ವಾತ, ಪಿತ್ತ, ಕಫ ಸಮನಾಗಿದ್ರೆ ರೋಗವಿಲ್ಲ: ಬಸವಾನಂದ ಶ್ರೀ

| Published : Dec 09 2024, 12:48 AM IST

ಸಾರಾಂಶ

ಮಧ್ಯಮ ವರ್ಗ, ಬಡವರು, ನಿರ್ಗತಿಕರಿಗೆ ಇಂತಹ ಉಚಿತ ಶಿಬಿರಗಳು ಸಹಕಾರಿಯಾಗಿವೆ ಆದ್ದರಿಂದ ಶಿಬಿರದ ಸೌಲಭ್ಯಗಳನ್ನು ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಿ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಮನುಷ್ಯನ ದೇಹದಲ್ಲಿ ವಾತ, ಪಿತ್ತ, ಕಫ ಸಮ ಪ್ರಮಾಣದಲ್ಲಿದ್ದರೆ ಅಂತಹವರ ಬಳಿ ರೋಗ ಸುಳಿಯುವುದಿಲ್ಲ ಎಂದು ಧಾರವಾಡದ ಗುರುಬಸವ ಮಹಾಮನೆ ಮನಗುಂಡಿ ಬಸವಾನಂದ ಮಹಾಸ್ವಾಮೀಜಿ ಹೇಳಿದರು.

ಸ್ಥಳೀಯ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಹುರಕಡ್ಲಿ ಫೌಂಡೇಶನ್ ಹಮ್ಮಿಕೊಂಡ ಅಂಗಾಂಗಗಳ ವೈಫಲ್ಯಗಳಿಗೆ ಉಚಿತ ಚಿಕಿತ್ಸಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ದೇಶಿ ಔಷಧಿ, ಸಂಸ್ಕೃತಿ, ಪರಂಪರೆ ಮರೆತು ಕೃತಕ ಜೀವನ ಶೈಲಿ ಅಳವಡಿಸಿಕೊಂಡು ಶರೀರಕ್ಕೆ ರೋಗ ರುಜಿನ ಆಹ್ವಾನಿಸಿಕೊಂಡಿದ್ದೇವೆ. ಇವು ತೊಲಗಲು ವ್ಯಾಯಾಮ, ಉತ್ತಮ ಆಹಾರ ಪದ್ಧತಿ ಮೈಗೂಡಿಸಿಕೊಳ್ಳಬೇಕು. ಮಧ್ಯಮ ವರ್ಗ, ಬಡವರು, ನಿರ್ಗತಿಕರಿಗೆ ಇಂತಹ ಉಚಿತ ಶಿಬಿರಗಳು ಸಹಕಾರಿಯಾಗಿವೆ ಆದ್ದರಿಂದ ಶಿಬಿರದ ಸೌಲಭ್ಯಗಳನ್ನು ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಿ ಎಂದರು.

ಸ್ಥಳೀಯ ಸಿದ್ದಾರೂಢ ಮಠದ ಸಹಜಾನಂದ ಶ್ರೀಗಳು ಮಾತನಾಡಿ, ದಾನ, ಧರ್ಮಗಳಲ್ಲಿ ಆರೋಗ್ಯ ದಾನ ಶ್ರೇಷ್ಠವಾಗಿದೆ. ಹುರಕಡ್ಲಿ ಪರಿವಾರ ಉಚಿತ ಚಿಕಿತ್ಸೆ ನೀಡಿ ನೊಂದ ಹೃದಯಗಳಿಗೆ ಸ್ಪಂದಿಸುವ ಕಾರ್ಯ ಶ್ರೇಷ್ಠವಾದದ್ದು, ಕಳೆದ 16 ವರ್ಷಗಳಿಂದ ಅವರ ತಂದೆ ಮತ್ತು ತಾಯಿಯವರ ಸ್ಮರಣಾರ್ಥ ಸಮಾಜ ಸೇವೆ ಮಾಡುತ್ತಿರುವುದು. ಅತ್ಯಂತ ಶ್ಲಾಘನೀಯ ಎಂದರು.

ಜಮಖಂಡಿ ಸಾಹಿತಿ ಯಶವಂತ ಕೊಕ್ಕನವರ ಉಪನ್ಯಾಸ ನೀಡಿ, ಹುರಕಡ್ಲಿ ಫೌಂಡೇಶನ್ 16 ವರ್ಷಗಳಿಂದ ಕಣ್ಣು, ಕಿವಿ, ಕೃತಕ ಕೈ ಕಾಲು ಜೋಡಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಿ ಹುರಕಡ್ಲಿ ದಂಪತಿ ಬಡ ಜನರ ಬದುಕಿಗೆ ಬೆಳಕು ನೀಡುವ ಕೆಲಸ ಮಾಡಿದ್ದಾರೆ. ಅವರ ಸಮಾಜಮುಖಿ ಕೆಲಸಕ್ಕೆ ದೇವರು ಇನ್ನಷ್ಟು ಆಯುಷ್ಯ ಅರೋಗ್ಯ ಸಕಲ ಸೌಭಾಗ್ಯ ಕರುಣಿಸಲಿ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ಥಳೀಯ ದೃಷ್ಟಿ ಕೇಂದ್ರದ ರಾಘವೇಂದ್ರ ನರಗುಂದ ಮತ್ತು ಗಿಡ ಮೂಲಿಕೆ ಚಿಕಿತ್ಸಕ ವೈದ್ಯ ಪ್ರಕಾಶ ರಾಯಸ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ, ಉಪಾಧ್ಯಕ್ಷೆ ಶೈಲಾ ಭಾವಿಕಟ್ಟಿ, ಡಾ.ಅಜಿತ ಕನಕರಡ್ಡಿ, ಡಾ.ಮಂಜುನಾಥ್ ಚನ್ನಾಳ, ಪ್ರಭಯ ಮೇಟಿ, ಡಾ.ಎಂ.ಎಚ್.ನಾಯ್ಕ, ಸವಿತಾ ಹುರಕಡ್ಲಿ ವೇದಿಕೆಯಲ್ಲಿದ್ದರು.

ಹುರಕಡ್ಲಿ ಫೌಂಡೇಶನ್ ಅಧ್ಯಕ್ಷ ಚನ್ನಬಸು ಹುರಕಡ್ಲಿ ಮಾತನಾಡಿ, 15 ವರ್ಷದಿಂದ ರಕ್ತದಾನ ಶಿಬಿರ, ಕಣ್ಣು, ಕಿವಿ ತಪಾಸಣೆ ಶಿಬಿರ ನಡೆಸಲಾಗಿದೆ. ಇಂದು 60 ಜನರಿಗೆ ಹಲ್ಲಿನ ಸೆಟ್ ವಿತರಿಸಲಾಯಿತು. ಇಲ್ಲಿಯವರೆಗೆ ಒಂದು ಸಾವಿರಕ್ಕೂ ಹೆಚ್ಚು ಜನರಿಂದ ರಕ್ತದಾನ, 2616 ಜನರಿಗೆ ಕಣ್ಣಿನ ಚಿಕಿತ್ಸೆ, 5 ಸಾವಿರ ಜನರಿಗೆ ಉಚಿತ ಕಣ್ಣು ತಪಾಸಣೆ, 150 ಜನರಿಗೆ ಕೃತಕ ಕಾಲು ಜೋಡಣೆ ಅಲ್ಲದೆ 2012ರಲ್ಲಿ 25 ಜೋಡಿ ಸಾಮೂಹಿಕ ವಿವಾಹ, 2019-20 ಕರೋನಾ ಸಮಯದಲ್ಲಿ 500ಕ್ಕೂ ಹೆಚ್ಚು ಮನೆಗಳಿಗೆ ಆರೋಗ್ಯ ಕಿಟಗಳ ವಿತರಣೆ ಮಾಡಲಾಗಿದೆ. ಇನ್ನು ಅನೇಕ ಸಮಾಜಮುಖಿ ಕಾರ್ಯ ಮಾಡುವ ಆಸೆ ಇದೆ ಎಂದು ಹೇಳಿದರು.

ಈ ವೇಳೆ ಚನ್ನಪ್ಪ ಪಟ್ಟಣಶೆಟ್ಟಿ, ಪ್ರಭು ಬೆಳಗಲಿ, ಚನ್ನಬಸು ಹೊಸೂರ, ಪ್ರಕಾಶ ಬಾಡನವರ, ರಾಮಣ್ಣ ಬಂಡಿ, ಮಹಾಲಿಂಗ ಪೂಜಾರಿ, ಮಹಾಲಿಂಗ ಕಂಠಿ, ರಾಮಣ್ಣ ಹಟ್ಟಿ, ಈಶ್ವರ ಮುರಗೋಡ, ಶಂಕರ ಮುರಗೋಡ, ವೆಂಕಣ್ಣ ಬಿರಾದಾರ, ಅಶೋಕ ಮಂಟೂರ, ಸಿದ್ದು ದಡುತಿ, ಗುರೂಪಾದಯ್ಯಚಟ್ಟಿ ಮಠ, ರಾಜೇಂದ್ರ ನಾವಿ, ರವಿ ಗಿರೀಸಾಗರ, ಬಸು ಗಿರೀಸಾಗರ, ಶಿವಾನಂದ ಹಳ್ಳಿ,ಶಿವಾನಂದ ಬಿದರಿ , ಗಾಯನ ಕಲಾವಿದ ಎಂ.ಡಿ.ಆನಂದ, ಶಿವು ನೇಗಿನಾಳ, ಚಂದ್ರಶೇಖರ ಕೊಳಕಿ, ಶಂಕರ ನಿಲಾರಿ, ಶಂಕರ ನಾಗರಾಳ ಸೇರಿ ಹಲವರು ಇದ್ದರು.