ಸಾರಾಂಶ
ಧಾರವಾಡ:
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ಇದೀಗ ಮುಡಾ ಹಗರಣದಲ್ಲಿ ಕೇಳಿ ಬಂದಿದ್ದು, ಮುಖ್ಯಮಂತ್ರಿ ಸ್ಥಾನದಲ್ಲಿರುವ ಅವರು ಕೂಡಲೇ ಮುಡಾ ಸೈಟ್‌ಗಳನ್ನು ವಾಪಸ್ ಕೊಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಅಥವಾ ಸಂವಿಧಾನಿಕ ನೈತಿಕತೆ ಇದ್ದರೆ ಕೂಡಲೇ ಅವರು ಸೈಟ್‌ಗಳನ್ನು ವಾಪಸ್ ಕೊಡಬೇಕು. ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೋ ಅಥವಾ ಬಿಡಬೇಕೋ ಎನ್ನುವುದು ರಾಜಕೀಯ ನಿರ್ಧಾರ. ಆ ಬಗ್ಗೆ ಅವರ ಪಕ್ಷ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಮುಡಾ ಸೈಟ್ ಸಿದ್ದರಾಮಯ್ಯನವರ ಹೆಸರಿನಲ್ಲಿಲ್ಲ. ಅವರ ಪತ್ನಿ ಹೆಸರಿನಲ್ಲಿವೆ. ಸಿದ್ದರಾಮಯ್ಯ ಅವರು ಮೊದಲಿನಿಂದಲೂ ತಾವು ಸ್ವಚ್ಛವಾಗಿದ್ದೇನೆ ಎಂದು ಹೇಳುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಯಾವುದೇ ಅಕ್ರಮ ಮಾಡದೇ ಇದ್ದರೆ ಸೈಟ್‌ಗಳನ್ನು ವಾಪಸ್ ಕೊಡಬೇಕು ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನ ಖಾವೋಂಗಾ ನ ಖಾನೆದೂಂಗಾ ಎಂದು ಹೇಳಿದ್ದರು. ಆದರೆ, ರಾಜ್ಯದ ಗುತ್ತಿಗೆದಾರರು ರಾಜ್ಯದ ಬಿಜೆಪಿ ನಾಯಕರ ವಿರುದ್ಧವೇ ಮೋದಿ ಅವರಿಗೆ ಪತ್ರ ಬರೆದಿದ್ದರು. ಬಿಜೆಪಿ ತನ್ನ ನಾಟಕ ಕೈ ಬಿಟ್ಟು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಜೆಪಿಯಲ್ಲೇ ಎಲ್ಲಾ ಕೊಳೆತಿದೆ. ಮೊದಲು ಅದನ್ನು ಇವರು ಸ್ವಚ್ಛ ಮಾಡಿಕೊಳ್ಳಲಿ. ಆಗ ಮಾತ್ರ ಬಿಜೆಪಿ ಭವಿಷ್ಯ ಇದೆ ಎಂದರು.ಮುಡಾ ವಿಷಯದಲ್ಲಿ ಬಿಜೆಪಿಯವರು ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತಿದ್ದಾರೆ. ಅವರು ಉತ್ತಮ ವಿಪಕ್ಷವಾಗಲು ಕಾನೂನು ಬದ್ಧವಾಗಿ ಹೋರಾಟ ಮಾಡಲಿ. ಅದನ್ನು ಬಿಟ್ಟು ರಾಜಕೀಯ ಕೆಸರೆರಚಾಟ ಬೇಡ. ಮುಖ್ಯಮಂತ್ರಿ ಮುಡಾದಲ್ಲಿ ನನ್ನ ಸಹಿ ಎಲ್ಲೂ ಇಲ್ಲ ಎಂದು ಹೇಳುವ ಬದಲು ಸೈಟ್ ಗಳನ್ನು ವಾಪಸ್ ಕೊಟ್ಟಿದ್ದರೆ ಇಷ್ಟು ರಾದ್ಧಾಂತ ಆಗುತ್ತಿರಲಿಲ್ಲ ಎಂದ ಹಿರೇಮಠ, ಇವರಾರಿಗೂ ಜನರ ಸಂಕಷ್ಟಗಳ ಬಗ್ಗೆ ಚಿಂತೆಯೇ ಇಲ್ಲ. ತಮ್ಮಲ್ಲಿಯೇ ಕಾದಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರು ಬಿಜೆಪಿ ಮೇಲೆ ಶೇ. 40 ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದರು. ವಾಲ್ಮೀಕಿ ನಿಗಮದ ಹಗರಣದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಭ್ರಷ್ಟಾಚಾರದಲ್ಲಿ ತೊಡಗಿದರು. ಇವರು ಗಣಿ ಭ್ರಷ್ಟಾಚಾರದಲ್ಲಿ ತೊಡಗಿದವರು. ಅವರ ಹೆಸರನ್ನು ಎಸ್ಐಟಿ ಕೈ ಬಿಟ್ಟಿದೆ ಎಂದರೆ ಏನರ್ಥ? ಮಹತ್ವದ ಸಚಿವರು ಇರುವಾಗ ಅವರ ಗಮನಕ್ಕೆ ಬಾರದೇ ಹಗರಣ ಹೇಗೆ ಆಗುತ್ತದೆ ಎಂದು ಹಿರೇಮಠ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ರವಿಕೃಷ್ಣ ರೆಡ್ಡಿ, ಸಾಮಾಜಿಕ ಹೋರಾಟಗಾರ ಲಕ್ಷಣ ಬಕ್ಕಾಯಿ ಇದ್ದರು.ದಾಖಲೆಗಳು ಮಾತಾಡುತ್ತಿವೆ ಕಿರು ಹೊತ್ತಿಗೆ ಲೋಕಾರ್ಪಣೆಹಿರೇಮಠ ಸುದ್ದಿಗೋಷ್ಠಿಯಲ್ಲಿ "ದಾಖಲೆಗಳು ಮಾತಾಡುತ್ತಿವೆ'' ಕಿರು ಹೊತ್ತಿಗೆ ಲೋಕಾರ್ಪಣೆ ಮಾಡಿದರು. ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರ ನಡೆಯಲಿದ್ದು ಭ್ರಷ್ಟರನ್ನು ಸುಮ್ಮನೇ ಬಿಡುವ ಪ್ರಶ್ನೆಯೇ ಇಲ್ಲ. ರಾಜಕೀಯವಾಗಿ ಕೆಸರೆರಚಾಟ ಮಾಡುವ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿದೆ. ಈ ಕುರಿತು ನ್ಯಾಯಾಂಗ ಸೂಕ್ತ ಕ್ರಮ ಕೈಗೊಳ್ಳಬೇಕು ಈ ಕುರಿತು ನಾವು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.