಕ್ಷ ಮೊಯಿನ್, ಬಾಹುಬಲಿ, ಶ್ರೀಧರ, ಪುರಸಭೆ ಅಧ್ಯಕ್ಷ ಮೆಹಬೂಬ ಗೊಳಸಂಗಿ, ಮಹಿಳಾ ಘಟಕದ ಅಧ್ಯಕ್ಷೆ ಅಕ್ಷತಾ ಚಲವಾದಿ, ಮಹ್ಮದರಫೀಕ ಶಿರೋಳ ಮೊದಲಾದವರು ಇದ್ದರು. ಲಕ್ಷಣ ಲಮಾಣಿ ನಿರೂಪಿಸಿದರು.
ಬಾಕ್ಸ್ಜನ್ಮ ದಿನ ಆಚರಿಸಿಕೊಳ್ಳದಿರಲು ಶಾಸಕರ ನಿರ್ಧಾರ
ಅ.11ರಂದು ನನ್ನ ಜನ್ಮ ದಿನವಿದೆ. ನೂರಾರು ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಜನ್ಮ ದಿನದ ಬಗ್ಗೆ ಒಲವು ಹೊಂದಿದ್ದಾರೆ. ಅವರ ಅಭಿಮಾನಕ್ಕೆ ಅಭಿನಂದಿಸುತ್ತೇನೆ. ಆದರೆ, ಈ ಬಾರಿ ಮತಕ್ಷೇತ್ರದಲ್ಲಿ ವಿಪರೀತ ಮಳೆಯಾಗಿ ಬೆಳೆಗಳು ಹಾಳಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಜನರು ಮನೆಗಳನ್ನು ಕಳೆದುಕೊಂಡು ನೋವಿನಲ್ಲಿದ್ದಾರೆ. ಹೀಗಾಗಿ, ನಾನು ಜನ್ಮ ದಿನ ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದೇನೆ. ಅಂದು ನಾನು ಮತಕ್ಷೇತ್ರದಲ್ಲಿರದ ಕಾರಣ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಆಡಂಬರ ಮಾಡದೇ ಕಾರ್ಯಕ್ರಮ ಕೈಬಿಡಬೇಕು ಎಂದು ಮುಖಂಡರಿಗೆ ಹಾಗೂ ಕಾರ್ರ್ಯಕರ್ತರಿಗೆ ಶಾಸಕ ಸಿ.ಎಸ್.ನಾಡಗೌಡ ಅವರು ಸೂಚನೆ ನೀಡಿದರು.ಕೋಟ್
1985ರಲ್ಲಿ ನನಗೆ ಟಿಕೆಟ್ ಸಿಗಲಿಲ್ಲ. ಆಗ ಜೆ.ಎಸ್.ದೇಶಮುಖರು ತಮ್ಮ ಪಾರ್ಟಿಗೆ ಬರುವಂತೆ ಹೇಳಿದರು. ಆದರೆ, ನಾನು ನಿರಾಕರಿಸಿದೆ. ಟಿಕೆಟ್ ತರಲು ದಿಲ್ಲಿಗೆ ಹೋಗಲಿಲ್ಲ. ಅರ್ಜಿ ಹಾಕಿ ಮನೆಯಲ್ಲಿ ಕೂತಿದ್ದೆ, ಮನೆವರೆಗೂ ತಂದು ಟಿಕೆಟ್ ಕೊಟ್ಟಿದ್ದಾರೆ. ಪಕ್ಷದ ನಿಷ್ಠೆ ಇದ್ದರೆ ಪಕ್ಷ ತಮ್ಮನ್ನು ಗುರುತಿಸುತ್ತದೆ ಎಂಬುದಕ್ಕೆ ನಾನೇ ಉದಾಹರಣೆ. ನನ್ನ ಹಿಂದೆ ಮಾತನಾಡುವವರು ಎದುರಿಗೆ ಕೂತು ತಮ್ಮ ಅಸಮಾಧಾನ ತೋಡಿಕೊಳ್ಳಬೇಕು.ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕ