ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದಲ್ಲಿ ವಿಜಯ ಕಾಲೇಜು ಸ್ಥಾಪನೆಯಾಗದಿದ್ದರೆ ಈ ಭಾಗದ ಜನರು ವಿದ್ಯಾವಂತರಾಗುವುದೇ ಕಷ್ಟವಾಗುತ್ತಿತ್ತು. ಜತೆಗೆ ಎಸ್ಸೆಸ್ಸೆಲ್ಸಿ ಕೂಡ ದಾಟಲು ಸಾಧ್ಯವಾಗುತ್ತಿರಲಿಲ್ಲ ಎಂದು ಹರಟೆ ಖ್ಯಾತಿಯ ಪ್ರೊ.ಕೃಷ್ಣೇಗೌಡ ಹೇಳಿದರು.ಪಟ್ಟಣದ ವಿಜಯ ಸಮೂಹ ಶಿಕ್ಷಣ ಸಂಸ್ಥೆಗಳ ಒಳಾವರಣದ ಡಾ.ಎಂ.ಎಸ್.ಕೃಷ್ಣಕುಮಾರ್ ಸಭಾಂಗಣದಲ್ಲಿ ವಯೋನಿವೃತ್ತಿಗೊಂಡ ಎಂ.ರಮೇಶ್ ಮತ್ತು ಎ.ಮಂಜುನಾಥ್ ಅವರನ್ನು ಕುರಿತು ಮಾತನಾಡಿದರು.
ಗ್ರಾಮೀಣ ಜನರ ಬದುಕು ಹಸನಾಗಿಸುವಲ್ಲಿ ವಿಜಯ ಕಾಲೇಜಿನ ಕೊಡುಗೆ ಬಹು ದೊಡ್ಡದು. ಈ ಕಾಲೇಜಿಗೆ ದೊಡ್ಡ ಪರಂಪರೆ ಇದೆ. ಎಂ.ರಮೇಶ್ ಮತ್ತು ಎ.ಮಂಜುನಾಥ್ ಪರಂಪರೆಯ ಭಾಗವಾಗಿದ್ದಾರೆ ಎಂದರು.ವಿಜಯ ಕಾಲೇಜು ಆರಂಭವಾಗದಿದ್ದರೆ ಬಹುತೇಕ ಜನರು ಹಳ್ಳಿಯಲ್ಲಿಯೇ ಉಳಿಯುತ್ತಿದ್ದರು. ವಿದ್ಯಾಭ್ಯಾಸವಿಲ್ಲದೆ ಉಳುಮೆಯಲ್ಲಿ ತೊಡಗಿಕೊಳ್ಳಬೇಕಾಗಿತ್ತು. ಈ ಕಾಲೇಜು ಸ್ಥಾಪನೆಯಾದ್ದರಿಂದ ಅನೇಕರು ಎಂಜನಿಯರ್, ಡಾಕ್ಟರ್ ಹಾಗೂ ದೊಡ್ಡ ದೊಡ್ಡ ಹುದ್ದೆ ಅಲಂಕರಿಸಲು ಸಾಧ್ಯವಾಗಿದೆ ಎಂದರು.
ವಿಜಯ ಕಾಲೇಜಿಗೆ ಅಂತಹ ಉತ್ತಮ ಹೆಸರಿದೆ. ಇಲ್ಲಿ ಸಾರ್ಥಕವಾದ ಅಧ್ಯಾಪಕ ವೃತ್ತಿ ಮಾಡಿ ನಿವೃತ್ತಿಯಾಗುತ್ತಿರುವ ಎಂ.ರಮೇಶ್ ಮತ್ತು ಎ.ಮಂಜುನಾಥ್ ಅವರ ನಿವೃತ್ತಿ ನಂತರದ ಬದುಕು ಸುಖಕರವಾಗಿರಲಿ ಎಂದು ಹಾರೈಸಿದರು.ಮಾಜಿ ಶಾಸಕ, ವಿದ್ಯಾ ಪ್ರಚಾರ ಸಂಘದ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಮಾತನಾಡಿ, ಎಂ.ರಮೇಶ್ ಮತ್ತು ಎ.ಮಂಜುನಾಥ್ ಅವರು ಉತ್ತಮ ಸಂಘಟಕರು. ಯಾವುದೇ ಕಾರ್ಯಕ್ರಮ ಮಾಡಬೇಕಿದ್ದರೂ ಇವರಿಬ್ಬರ ಸಲಹೆ, ಮಾರ್ಗದರ್ಶನ ಪಡೆಯಲಾಗುತ್ತಿತ್ತು ಎಂದರು.
ಸುವರ್ಣ ಕರ್ನಾಟಕದ ಸಂದರ್ಭದಲ್ಲಿ 1 ತಿಂಗಳ ಕನ್ನಡ ಹಬ್ಬ ನಡೆದಾಗ ಹಾಗೂ ಪಾಂಡವ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ರಾಷ್ಟ್ರೀಯ ಮಟ್ಟದ ಪೈಕಾ ಕ್ರೀಡಾಕೂಟವನ್ನು ಉತ್ತಮವಾಗಿ ಸಂಘಟಿಸಿದ್ದರು. ಯಾವ ಸ್ವಾರ್ಥವೂ ಇಲ್ಲದ ವಿಶ್ವಾಸಿಗರಿವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹಿರಿಯರು ಕಟ್ಟಿ ಬೆಳೆಸಿದ ವಿಜಯ ಶಿಕ್ಷಣ ಸಂಸ್ಥೆಯು ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸಿದೆ. ಇಲ್ಲಿನ ಶಿಕ್ಷಕರು ಜವಾಬ್ದಾರಿ ನಿರ್ವಹಿಸದಿದ್ದರೆ ಗೃಹ ಇಲಾಖೆ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಎಸ್.ಆರ್. ಉಮಾಶಂಕರ್ ಅನೇಕ ಅಧಿಕಾರಿಗಳ ಉಗಮವಾಗುತ್ತಿರಲಿಲ್ಲ ಎಂದರು.
ಸಂಸ್ಥೆ 75ನೇ ವರ್ಷದ ಕಾರ್ಯಕ್ರಮ ಸದ್ಯದಲ್ಲೇ ನಡೆಸಲಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಸಂಸ್ಥೆ ನವೀಕರಣಕ್ಕಾಗಿ 2 ಕೋಟಿ ಸಿಎಸ್‌ಆರ್ ಅನುದಾನ ಬಿಡುಗಡೆಗೆ ಒಪ್ಪಿದ್ದಾರೆ. ಎಂ.ರಮೇಶ್ ಮತ್ತು ಎ.ಮಂಜುನಾಥ್ ಅವರ ಉಸ್ತುವಾರಿಯಲ್ಲಿ ನವೀಕರಣ ಕಾಮಗಾರಿ ನಡೆಸಲಾಗುವುದು ಎಂದರು.ವಯೋನಿವೃತ್ತಿಗೊಂಡ ಎಂ.ರಮೇಶ್ ಮತ್ತು ಎ.ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು. ಈ ವೇಳೆ ಗಾಂಧಿಭವನ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು, ನಿವೃತ್ತ ಜಂಟಿ ನಿರ್ದೇಶಕ ಎನ್.ಕುಮಾರಸ್ವಾಮಿ, ನಿವೃತ್ತ ಪ್ರಾಂಶುಪಾಲರಾದ ಬಿ.ನಾರಾಯಣಗೌಡ, ಎಸ್.ನಾಗರಾಜು, ಚಿತ್ರ ವಿನ್ಯಾಸಕ ಪ್ರಕಾಶ್ ಚಿಕ್ಕಪಾಳ್ಯ, ಕಸಾಪ ಮಾಜಿ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್, ಭೂ ದಾಖಲೆಗಳ ಇಲಾಖೆ ನಿವೃತ್ತ ಉಪ ನಿರ್ದೇಶಕ ಎಂ.ಎಸ್.ಮರಿಸ್ವಾಮಿಗೌಡ, ವಿದ್ಯಾ ಪ್ರಚಾರ ಸಂಘದ ಗೌ.ಕಾರ್ಯದರ್ಶಿ ಕೆ.ವಿ.ಬಸವರಾಜು, ಖಜಾಂಚಿ ಎನ್.ರಾಮೇಗೌಡ, ಸಹ ಕಾರ್ಯದರ್ಶಿ ಬಿ.ಎಸ್.ಗೋಪಾಲಸ್ವಾಮಿ, ನಿರ್ದೇಶಕರಾದ ಕೆ.ಸೋಮೇಗೌಡ, ಡಾ.ಎಂ.ಮಾಯಿಗೌಡ, ಪಿ.ಎಸ್.ಲಿಂಗರಾಜು ಇತರರಿದ್ದರು.