ತಾಕತ್ತಿದ್ದರೆ ಗಣಿಗ ರವಿ ದಾಖಲೆ ಬಿಡುಗಡೆ ಮಾಡಲಿ: ರೇಣು ಸವಾಲು

| Published : Aug 27 2024, 01:42 AM IST

ತಾಕತ್ತಿದ್ದರೆ ಗಣಿಗ ರವಿ ದಾಖಲೆ ಬಿಡುಗಡೆ ಮಾಡಲಿ: ರೇಣು ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿಯಿಂದ ₹100 ಕೋಟಿ ಆಫರ್ ಯಾರಾದರೂ ನೀಡಿದ್ದರೆ, ಅದು ಯಾರೆಂಬುದನ್ನು ಬಹಿರಂಗಪಡಿಸಿ. ನಿಮಗೆ ತಾಕತ್ತಿದ್ದರೆ ₹100 ಕೋಟಿಗಳ ಆಫರ್ ಬಗ್ಗೆ ತನಿಖೆ ಮಾಡಿಸಿ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ (ಗಣಿಗ ರವಿ) ಅವರಿಗೆ ಹೊನ್ನಾಳಿಯ ಮಾಜಿ ಸಚಿವ ಎಂ.ಪಿ. ರೇಣುಕಾರ್ಯಚಾರ್ಯ ದಾವಣಗೆರೆಯಲ್ಲಿ ಸವಾಲು ಹಾಕಿದ್ದಾರೆ.

- ಬಿಜೆಪಿಯಿಂದ ₹100 ಕೋಟಿ ಆಫರ್‌ ಬಗ್ಗೆ ತನಿಖೆ ನಡೆಸಲು ತಾಕೀತು

- ಸಿದ್ದು-ಡಿಕೆಶಿ ಆಳ್ವಿಕೆಯಲ್ಲಿ ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಆರೋಪ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿಯಿಂದ ₹100 ಕೋಟಿ ಆಫರ್ ಯಾರಾದರೂ ನೀಡಿದ್ದರೆ, ಅದು ಯಾರೆಂಬುದನ್ನು ಬಹಿರಂಗಪಡಿಸಿ. ನಿಮಗೆ ತಾಕತ್ತಿದ್ದರೆ ₹100 ಕೋಟಿಗಳ ಆಫರ್ ಬಗ್ಗೆ ತನಿಖೆ ಮಾಡಿಸಿ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ (ಗಣಿಗ ರವಿ) ಅವರಿಗೆ ಹೊನ್ನಾಳಿಯ ಮಾಜಿ ಸಚಿವ ಎಂ.ಪಿ. ರೇಣುಕಾರ್ಯಚಾರ್ಯ ಸವಾಲು ಹಾಕಿದರು.

ಹೊನ್ನಾಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮವರೇ ಮುಖ್ಯಮಂತ್ರಿ, ಗೃಹ ಮಂತ್ರಿಗಳಿದ್ದಾರೆ. ತನಿಖೆ ಮಾಡಿಸಿ, ಬೇಕಾದರೆ ಇಡಿ, ಸಿಬಿಐ ತನಿಖೆಗಾದರೂ ಒಪ್ಪಿಸಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಆಫರ್ ನೀಡಿದ್ದು ಯಾರೆಂಬುದನ್ನು ಗಣಿಗ ರವಿಯವರು ಬಹಿರಂಗಪಡಿಸಲಿ. ಯಾವುದೇ ಇಲಾಖೆ, ತನಿಖಾ ಸಂಸ್ಥೆಯಿಂದಲಾದರೂ ಈ ಬಗ್ಗೆ ತನಿಖೆ ಮಾಡಿಸಲಿ ಎಂದರು.

ಬಿಜೆಪಿ ಬಗ್ಗೆ ಮಿಥ್ಯಾರೋಪ:

ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಷಿ ಸೇರಿದಂತೆ ಬಿಜೆಪಿ ಮುಖಂಡರು ಇದ್ದಾರೆಂದು ಹೇಳುವ ನೀವು ಗಾಳಿಯಲ್ಲಿ ಗುಂಡು ಹೊಡೆಯಬೇಡಿ. ನಿಷ್ಪಕ್ಷಪಾತ ತನಿಖೆಗೆ ಕ್ರಮ ಕೈಗೊಳ್ಳಿ. ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆಯ ನಂತರ ರವಿ ಗಣಿಗ ಅವರಿಗೆ ಸೂಚನೆ ಬಂದಿದೆ. ಹಾಗಾಗಿ ಬಿಜೆಪಿ ಮೇಲೆ ಮಿಥ್ಯಾರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಮುಚ್ಚಿ ಹಾಕುವುದು, ನಾಡಿನ ಜನರ ಗಮನ ಬೇರೆಡೆಗೆ ಸೆಳೆಯಲು ₹100 ಕೋಟಿಗಳ ಆಫರ್ ಬಗ್ಗೆ ಮಾತನಾಡುತ್ತಿದ್ದಾರಷ್ಟೇ. ಒಂದೂವರೆ ವರ್ಷದ ಹಿಂದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜನಾದೇಶವು ಕಾಂಗ್ರೆಸ್ ಪರವಿದ್ದು, ಉತ್ತಮವಾಗಿ 5 ವರ್ಷ ಆಳಲಿ ಅಂತಾ ಜನತೆ ಸಹ ಆಶೀರ್ವದಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಆಗಿನಿಂದಲೂ ಬ್ರಹ್ಮಾಂಡ ಭ್ರಷ್ಟಾಚಾರ ಎಸಗುತ್ತಿದೆ ಎಂದು ಟೀಕಿಸಿದರು.

ಮೈಸೂರಿನ ಮುಡಾ ನಿವೇಶನ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳೇ ಕಾಂಗ್ರೆಸ್‌ ಭ್ರಷ್ಟಾಚಾರಕ್ಕೆ ಸಾಕ್ಷಿ. ಮುಡಾದಲ್ಲಿ ಸುಮಾರು ₹4 ಸಾವಿರ ಕೋಟಿ ಹಗರಣ ನಡೆದಿದೆ. ವಾಲ್ಮೀಕಿ ನಿಗಮದಲ್ಲಿ ₹184 ಕೋಟಿ ಭ್ರಷ್ಟಾಚಾರವಾಗಿದ್ದು, ಸ್ವತಃ ಸಿಎಂ ಸಿದ್ದರಾಮಯ್ಯ ಸದನದಲ್ಲಿ ₹87 ಕೋಟಿ ಭ್ರಷ್ಟಾಚಾರ ಎಂಬುದನ್ನು ಒಪ್ಪಿಕೊಂಡಿದ್ದಾರೆ. ನಮ್ಮದು ಭ್ರಷ್ಟಾಚಾರದ ವಿರುದ್ಧ ಹೋರಾಟವೇ ಹೊರತು, ಸಿದ್ದರಾಮಯ್ಯ, ಶ್ರೀಮತಿ ಸಿದ್ದರಾಮಯ್ಯ ವಿರುದ್ಧದ ಹೋರಾಟ ಅಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

ಇದುವರೆಗೂ ನಾಗೇಂದ್ರ, ದದ್ದಲ್ ಮೇಲೆ ಎಫ್‌ಐಆರ್‌ ದಾಖಲಿಸಿಲ್ಲ. ಯಾದಗಿರಿ ಪಿಎಸ್ಐ ಆತ್ಮಹತ್ಯೆಗೆ ಅಲ್ಲಿನ ಶಾಸಕ ಮತ್ತು ಪುತ್ರನ ಕಿರುಕಳವೇ ಕಾರಣವಾಗಿದೆ. ಇದುವರೆಗೂ ಶಾಸಕ ಮತ್ತು ಪುತ್ರನ ಬಂಧನವಾಗಿಲ್ಲ. ರಾಜ್ಯದಲ್ಲಿ ಸರ್ಕಾರ ಅಭಿವೃದ್ಧಿ ಮಾಡುತ್ತಿಲ್ಲ. ಬೆಳೆ ಪರಿಹಾರ, ಮನೆ ಹಾನಿ ಪರಿಹಾರ ನೀಡಿಲ್ಲ. ಒಂದು ರಸ್ತೆ ಸಹ ನಿರ್ಮಿಸಿಲ್ಲ. ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧದ ಬಿಜೆಪಿ ಪಾದಯಾತ್ರೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇ ಹೊರತು, ಯಾವುದೇ ವ್ಯಕ್ತಿಪರವಾಗಿಲ್ಲ ಎಂದರು.

- - - -ಫೋಟೋ:

ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ