ಸೂಡಾದಲ್ಲಿ ಅವ್ಯವಹಾರ ನಡೆದಿದ್ದರೆ ತನಿಖೆಯಾಗಲಿ, ಆದರೆ, ಎಲ್ಲರ ಅಧ್ಯಕ್ಷಾರವಧಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆಯೂ ತನಿಖೆಯಾಗಲಿ. ನನ್ನ ಅವಧಿಯಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಯಾವ ಅಂಜಿಕೆಯೂ ನನಗಿಲ್ಲ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸೂಡಾದಲ್ಲಿ ಅವ್ಯವಹಾರ ನಡೆದಿದ್ದರೆ ತನಿಖೆಯಾಗಲಿ, ಆದರೆ, ಎಲ್ಲರ ಅಧ್ಯಕ್ಷಾರವಧಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆಯೂ ತನಿಖೆಯಾಗಲಿ. ನನ್ನ ಅವಧಿಯಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಯಾವ ಅಂಜಿಕೆಯೂ ನನಗಿಲ್ಲ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ನಾನು ಅಧ್ಯಕ್ಷನಾಗಿ ಬರುವ ಮೊದಲೇ ಕಾಮಗಾರಿಗಳು ಮುಗಿದು ಹೋಗಿವೆ. ಕೆಲವು ಮಾತ್ರ ಉಳಿದಿದೆ ಅಷ್ಟೇ. ಪ್ರಸನ್ನಕುಮಾರ್ ಹೇಳಿದಂತೆ ಈಗಾಗಲೇ ಇದು ಲೋಕಾಯುಕ್ತ ತನಿಖೆಯಲ್ಲಿದೆ. ಲೋಕಾಯುಕ್ತರು ಖಂಡಿತ ತನಿಖೆ ಮಾಡುತ್ತಾರೆ. ಅವ್ಯವಹಾರವಾಗಿದ್ದರೆ ಶಿಕ್ಷೆಯಾಗಲಿ ಎಂದು ಹೇಳಿದರು.

ಅಧಿಕಾರಿಗಳು ತಮ್ಮ ತಮ್ಮ ಕೆಲಸಗಳನ್ನು ಮಾಡಿದ್ದಾರೆ. ಟೆಂಡರ್ ಕರೆಯುವುದು ಸೇರಿದಂತೆ ಅಧಿಕಾರಿಗಳ ವ್ಯಾಪ್ತಿಯಲ್ಲಿ ಇವೆಲ್ಲವೂ ಪಾರದರ್ಶಕವಾಗಿ ನಿಯಮಬದ್ಧವಾಗಿ ನಡೆಯುತ್ತದೆ. ಆಕಸ್ಮಾತ್ ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರನ್ನು ಕಾಪಾಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿ. ಇದಕ್ಕೆ ನನ್ನ ಸಹಮತವೂ ಇದೆ ಎಂದರು.

ದಿನೇಶ್ ಎಂಬ ಅಧಿಕಾರಿಯ ವರ್ಗಾವಣೆ ಕುರಿತಂತೆ ಮಾತನಾಡಿದ ಅವರು, ಅವರ ವರ್ಗಾವಣೆ ಬಗ್ಗೆ ನನಗೆ ಗೊತ್ತಿಲ್ಲ. ವರ್ಗಾವಣೆಯ ವ್ಯಾಪ್ತಿ ನಮಗೆ ಬರುವುದೂ ಇಲ್ಲ. ಆಕಸ್ಮಾತ್ ಆ ವ್ಯಕ್ತಿ ತಪ್ಪು ಮಾಡಿದ್ದರೆ ಅದನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ವರ್ಗಾವಣೆ ಆದರೆಂದರೆ ತಪ್ಪುಗಳು ವರ್ಗಾವಣೆ ಆಗುವುದಿಲ್ಲ. ಹೇಗಿದ್ದರೂ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ನಾವು ಇದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದರು.

ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಪ್ರಮುಖವಾಗಿ ಉದ್ಯಾನವನಗಳ ಅಭಿವೃದ್ಧಿ ಬಗ್ಗೆ ಗಮನಹರಿಸಿದ್ದೇನೆ. ಸಾಮಾನ್ಯವಾಗಿ ಉದ್ಯಾನವನಗಳು ಸಾರ್ವಜನಿಕ ಹಾಗೂ ಕೆಲವು ಸಂಘ ಸಂಸ್ಥೆಗಳ ಮೇಲ್ವಿಚಾರಣೆಯಲ್ಲಿ ಇರುತ್ತವೆ. ಯಾವುದೇ ಕಾರಣಕ್ಕೂ ಕಾಮಗಾರಿ ಲೋಪವಾಗಲು ಅವರು ಬಿಡುವುದಿಲ್ಲ. ಸ್ವಲ್ಪ ಲೋಪವಾದರೂ ಸಾಕು, ಸರಿಯಾಗಿ ಕೆಲಸ ಮಾಡಿಸುತ್ತಾರೆ. ಈ ನಿಟ್ಟಿನಲ್ಲಿ ಪಾರ್ಕ್ ಅಭಿವೃದ್ಧಿ ಮಾಡಿದ ಬಗ್ಗೆ ನನಗೆ ತೃಪ್ತಿ ಇದೆ ಎಂದರು.

ಈಗಾಗಲೇ ಪ್ರಾಧಿಕಾರದಿಂದ ಅಮೃತ್ ಸಿಟಿ ಯೋಜನೆಗೆ ಅನುಮೋದನೆಗಾಗಿ ಆಯುಕ್ತಾಲಯಕ್ಕೆ ಕಳಿಸಲಾಗಿದೆ. ಗ್ರಾಮದ ಸರ್ವೇ ನಂ. 25, ಕಸಬಾ ಹೋಬಳಿ ಗೋಪಿಶೆಟ್ಟಿ ಗ್ರಾಮದಲ್ಲಿ ವಸತಿ ಬಡಾವಣೆ ನಿರ್ಮಿಸುವ ಸಂಬಂಧ ವಿನ್ಯಾಸ ನಕ್ಷೆಗೆ ತಾಂತ್ರಿಕ ಅನುಮೋದನೆ ಕೇಳಲಾಗಿದೆ. ಸುಮಾರು ೩ ಎಕರೆ, ಗೋಪಿಶೆಟ್ಟಿಕೊಪ್ಪ ಗ್ರಾಮದಲ್ಲಿ 31 ಎಕರೆ, ಊರುಗಡೂರು ಗ್ರಾಮದಲ್ಲಿ 4 ಎಕರೆ, ಭದ್ರಾವತಿ ತಾಲೂಕು ಕಸಬಾ ಗ್ರಾಮದ ಸ.ನಂ.118 ರಲ್ಲಿ 32.21 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸುವ ಸಂಬಂಧ ಪ್ರಸ್ತಾವನೆ ಆಯುಕ್ತಾಲಯಕ್ಕೆ, ಗ್ರಾಮಾಂತರ ಯೋಜನಾ ಇಲಾಖೆಗೆ ಕಳಿಸಲಾಗಿದೆ. ಈ ಎಲ್ಲದಕ್ಕೂ ಅನುಮೋದನೆ ಸಿಗುವ ಭರವಸೆ ನನಗಿದೆ ಎಂದರು.

ಹಾಗೆಯೇ ಸೂಡಾದಿಂದ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ದೇವಕಾತಿಕೊಪ್ಪದ ಸ.ನಂ.47ರ ಸುಮಾರು 22.30 ಎಕರೆ ವ್ಯಾಪ್ತಿಯಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸುವುದು, ಚನ್ನಮುಂಬಾಪುರ ಗ್ರಾಮದ ಸ.ನಂ.11ರಲ್ಲಿ 10.23 ಎಕರೆ ವಿಸ್ತೀರ್ಣದ ಕೆರೆಯನ್ನು ಅಭಿವೃದ್ಧಿಪಡಿಸುವುದು, ಬೊಮ್ಮನಕಟ್ಟೆ ಗ್ರಾಮದ ಸ.ನಂ.114ರಲ್ಲಿರುವ 24.14 ಎಕರೆ ಕೆರೆ, ಆಲ್ಕೊಳದ ಸ.ನಂ.10ರಲ್ಲಿರುವ 1.02 ಗುಂಟೆ ಕೆರೆಯ ಮುಂದುವರಿದ ಕಾಮಗಾರಿ, ಭದ್ರಾವತಿ ತಾಲೂಕು ಹೊಸೂರು ಸಿದ್ದಾಪುರ ಗ್ರಾಮದ ಸ.ನಂ 110 ರ 24.16 ಎಕರೆ ಕೆರೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಒಟ್ಟಾರೆ ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆರೋಪ ಮಾಡುವವರು ಮಾಡಲಿ ಬಿಡಿ. ನಾನು ಬೇಡ ಎನ್ನುವುದಿಲ್ಲ ಎಂದು ಪುನರುಚ್ಛರಿಸಿದರು.

ಆಯುಕ್ತ ವಿಶ್ವನಾಥ್ ಎಸ್.ಮುದ್ದಜಿ, ಸದಸ್ಯರಾದ ಪ್ರವೀಣ್‌, ಫ್ರಾನ್ಸಿಸ್, ಅರುಣಾಕುಮಾರಿ, ಎಂಜಿನಿಯರ್ ಬಸವರಾಜ್ ಸೇರಿದಂತೆ ಹಲವರು ಇದ್ದರು.