ಸಾರಾಂಶ
ಹೆಣ್ಮಕ್ಕಳು ತಮ್ಮ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರೆ ಕೂಡಲೇ ಅಕ್ಕ ಪಡೆಯ ಗಮನಕ್ಕೆ ತರಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರ ಪತ್ನಿ ಶೈನಿ ಗುಂಟಿ ಹೇಳಿದರು.
ಕನ್ನಡಪ್ರಭ ವಾರ್ತೆ, ಬೀದರ್
ಹೆಣ್ಮಕ್ಕಳು ತಮ್ಮ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರೆ ಕೂಡಲೇ ಅಕ್ಕ ಪಡೆಯ ಗಮನಕ್ಕೆ ತರಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರ ಪತ್ನಿ ಶೈನಿ ಗುಂಟಿ ಹೇಳಿದರು.ಋಷಿಕೇಶ ಶಿಕ್ಷಣ ಸಂಸ್ಥೆ ಸಂಚಾಲಿತ ನಗರದ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ಅಕ್ಕ ಪಡೆ ಹೆಣ್ಣುಮಕ್ಕಳ ರಕ್ಷಣೆಗಾಗಿಯೇ ಇದೆ. ಹೀಗಾಗಿ ಏನೇ ಸಮಸ್ಯೆ ಇದ್ದರೂ ಪಡೆ ಮುಂದೆ ಹೇಳಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳು ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಷಗಳ ಬಗ್ಗೆ ಅರಿತುಕೊಳ್ಳಬೇಕು. ಸಂಕಷ್ಟದ ಸಂದರ್ಭದಲ್ಲಿ 112 ಅಥವಾ 1098ಗೆ ಕರೆ ಮಾಡಬೇಕು ಎಂದು ಸಲಹೆ ಮಾಡಿದರು.ಅಕ್ಕ ಪಡೆಯ ಎಎಸ್‌ಐ ಸಂಗೀತಾ ಎಂ.ಬಿ. ಮಾತನಾಡಿ, ಸಾರ್ವಜನಿಕರ ರಕ್ಷಣೆ ಪೊಲೀಸರ ಕರ್ತವ್ಯವಾಗಿದೆ. ಹೀಗಾಗಿ ಮಕ್ಕಳು ಪೊಲೀಸರ ಬಗ್ಗೆ ಭಯ ಇಟ್ಟುಕೊಳ್ಳಬಾರದು. ಅವರೊಂದಿಗೆ ಮಾಹಿತಿಯನ್ನು ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ಮಾತನಾಡಿ, ಬಾಲ್ಯ ವಿವಾಹ ಸಮಾಜಕ್ಕೆ ಮಾರಕವಾಗಿದೆ ಶಿಕ್ಷಾರ್ಹ ಅಪರಾಧವೂ ಆಗಿದೆ. ಅದನ್ನು ತಡೆಗಟ್ಟಲು ಎಲ್ಲರೂ ಪೊಲೀಸ್ ಇಲಾಖೆ ಜತೆಗೆ ಕೈಜೋಡಿಸಬೇಕೆಂದರು.ಅಕ್ಕ ಪಡೆಯ ಅಂಬಿಕಾ ಸಂತೋಷ, ನೀಲಮ್ಮ, ಅಂಬಿಕಾ, ಶ್ರೀದೇವಿ ಮತ್ತಿತರರು ಇದ್ದರು. ಪ್ರಶಾಂತ ಚಕ್ರವರ್ತಿ ಸ್ವಾಗತಿಸಿ ನೀಲಮ್ಮ ಗಜಲೆ ನಿರೂಪಿಸಿ ಗಣಪತಿ ವಂದಿಸಿದರು.