ವಿಜಯೇಂದ್ರ ಗೆಲವು ಕಾಂಗ್ರೆಸ್‌ ಭಿಕ್ಷೆ ಆಗಿದ್ರೆ ಅಂಥ ರಾಜ್ಯಾಧ್ಯಕ್ಷರೇ ಬೇಡ

| Published : Aug 13 2024, 12:53 AM IST

ವಿಜಯೇಂದ್ರ ಗೆಲವು ಕಾಂಗ್ರೆಸ್‌ ಭಿಕ್ಷೆ ಆಗಿದ್ರೆ ಅಂಥ ರಾಜ್ಯಾಧ್ಯಕ್ಷರೇ ಬೇಡ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿಕೆಯೇ ಸಾಕ್ಷಿ. ಕಾಂಗ್ರೆಸ್ಸಿನ ಭಿಕ್ಷೆಯಲ್ಲಿ ಬಿ.ವೈ.ವಿಜಯೇಂದ್ರ ಗೆದ್ದಿದ್ದರೆ ಅಂತಹ ಭಿಕ್ಷೆಯ ರಾಜ್ಯಾಧ್ಯಕ್ಷರು ನಮಗೆ ಬೇಡ. ರಾಜೀನಾಮೆ ನೀಡಿ ಮತ್ತೊಮ್ಮೆ ವಿಧಾನಸಭೆ ಚುನಾವಣೆಗೆ ಬಿ.ವೈ.ವಿಜಯೇಂದ್ರ ನಿಂತು, ಗೆಲ್ಲಬೇಕು ಎಂದು ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ ದಾವಣಗೆರೆಯಲ್ಲಿ ಒತ್ತಾಯಿಸಿದ್ದಾರೆ.

- ರಾಜ್ಯದಲ್ಲಿ ಮ್ಯಾಚ್ ಫಿಕ್ಸಿಂಗ್‌ ಆರೋಪಕ್ಕೆ ಡಿಕೆಶಿ ಹೇಳಿಕೆ ಪುಷ್ಟಿ: ಶಾಸಕ ಹರೀಶ್‌ ಹೇಳಿಕೆ

- ಶಾಸಕ ಸ್ಥಾನಕ್ಕೆ ಬಿವೈವಿ ರಾಜೀನಾಮೆ ನೀಡಿ ಚುನಾವಣೆ ಗೆದ್ದು ಬರಲಿ ಎಂದು ಒತ್ತಾಯ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿಕೆಯೇ ಸಾಕ್ಷಿ. ಕಾಂಗ್ರೆಸ್ಸಿನ ಭಿಕ್ಷೆಯಲ್ಲಿ ಬಿ.ವೈ.ವಿಜಯೇಂದ್ರ ಗೆದ್ದಿದ್ದರೆ ಅಂತಹ ಭಿಕ್ಷೆಯ ರಾಜ್ಯಾಧ್ಯಕ್ಷರು ನಮಗೆ ಬೇಡ. ರಾಜೀನಾಮೆ ನೀಡಿ ಮತ್ತೊಮ್ಮೆ ವಿಧಾನಸಭೆ ಚುನಾವಣೆಗೆ ಬಿ.ವೈ.ವಿಜಯೇಂದ್ರ ನಿಂತು, ಗೆಲ್ಲಬೇಕು ಎಂದು ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ನಿನ್ನ ಗೆಲುವು ಕಾಂಗ್ರೆಸ್ ಕೊಟ್ಟ ಭಿಕ್ಷೆಯೆಂದು, ಶಿಕಾರಿಪುರದಲ್ಲಿ ನಾಗರಾಜಗೌಡ ಅವರಿಗೆ ನಿಲ್ಲಿಸಿದ್ದರೆ ಗೊತ್ತಾಗುತ್ತಿತ್ತು ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಇದು ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿರುವುದಕ್ಕೆ ಸಾಕ್ಷಿ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಿಗೆ ಮನವಿ ಮಾಡುತ್ತೇನೆ. ಕಾಂಗ್ರೆಸ್ಸಿನ ಭಿಕ್ಷೆಯಲ್ಲಿ ಗೆದ್ದವರು ನಮಗೆ ರಾಜ್ಯಾಧ್ಯಕ್ಷ ಆಗಿರುವುದು ಬೇಡ. ತಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಯಾರ ಹಂಗು ಇಲ್ಲದೇ ಗೆದ್ದು ತೋರಿಸಿ. ರಾಜಕಾರಣದಲ್ಲಿ ಮ್ಯಾಚ್ ಫಿಕ್ಸಿಂಗ್‌ ನಡೆಯುತ್ತಿದೆ ಎಂದು ನಾನು ಹಿಂದೆಯೇ ಆರೋಪಿಸಿದ್ದೆ. ಈಗ ಅದನ್ನು ಕೆಪಿಸಿಸಿ ಅಧ್ಯಕ್ಷರೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದರು.

ಮುಡಾ, ವಾಲ್ಮೀಕಿ ನಿಗಮದ ಹಗರಣ ಹೀಗೆ ವಿಪಕ್ಷಗಳು ಆರೋಪ ಮಾಡುತ್ತಿದ್ದರೆ ಆಡಳಿತ ಪಕ್ಷದವರು ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀವು ಮಾಡಿಲ್ಲವೇ? ನಿಮ್ಮ ಸರ್ಕಾರವಿದ್ದಾಗ ಆಗಿಲ್ಲವೇ ಎಂಬುದಾಗಿ ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ 3-6ರ ಮುಚ್ಚಿಟ್ಟ ಸತ್ಯ ಹೊರಬರಬೇಕಾ ಅಂತಾ ಆಡಳಿತ ಪಕ್ಷದವರು ಬೆದರಿಸುತ್ತಿರುವುದು ಬ್ಲಾಕ್ ಮೇಲ್ ಅಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.

- - - ಬಾಕ್ಸ್‌-1

* ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ

ದಾವಣಗೆರೆ: ಹರಿಹರ ತಾಲೂಕಿನ ಗಡಿ ಭಾಗದ ಹಳ್ಳಗಳನ್ನು ಮುಚ್ಚುವ ಕೆಲಸವನ್ನು ಮಾಡಿ, ಗಡಿ ಗುರುತುಗಳನ್ನು ಅಳಿಸುವ ಮೂಲಕ ಅಕ್ರಮ ಎಸಗುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನಿಸಿದಾಗ ಎಲ್ಲವೂ ಸರಿ ಇದೆಯೆಂಬ ಉತ್ತರ ನೀಡಿದ್ದರು. ಈಗ ನನ್ನ ಹೋರಾಟಕ್ಕೆ ಜಯ ಸಿಕ್ಕಿದ್ದು, ಮೊದಲಿನಂತೆ ನೈಸರ್ಗಿಕ ಹಳ್ಳಗಳನ್ನು ಸರಿಪಡಿಸಲಾಗಿದೆ ಎಂದು ಶಾಸಕ ಬಿ.ಪಿ.ಹರೀಶ ಹೇಳಿದರು.

ಮುಚ್ಚಿರುವ ಹಳ್ಳಗಳನ್ನು ಈಗ ಮತ್ತೆ ಮೂಲ ಸ್ವರೂಪಕ್ಕೆ ತರಲಾಗಿದೆ. ಸರ್ಕಾರಕ್ಕೆ ಸೇರಿದ 30-40 ಎಕರೆ ಗೋಮಾಳ ಜಾಗವನ್ನು ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಕೆರೆಯನ್ನು ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಹಗರಣಗಳನ್ನು ಬಿಚ್ಚಿಡುತ್ತೇನೆ ಎಂದರು.

- - - ಟಾಪ್‌ ಕೋಟ್‌ ಬೆಳಗಾವಿಯಲ್ಲಿ ಭಾನುವಾರ ಲೋಕಸಭೆ, ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ರಾಜ್ಯ ನಾಯಕರು ವಿಮರ್ಶೆ ಮಾಡಿದ್ದಾರೆ. ವಿಶೇಷವಾಗಿ ಲೋಕಸಭೆ ಚುನಾವಣೆ ಫಲಿತಾಂಶ, ಕೆಲವು ಕ್ಷೇತ್ರಗಳ ಸೋಲಿನ ಬಗ್ಗೆ ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆಯಷ್ಟೇ

- ಬಿ.ಪಿ.ಹರೀಶ, ಬಿಜೆಪಿ ಶಾಸಕ, ಹರಿಹರ ಕ್ಷೇತ್ರ

- - - -12ಕೆಡಿವಿಜಿ11:

ದಾವಣಗೆರೆಯಲ್ಲಿ ಸೋಮವಾರ ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.