ಸಾರಾಂಶ
ವಿಶ್ವ ಜಲ ದಿನ, ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆಕನ್ನಡಪ್ರಭ ವಾರ್ತೆ ಸಂಡೂರು
ಎಲ್ಲಾ ಜೀವಿಗಳಿಗೂ ಅಗತ್ಯವಾದ ಮತ್ತು ಅಮೂಲ್ಯವಾದ ನೀರನ್ನು ಸಂರಕ್ಷಿಸದಿದ್ದರೆ, ಭವಿಷ್ಯದಲ್ಲಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಸಂಡೂರಿನ ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ದೇವರೆಡ್ಡಿ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ತಾಲೂಕು ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಪುರಸಭೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲದಿನ ಹಾಗೂ ಗ್ರಾಹಕರ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಿಕರು ನೀರಿನ ಮಹತ್ವವನ್ನು ಅರಿತು ಕೆರೆ ಕುಂಟೆ, ಜಲಾಶಯಗಳನ್ನು ನಿರ್ಮಿಸಿ ನೀರಿನ ಸಂರಕ್ಷಣೆಗೆ ಒತ್ತು ಕೊಟ್ಟಿದ್ದರು. ನಾವು ಸಹ ಅತ್ಯಮೂಲ್ಯವಾದ ನೀರನ್ನು ಸದ್ಭಳಕೆ ಮಾಡಿಕೊಳ್ಳಬೇಕು. ನೀರನ್ನು ಪೋಲು ಮಾಡದೆ, ಮಲೀನ ಮಾಡದೆ, ಮುಂದಿನ ಜನಾಂಗಕ್ಕೂ ಅದು ಯೋಗ್ಯ ರೀತಿಯಲ್ಲಿ ದೊರೆಯುವಂತೆ ಮಾಡಬೇಕು. ಹಾಗೆಯೇ ಜನತೆ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಂಡಾಗ, ವ್ಯಾಪಾರದಲ್ಲಿ ಮೋಸ ಹೋಗುವುದರಿಂದ ತಪ್ಪಿಸಿಕೊಳ್ಳಬಹುದು. ಮೋಸವಾದಾಗ, ಪರಿಹಾರವನ್ನೂ ಪಡೆದುಕೊಳ್ಳಬಹುದು ಎಂದರು.ವಕೀಲ ಜಿ. ಮಲ್ಲಿಕಾರ್ಜುನ ವಿಶ್ವ ಜಲದಿನದ ಕುರಿತು ಉಪನ್ಯಾಸ ನೀಡಿ, ನೀರಿನ ಸಂರಕ್ಷಣೆಯ ಕುರಿತು ವಿಶ್ವದಲ್ಲಿ ಜಾಗೃತಿ ಮೂಡಿಸಲು ೧೯೯೩ರಿಂದ ವಿಶ್ವ ಜಲದಿನವನ್ನು ಪ್ರತಿ ವರ್ಷ ಮಾ.೨೨ರಂದು ಆಚರಿಸಲಾಗುತ್ತಿದೆ. ನೀರ್ಗಲ್ಲುಗಳ (ಗ್ಲೇಸಿಯರ್) ಸಂರಕ್ಷಣೆ ಈ ವರ್ಷದ ಘೋಷವಾಕ್ಯವಾಗಿದೆ. ಭೂಮಿಯಲ್ಲಿ ಲಭ್ಯವಿರುವ ನೀರಿನಲ್ಲಿ ಮಾನವನ ಬಳಕೆಗೆ ಲಭ್ಯವಿರುವುದು ಕೇವಲ ಶೇ. ೨.೫ ರಷ್ಟು ಮಾತ್ರ. ಇದರಲ್ಲಿ ಸ್ವಲ್ಪ ಭಾಗ ಅಂತರ್ಜಲದ ರೂಪದಲ್ಲಿ ಹಾಗೂ ಸ್ವಲ್ಪ ಭಾಗ ಮಂಜುಗಡ್ಡೆಗಳ ರೂಪದಲ್ಲಿದೆ. ಹೀಗಾಗಿ ಲಭ್ಯವಿರುವ ಕಡಿಮೆ ಪ್ರಮಾಣದ ನೀರನ್ನು ಪೋಲು ಮಾಡದೆ, ಸದ್ಭಳಕೆ ಮಾಡಿಕೊಳ್ಳಬೇಕು. ಜಲ ಮೂಲಗಳ ಮಾಲಿನ್ಯ ತಡೆಯಲು ಜನತೆ ಹಾಗೂ ಸರ್ಕಾರ ಒಗ್ಗೂಡಿ ಶ್ರಮಿಸಬೇಕಿದೆ ಎಂದರು.
ವಕೀಲ ಡಿ. ನಾಗರಾಜ ವಿಶ್ವ ಗ್ರಾಹಕರ ದಿನಾಚರಣೆಯ ಮಹತ್ವ, ಗ್ರಾಹಕರೆಂದರೆ ಯಾರು? ಅವರ ಹಕ್ಕುಗಳ ಯಾವುವು? ಗ್ರಾಹಕರು ಸರಕು ಮತ್ತು ಸೇವೆಗಳನ್ನು ಪಡೆಯುವಾಗ ವಹಿಸಬೇಕಾದ ಎಚ್ಚರಿಕೆಯ ಕುರಿತು ವಿವರಿಸಿದರು.ತಾಪಂ ಇಒ ರೇಣುಕಾಚಾರ್ಯ ಸ್ವಾಮಿ ಮಾತನಾಡಿ, ನರೇಗಾ ಯೋಜನೆ ಅಡಿಯಲ್ಲಿ ಅತಿ ಹೆಚ್ಚಿನ ಮಹತ್ವವನ್ನು ನೀರು ಮತ್ತು ಮಣ್ಣಿನ ಸಂರಕ್ಷಣೆಗಾಗಿ ನೀಡಲಾಗುತ್ತಿದೆ. ಹರಿಯುವ ನೀರನ್ನು ನಿಲ್ಲಿಸುವುದು, ನಿಲ್ಲಿಸಿದ ನೀರನ್ನು ಭೂಮಿಯಲ್ಲಿ ಇಂಗಿಸಿ ಅಂತರ್ಜಲವನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತಿದೆ. ನಮ್ಮ ನಾಗರಿಕತೆಗಳು ಒಂದೆಡೆ ನೆಲೆ ನಿಲ್ಲಲು, ಅಭಿವೃದ್ಧಿ ಹೊಂದಲು ಸಹಕಾರಿಯಾಗಿದ್ದು ನೀರು. ಇಂತಹ ನೀರನ್ನು ನಾವು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಅರಳಿ ಮಲ್ಲಪ್ಪ, ಉಪಾಧ್ಯಕ್ಷ ಕೆ.ಆರ್. ದಾದಾಪೀರ್, ಪುರಸಭೆ ಮುಖ್ಯಾಧಿಕಾರಿ ಕೆ. ಜಯಣ್ಣ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ವಿನಾಯಕ, ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಮಂಜುನಾಥಗೌಡ, ಹಿರಿಯ ವಕೀಲ ಟಿ.ಎಂ. ಶಿವಕುಮಾರ್, ವಿವಿಧ ಗ್ರಾಮಪಂಚಾಯ್ತಿಗಳ ಪಂಪ್ ಆಪರೇಟರ್ಸ್ ಹಾಗೂ ನಲ್ ಜಲ್ ಮಿತ್ರರು ಉಪಸ್ಥಿತರಿದ್ದರು. ಬಿ.ಎಸ್. ಮಂಜುನಾಥ್ ಪ್ರಾರ್ಥಿಸಿದರು. ರಾಜಶೇಖರ್ ಸ್ವಾಗತಿಸಿದರು. ಇಂಡಿ ಮಹಾರುದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಎಂ. ಅಂಜಿನಪ್ಪ ವಂದಿಸಿದರು.