ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದಿಂದ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ, ದಲಿತ ಸಮುದಾಯದ ಹಿರಿಯ ಮುಖಂಡ ಗೋವಿಂದ ಕಾರಜೋಳರವರಿಗೆ ಟಿಕೆಟ್ ನೀಡಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಪಕ್ಷದ ಈ ನಿರ್ಧಾರಕ್ಕೆ ವಾಲ್ಮೀಕಿ ಸಮುದಾಯ ಯಾವುದೇ ಅಪಸ್ವರ ಎತ್ತುವುದಿಲ್ಲ. ಆದರೆ, ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ನಮ್ಮ ಆಗ್ರಹವಾಗಿದೆ ಎಂದು ಮಾಜಿ ಶಾಸಕ ನೇರಲಗುಂಟೆ ತಿಪ್ಪೇಸ್ವಾಮಿ ಹೇಳಿದರು.ಅವರು, ಭಾನುವಾರ ನಗರದ ಖಾಸಗಿ ಕಚೇರಿಯಲ್ಲಿ ಪಕ್ಷದ ಮುಖಂಡರು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯವೂ ಸೇರಿದಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ ಮತಗಳು ಸುಮಾರು ೬ ಲಕ್ಷಕ್ಕೂ ಹೆಚ್ಚಿವೆ. ಕಳೆದ ಬಾರಿ ಸಹ ಸಂಸದ ಎ.ನಾರಾಯಣ ಸ್ವಾಮಿಯವರಿಗೆ ನಾವೆಲ್ಲರೂ ಬೆಂಬಲ ನೀಡಿದ್ದೆವು. ಆದರೆ, ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಸೂಕ್ತವಾಗಿ ಸ್ಪಂದಿಸಲಿಲ್ಲ. ಈಗ ಗೋವಿಂದ ಕಾರಜೋಳ ಅಭ್ಯರ್ಥಿಯಾಗಿದ್ದು, ಅವರೂ ಸಹ ಈ ಭಾಗದ ನಾಯಕ ಸಮುದಾಯ ಮುಖಂಡರಿಗೆ ಯಾವುದೇ ಮಾಹಿತಿ ನೀಡಿಲ್ಲ, ಇದರಿಂದ ಎಲ್ಲರಲ್ಲೂ ಅಸಮದಾನವಿದೆ. ಮುಂದಿನ ದಿನಗಳಲ್ಲೂ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸವಾಗಬೇಕೆಂಬುವುದೇ ನಮ್ಮ ಆಗ್ರಹ ಎಂದರು.
ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಡಾ.ಡಿ.ಎನ್.ಮಂಜುನಾಥ ಮಾತನಾಡಿ, ಮತದಾನಕ್ಕೆ ಇನ್ನೂ ಕೇವಲ ಕೆಲವೇ ದಿನಗಳು ಬಾಕಿ ಇವೆ. ಆದರೆ, ಸಮು ದಾಯದ ಪಕ್ಷದ ಮುಖಂಡರಿಗೆ ಆಹ್ವಾನ ನೀಡದೇ ಇದ್ದರೆ ಚುನಾವಣೆಯಲ್ಲಿ ಬೇರೆ ಪರಿಣಾಮ ಉಂಟಾಗುವುದು ಸಹಜ. ನಾನು ಸಹ ಪಕ್ಷದ ಮುಖಂಡರಲ್ಲಿ ಮನವಿ ಮಾಡಿ ಅಭ್ಯರ್ಥಿ ಗೋವಿಂದ ಕಾರಜೋಳರವರು ವಾಲ್ಮೀಕಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತೆ ಮನವಿ ಮಾಡುತ್ತೇನೆಂದರು.ನಗರಸಭೆ ಹಿರಿಯ ಸದಸ್ಯ ಎಸ್.ಜಯಣ್ಣ ಮಾತನಾಡಿ, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ನಮ್ಮ ಸಮುದಾಯದ ಮುಖಂಡ ನಮ್ಮನ್ನು ಕಡೆಗಣಿಸಿರುವುದು ಅನ್ಯಾಯ ಎಂದರು.
ಎಬಿವಿಪಿ ಟಿ.ಮಂಜುನಾಥ ಮಾತನಾಡಿ, ಅಭ್ಯರ್ಥಿ ಬಂದರೂ ಪಕ್ಷದ ನಾಯಕ ಮುಖಂಡರಿಗೆ ಯಾವುದೇ ಮಾಹಿತಿ ನೀಡಿಲ್ಲ, ನಮ್ಮನ್ನು ಕಡೆಗಣಿಸುವುದು ಸರಿಯಲ್ಲ. ಅಭ್ಯರ್ಥಿ ಗೋವಿಂದ ಕಾರಜೋಳರವರು ಒಳ್ಳೆ ಸ್ವಭಾವ ಹಾಗೂ ಆಡಳಿತದ ಅನುಭವಿದೆ. ಈ ಬಗ್ಗೆ ಜಿಲ್ಲಾ ಮತ್ತು ರಾಜ್ಯ ಮುಖಂಡರು ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.ಈ ಸಂದರ್ಭದಲ್ಲಿ ಎಬಿವಿಪಿ ಟಿ.ಮಂಜುನಾಥ, ಎಂ.ಎಸ್.ಜಯರಾಮ್, ನಗರಸಭಾ ಸದಸ್ಯರಾದ ವೆಂಕಟೇಶ್, ಪಾಲಮ್ಮ ತಿಪ್ಪೇಸ್ವಾಮಿ, ಈಶ್ವರ ನಾಯಕ, ಜೆ.ಕೆ.ತಿಪ್ಪೇಶ್, ಪರಾಜಿತ ಅಭ್ಯರ್ಥಿ ಆರ್.ಅನಿಲ್ ಕುಮಾರ್, ಇಂಧುಮತಿ, ಬಾಲರಾಜು, ದೊರೆ ಬೈಯಣ್ಣ, ಕಾಟಪ್ಪನಹಟ್ಟಿ ವೀರೇಶ್, ದೊರೆ ನಾಗರಾಜು ಮುಂತಾದವರು ಉಪಸ್ಥಿತರಿದ್ದರು.