ತುಂಗಭದ್ರಾ ಜಲಾಶಯದಿಂದ 2ನೇ ಬೆಳೆಗೆ ನೀರು ನೀಡದಿದ್ದರೆ ಅರೆಬೆತ್ತಲೆ ಅಹೋರಾತ್ರಿ ಧರಣಿ

| Published : Aug 22 2025, 01:00 AM IST

ತುಂಗಭದ್ರಾ ಜಲಾಶಯದಿಂದ 2ನೇ ಬೆಳೆಗೆ ನೀರು ನೀಡದಿದ್ದರೆ ಅರೆಬೆತ್ತಲೆ ಅಹೋರಾತ್ರಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಲಾಶಯದಲ್ಲಿ ಕೇವಲ 40 ಟಿಎಂಸಿ ನೀರಿದ್ದರೂ ಎರಡನೇ ಬೆಳೆಗೆ ನೀರು ಒದಗಿಸಲಾಗಿದೆ. ಆದರೆ, ಈ ಸರ್ಕಾರ ಕ್ರಸ್ಟ್‌ಗೇಟ್‌ಗಳ ಬದಲಾವಣೆಯ ನೆಪವೊಡ್ಡಿ ರೈತರನ್ನು ಅತಂತ್ರ ಮಾಡಲು ಹೊರಟಿದೆ

ಮುನಿರಾಬಾದ್:

ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ 2ನೇ ಬೆಳೆಗೆ ನೀರು ಕೊಡದಿದ್ದರೆ ಸೆಪ್ಟೆಂಬರ್‌ನಲ್ಲಿ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಕಚೇರಿ ಎದುರು ಅನಿರ್ದಿಷ್ಟಾವಧಿ ವರೆಗೂ ಅರೆಬೆತ್ತಲೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಅಮರೇಶ್‌ ಚಾಗ್ಭಾವಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಧಿವೇಶನದಲ್ಲಿ ಜಲಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಜಲಾಶಯದ ಗೇಟ್‌ಗಳ ಬದಲಾವಣೆ ಇರುವುದರಿಂದ 2ನೇ ಬೆಳೆಗೆ ನೀರು ನೀಡುವುದಿಲ್ಲವೆಂದು ಹೇಳಿದ್ದಾರೆ. ಹಾಗಾದರೆ ಕಳೆದ ವರ್ಷ ಆಗಸ್ಟ್‌ನಲ್ಲಿ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಮುರಿದು ಬಿದ್ದಿದ್ದರೂ ಈ ವರೆಗೆ ದುರಸ್ತಿ ಮಾಡಲು ರಾಜ್ಯ ಸರ್ಕಾರಕ್ಕೆ ಆಗಿಲ್ಲ. ಇದೀಗ 8 ತಿಂಗಳಲ್ಲಿ ಎಲ್ಲ ಗೇಟ್‌ಗಳನ್ನು ಬದಲಾಯಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಈ ವರ್ಷ ಮಾತ್ರವಲ್ಲದೆ ಇನ್ನೆರಡು ವರ್ಷವೂ ಹಿಂಗಾರು ಬೆಳೆಗೆ ನೀರು ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಲಾಶಯದಲ್ಲಿ ಕೇವಲ 40 ಟಿಎಂಸಿ ನೀರಿದ್ದರೂ ಎರಡನೇ ಬೆಳೆಗೆ ನೀರು ಒದಗಿಸಲಾಗಿದೆ. ಆದರೆ, ಈ ಸರ್ಕಾರ ಕ್ರಸ್ಟ್‌ಗೇಟ್‌ಗಳ ಬದಲಾವಣೆಯ ನೆಪವೊಡ್ಡಿ ರೈತರನ್ನು ಅತಂತ್ರ ಮಾಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.

19ನೇ ಕ್ರಸ್ಟ್‌ಗೇಟ್‌ ಮುರಿದು ಬಿದ್ದಾಗ ಭೇಟಿ ನೀಡಿದ ತಜ್ಞರು ಜಲಾಶಯದ ಎಲ್ಲ 33 ಗೇಟ್‌ಗಳನ್ನು ಶೀಘ್ರದಲ್ಲಿಯೇ ಬದಲಾಯಿಸುವಂತೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿತು. ಇದರ ಪರಿಣಾಮ ವರ್ಷ ಕಳೆದರೂ ಒಂದು ಗೇಟ್‌ನ್ನು ಬದಲಾಯಿಸಲು ಆಗಿಲ್ಲ. ಗಂಭೀರವಾಗಿ ಪರಿಗಣಿಸಿದ್ದರೆ ಇಷ್ಟರೊಳಗೆ ಎಲ್ಲ ಗೇಟ್‌ ಬದಲಾಯಿಸಬಹುದಿತ್ತು. ಅವರ ನಿಷ್ಕಾಳಜಿ ಹಾಗೂ ನಿರ್ಲಕ್ಷ್ಯದಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಚಾಮರಾಸ್ ಮಾಲಿಪಾಟೀಲ್ ಕಿಡಿಕಾರಿದ್ದಾರೆ.

ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಯ 15 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಸರ್ಕಾರ ಹಿಂಗಾರು ಬೆಳೆಗೆ ನೀರು ನೀಡದಿದ್ದರೆ ಈ ನಾಲ್ಕು ಜಿಲ್ಲೆಗಳ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸರ್ಕಾರದಿಂದ ರೈತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಸೆಪ್ಟಂಬರ್‌ನಲ್ಲಿ ತುಂಗಭದ್ರಾ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.