ಪೈಗಂಬರರ ತತ್ವ ಅಳವಡಿಸಿಕೊಂಡರೆ ಶಾಂತಿ-ನೆಮ್ಮದಿ

| Published : Sep 06 2025, 01:00 AM IST

ಸಾರಾಂಶ

ರಾಮನಗರ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ನಡೆಯುವ ಶಾಂತಿ , ಸೌಹಾರ್ದತೆಯ ಪ್ರತೀಕವಾಗಿರುವ ಈದ್ ಮಿಲಾದ್ ಹಬ್ಬವನ್ನು ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಶುಕ್ರವಾರ ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ರಾಮನಗರ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ನಡೆಯುವ ಶಾಂತಿ , ಸೌಹಾರ್ದತೆಯ ಪ್ರತೀಕವಾಗಿರುವ ಈದ್ ಮಿಲಾದ್ ಹಬ್ಬವನ್ನು ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಶುಕ್ರವಾರ ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಮನುಕುಲದ ಏಳಿಗೆಗಾಗಿ ಜನ್ಮ ತಾಳಿದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ನಿಮಿತ್ತ ಈದ್ ಮಿಲಾದ್ ಆಚರಿಸಲಾಗುತ್ತದೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕುಗಳಲ್ಲಿ ಮುಸ್ಲಿಮರು ಮಧ್ಯಾಹ್ನ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸಕಲ ಜೀವರಾಶಿಗೆ ಒಳಿತಾಗಲಿ ಎಂದು ಮುಸ್ಲಿಮರು ಅಲ್ಲಾಹುನಲ್ಲಿ ಪ್ರಾರ್ಥಿಸಿದರು. ಪೈಗಂಬರರ ತತ್ವ ಅಳವಡಿಸಿಕೊಂಡರೆ ಶಾಂತಿ-ನೆಮ್ಮದಿ ಸಿಗುತ್ತದೆ ಎಂದು ಮುಸ್ಲಿಂ ಧರ್ಮ ಗುರುಗಳು ಬೋಧಿಸಿದರು.

ಹಬ್ಬದ ಅಂಗವಾಗಿ ಪ್ರಮುಖ ರಸ್ತೆಗಳು, ಗಲ್ಲಿಗಳನ್ನು ಬಂಟಿಂಗ್ಸ್ ಮತ್ತು ಧ್ವಜಗಳಿಂದ ಅಲಂಕರಿಸಲಾಗಿತ್ತು. ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಜಗಮಗಿಸುವಂತೆ ಮಾಡಲಾಗಿತ್ತು. ಅದರಲ್ಲೂ ದರ್ಗಾ, ಮಸೀದಿಗಳು, ಮಸೀದಿಗಳನ್ನು ಸಂಪರ್ಕಿಸುವ ರಸ್ತೆಗಳು, ಮುಸ್ಲಿಮರು ಹೆಚ್ಚಿರುವ ಪ್ರದೇಶಗಳು ವಿದ್ಯುದ್ದೀಪಗಳಿಂದ ಅಲಂಕಾರಗೊಂಡಿದ್ದವು.

ಈದ್ ಮಿಲಾದ್ ನ ಪ್ರಮುಖ ಆಕರ್ಷಣೆ ಎಂದರೆ ಸಾಮೂಹಿಕ ಮೆರವಣಿಗೆಯಾಗಿದೆ. ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನ ಅಂಗವಾಗಿ ನಡೆಸುವ ಮೆರವಣಿಗೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ವಿವಿಧೆಡೆ ಹಸಿರು ಧ್ವಜಗಳು, ಬಾವುಟಗಳು ಹಾರಾಡಿದವು. ಮುಸ್ಲಿಮರು ಮೆರವಣಿಗೆಯಲ್ಲಿ ಪೈಗಂಬರರ ಕುರಿತು ಗುಣಗಾನ ಮಾಡಿದರು. ಮಕ್ಕಳು ಬಣ್ಣ ಬಣ್ಣದ ಉಡುಪು ಧರಿಸಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಮೆಕ್ಕಾ , ಮದೀನಾ ಗುಂಬಜ್ ಹಾಗೂ ಟಿಪ್ಪು ಸುಲ್ತಾನನ ಪ್ರತಿಕೃತಿಗಳು ಗಮನ ಸೆಳೆದವು.

ರಾಮನಗರದ ಜಾಮಿಯಾ ಮಸೀದಿಯಿಂದ ಮಧ್ಯಾಹ್ನ ಆರಂಭಗೊಂಡ ಮೆರವಣಿಗೆ ನಾಲಬಂದವಾಡಿ, ಮೋತಿನಗರ, ಮೊಹಬೂಬ್ ನಗರ, ಟಿಪ್ಪು ನಗರ ಮಾರ್ಗವಾಗಿ ವಾಟರ್ ಟ್ಯಾಂಕ್ ವೃತ್ತಕ್ಕೆ ಆಗಮಿಸಿ ಶೆಟ್ಟಿಹಳ್ಳಿ ರಸ್ತೆ ಮೂಲಕ ಮಸೀದಿವರೆಗೆ ತೆರಳಿತು. ಕಣ್ಣು ಹರಿದಷ್ಟು ದೂರ ಕಾಣುತ್ತಿದ್ದ ಬೃಹತ್ ಮೆರವಣಿಗೆಯಲ್ಲಿ ಹಿರಿಯರು, ಕಿರಿಯರು ಎನ್ನದೆ ಎಲ್ಲರು ಸಂಭ್ರಮ, ಸಡಗರಗಳಿಂದ ಭಾಗವಹಿಸಿದ್ದರು. ಹೆಣ್ಣು ಮಕ್ಕಳು ರಸ್ತೆಯ ಎರಡೂ ಕಡೆ ನಿಂತು ಮೆರವಣಿಗೆಯ ಉತ್ಸಾಹವನ್ನು ಕಣ್ತುಂಬಿಸಿಕೊಂಡರು.

ಮೆರವಣಿಗೆಯಲ್ಲಿ ಸಹಸ್ರಾರು ಜನರು ವಿವಿಧ ಘೋಷಣೆಗಳನ್ನು ಕೂಗುತ್ತಾ ಸಂಚರಿಸಿದರು. ಸಾಂಪ್ರದಾಯಿಕ ದಿರಿಸಿನಲ್ಲಿದ್ದ ಮಕ್ಕಳು, ಯುವಕರು ಇಸ್ಲಾಂ ಧರ್ಮದ ಧ್ವಜಗಳನ್ನು ಹಾರಿಸಿ ಸಂಭ್ರಮಿಸಿದರು. ಕವ್ವಾಲಿಗಳು ಜನರನ್ನು ರಂಜಿಸಿದವು. ಪವಿತ್ರ ಧಾರ್ಮಿಕ ಸ್ಥಳಗಳನ್ನು ಬಿಂಬಿಸುವ ರೂಪಕಗಳು ಗಮನ ಸೆಳೆದವು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ಸಂಘ ಸಂಸ್ಥೆಗಳು ಹಾಗೂ ಯುವಕರ ತಂಡ ಕುಡಿಯುವ ನೀರು, ಶರಬತ್ , ಮಜ್ಜಿಗೆ ವಿತರಿಸಿದರು. ಮೆರವಣಿಗೆ ವೈಭವವನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ರಸ್ತೆ ಇಕ್ಕೆಲಗಳಲ್ಲೂ ನೂರಾರು ಜನರು ನಿಂತಿದ್ದರು. ಸಮುದಾಯದ ಪ್ರಮುಖ ಮುಖಂಡರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಬಿಗಿ ಪೊಲೀಸ್ ಬಂದೋಬಸ್ತ್ :

ಈ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚರಿಕಾ ಕ್ರಮ ವಹಿಸಿದ್ದರು. ಕೆಎಸ್‌ಆರ್‌ಪಿ ಹಾಗೂ ಡಿಆರ್ ತುಕುಡಿಗಳನ್ನು ಆಯಾ ಕಟ್ಟಿನ ಪ್ರದೇಶಗಳಲ್ಲಿ ಮೊಕ್ಕಂ ಹೂಡಿದ್ದವು. ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ಷ್ಮ ಪ್ರದೇಶಗಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

5ಕೆಆರ್ ಎಂಎನ್ 3,4.ಜೆಪಿಜಿ

3.ರಾಮನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸಿದರು.

4.ಮೆರವಣಿಗೆಯಲ್ಲಿ ಗಮನ ಸೆಳೆದ ಪವಿತ್ರ ಧಾರ್ಮಿಕ ಸ್ಥಳಗಳನ್ನು ಬಿಂಬಿಸುವ ರೂಪಕಗಳು.