ಹೊಸದುರ್ಗ ತಾಲೂಕಿನ ಕಸಬಾ ಹೋಬಳಿಯಲ್ಲಿ ಹಾದು ಹೋಗಿರುವ ಭದ್ರಾ ಯೋಜನೆಯ ಕಾಮಗಾರಿಯನ್ನು ವಿಪ ಸದಸ್ಯ ಕೆ.ಎಸ್‌.ನವೀನ್‌ ಮಂಗಳವಾರ ತಮ್ಮ ಮುಖಂಡರೊಂದಿಗೆ ವಿಕ್ಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಬಿಟ್ಟು ಹೊಗಿರುವ ಐಮಂಗಲ ಭಾಗದ ಕೆರೆಗಳಿಗೆ ನೀರು ಕೊಡಲು ಅವಕಾಶವಿರುವುದಾದರೆ ಭೂಮಿ ಕೊಟ್ಟಿರುವ ಹೊಸದುರ್ಗ ತಾಲೂಕಿನ ಕೆರೆಗಳಿಗೆ ಏಕೆ ನೀರಿಲ್ಲ ಮೊದಲು ಹೊಸದುರ್ಗ ತಾಲೂಕಿನಲ್ಲಿ ಬಿಟ್ಟು ಹೊಗಿರುವ ಕೆರೆಗಳಿಗೆ ನೀರು ಕೊಡಿ ಎಂದು ವಿಧಾನ ಪರಿಷತ್‌ ಸದಸ್ಯ

ಕೆ.ಎಸ್‌.ನವೀನ್‌ ಸರ್ಕಾರವನ್ನು ಒತ್ತಾಯಿಸಿದರು.

ಮಂಗಳವಾರ ಹೊಸದುರ್ಗ ತಾಲೂಕಿನಲ್ಲಿ ಹಾದು ಹೋಗಿರುವ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ನಾಲಾ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಐಮಂಗಲ ಭಾಗದ ರೈತರು ಹೋರಾಟ ಮಾಡುತ್ತಿದ್ದಾರೆ ಎಂದು ಹಿರಿಯೂರು ಉಪ ಚುನಾವಣೆ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಐಮಂಗಲ ಭಾಗದ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಒಂದು ವೇಳೆ ಹೊಸದಾಗಿ ನೀರು ಕೊಡಲು ಅವಕಾಶವಿದ್ದರೆ ಹೊಸದುರ್ಗ ತಾಲೂಕಿನಲ್ಲಿ ಬಿಟ್ಟು ಹೊಗಿರುವ ಕೆರೆಗಳಿಗೆ ನೀರು ಹರಿಸಬೇಕು ಇಲ್ಲವಾದರೆ ರೈತ ಸಂಘಟನೆಗಳ ಸಹಯೋಗದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೊಸದುರ್ಗ ತಾಲೂಕಿನ ರೈತರು ಅನ್ಯ ಜಿಲ್ಲೆ ಹಾಗೂ ತಾಲೂಕಿನ ರೈತರ ನೀರಾವರಿಗಾಗಿ ಹಿಂದಿನಿಂದಲೂ ಭೂಮಿ ಕಳೆದುಕೊಂಡು ಬಂದಿದ್ದಾರೆ ತಮ್ಮ ಜಮೀನಿನ ಪಕ್ಕದಲ್ಲಿಯೇ ನೀರು ಹರಿದರೂ ತಮ್ಮ ಜಮೀನುಗಳಿಗೆ ನೀರು ಬಳಸಲಾರದಂತಹ ಹೀನಾಯ ಪರಿಸ್ಥಿತಿಯಲ್ಲಿ ಇದ್ದಾರೆ ಎಂದರು.

*ತರಾತುರಿ ಕೆಲಸ, ಕಳಪೆ ಕಾಮಗಾರಿ:

ಕಳೆದ ಮಾರ್ಚ್‌ನಿಂದಲೂ ಕಾಮಗಾರಿ ನಡೆಯುತ್ತಿದ್ದು ನೀರಾವರಿ ಸಚಿವರಾಧಿಯಾಗಿ ಜಿಲ್ಲೆಯ ಶಾಸಕರು ಇನ್ನೊಂದು ತಿಂಗಳಲ್ಲಿ ಭದ್ರಾ ನೀರು ಹರಿಸುವುದಾಗಿ ಹೇಳಲಾಗುತ್ತಿದೆ. ವಾಸ್ತವ ಪರಿಸ್ಥಿತಿ ಅರಿಯಲು ಹೊಸದುರ್ಗ ತಾಲೂಕಿನ ಗಡಿ ಭಾಗದಿಂದ ಕೆರೆ, ಜಾಕ್‌ವೆಲ್‌ ಸೇರಿದಂತೆ ಕಾಮಗಾರಿ ಸ್ಥಳಗಳನ್ನು ಪರಿಶೀಲಿನೆ ಮಾಡಿದ್ದು ಚಿತ್ರದುರ್ಗ ಜಿಲ್ಲೆಗೆ ನೀರು ಪ್ರವೇಶಿಸಬೇಕಾದ ಸ್ಥಳದಲ್ಲಿಯೇ ಇನ್ನೂ 2.5 ಕಿ.ಮೀ ಕಾಮಗಾರಿ ಬಾಕಿ ಇದೆ ಎಂದರು.

ಈ ಭಾಗದಲ್ಲಿ ಕೇವಲ ಒಂದು ಹಿಟಾಚಿ ಹಾಗೂ ಎರಡು ಟಿಪ್ಪರ್‌ಗಳ ಮೂಲಕ ಕಾಮಗಾರಿ ನಡೆಸಲಾಗುತ್ತಿದೆ. ತರಾತುರಿ ಕೆಲಸಕ್ಕಾಗಿ ಚಾನಲ್‌ ಲೈನಿಂಗ್‌ ಕಾಮಗಾರಿಯನ್ನು ಯಂತ್ರೋಪಕರಣಗಳ ಮೂಲಕ ಗುಣಮಟ್ಟದ ರೀತಿಯಲ್ಲಿ ಕೈಗೊಳ್ಳುವ ಬದಲು ಮ್ಯಾನುಯಲ್‌ ಆಗಿ ನಡೆಸಲಾಗುತ್ತಿದ್ದು, ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಇದೇ ರೀತಿ ಕಾಮಗಾರಿ ಮುಂದುವರಿದರೆ ನೀರು ಹರಿಸಿದ ಒಂದು ವರ್ಷದೊಳಗೆ ಚಾನಲ್‌ ಹಾಳಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಈ ಕುರಿತು ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಲಾಗುವುದು ಹಾಗೆಯೇ ಸದಸನ ಒಳಗೂ ಈ ವಿಷಯ ಪ್ರಸ್ತಾಪಿಸಲಾಗುವುದು ಒಂದು ವೇಳೆ ಬೇಡಿಕೆ ಈಡೇರದಿದ್ದರೆ ರೈತ ಸಂಘಟನೆಗಳ ಸಹಯೋಗದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್‌.ಕಲ್ಮಠ್‌, ರೈತ ಮೋರ್ಚಾದ ಮಂಡಲದ ಅಧ್ಯಕ್ಷ ಮನುಕುಮಾರ್‌, ಓಬಿಸಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌, ಪಂಪ ಸೇರಿದಂತೆ ಬಿಜೆಪಿ ಮುಖಂಡರು ಹಾಜರಿದ್ದರು.

ಹೊಸದುರ್ಗ ತಾಲೂಕಿನಲ್ಲಿ ಬಿಟ್ಟು ಹೊಗಿರುವ ಕೆರೆಗಳು:

ಕಸಬಾ ಹೋಬಳಿಯ ಕಬ್ಬಿನಕೆರೆ, ಬುರುಡೇಕಟ್ಟೆ, ಚಿಕ್ಕಮ್ಮನಹಳ್ಳಿ, ಗೊಲ್ಲನಕಟ್ಟೆ, ಹೆಬ್ಬಳ್ಳಿ - 2ಕೆರೆ, ದೇವಿಗೆರೆ, ಕೃಷ್ಣಾಪುರ, ಜಾಲಿಕಟ್ಟೆ ಜಂತಿಕೊಳಲು ಕೆರೆ ಸೇರಿದಂತೆ ಒಟ್ಟು 16 ಕೆರೆಗಳು