ಸಾರಾಂಶ
ಯಲ್ಲಾಪುರ: ನಮ್ಮಲ್ಲಿ ಭಕ್ತಿಯ ಜಾಗೃತಿಯಾದರೆ ಮನಸ್ಸು ಶುದ್ಧವಾಗುತ್ತದೆ. ಮನಸ್ಸಿನ ಶುದ್ಧಿಗಾಗಿ ದೇವಸ್ಥಾನಗಳ ಅಗತ್ಯವಿದೆ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ತಾಲೂಕಿನ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಮಹೋತ್ಸವದಲ್ಲಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ವಿಚಾರ ಶುದ್ಧಿಯ ಕೊರತೆಯಿಂದ ನಮ್ಮ ಆಚಾರ ಅಶುದ್ಧಿಯಾಗಿದೆ. ಇದರ ಪರಿಣಾಮದಿಂದ ಪ್ರಚಾರದಲ್ಲಿ ಅಶುದ್ಧಿಯಾಗುತ್ತಿದೆ. ಆಚಾರ, ವಿಚಾರ ಹಾಗೂ ಪ್ರಚಾರ ಶುದ್ಧಿ ಆಗಲು ಮೊದಲ ಹಂತ ದೇವಸ್ಥಾನದಲ್ಲಿ ಆರಂಭವಾಗಬೇಕು ಎಂದರು.
ಅರ್ಚಕನ ತಪೋಯೋಗದಿಂದ ದೇವಸ್ಥಾನ ಬೆಳೆಯಬೇಕು. ದೇವಸ್ಥಾನ ಭಕ್ತಿಯ ಕೇಂದ್ರವಾಗಬೇಕು. ಸಂಪಾದನೆ ಅಲ್ಲಿನ ಮೂಲ ಉದ್ದೇಶವಾಗಬಾರದು ಎಂದ ಶ್ರೀಗಳು, ಹಿಂದೂ ಸಮಾಜ ಹಿಂದುಳಿಯಲು ಸೂಕ್ತ ವಯಸ್ಸಿನಲ್ಲಿ ವಿವಾಹ ಆಗದೇ ಇರುವುದೇ ಮುಖ್ಯ ಕಾರಣ. ಸರಿಯಾದ ವಯಸ್ಸಿನಲ್ಲಿ ಮಕ್ಕಳು ವಿವಾಹವಾಗುವುಕ್ಕೆ ಪಾಲಕರು ಮಾರ್ಗದರ್ಶನ ನೀಡಬೇಕು ಎಂದರು.ಶಿರಳಗಿಯ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಮಾತನಾಡಿ, ಮಾನಸಿಕ ಕಾಯಿಲೆಗಳಿಗೆ ದೇವಸ್ಥಾನವೇ ಆಸ್ಪತ್ರೆ. ಮನಸ್ಸಿನ ಭಾರವನ್ನೆಲ್ಲ ದೇವರ ಪಾದದಲ್ಲಿ ಹಾಕಿ, ಚಿಂತೆ ಕಳೆದುಕೊಂಡು ಸಂತಸದ ಬದುಕು ಸಾಗಿಸುವ ವಿಶೇಷತೆ ಸನಾತನ ಧರ್ಮದಲ್ಲಿ ಮಾತ್ರ ಇದೆ. ನಮ್ಮ ಮನೆಯಲ್ಲಿ ದೇವತಾರಾಧನೆಗಳು, ಧಾರ್ಮಿಕ ಆಚರಣೆಗಳು ನಿರಂತರವಾಗಿ ನಡೆಯುತ್ತಿದ್ದರೆ ಯಾವ ದುಷ್ಟ ಶಕ್ತಿಗಳೂ ಪ್ರವೇಶಿಸಲು ಸಾಧ್ಯವಿಲ್ಲ. ಸಂತ, ಮಂತ್ರ, ಗ್ರಂಥ, ಪಂಥ, ಕ್ಷೇತ್ರಗಳು ನಮ್ಮ ಬದುಕನ್ನು ಗೆಲ್ಲಿಸಲು ಸಾಧ್ಯ ಎಂದರು.
ಸ್ವರ್ಣವಲ್ಲೀ ಶ್ರೀಗಳಂ ಕೃಪೆಯಿಂದ ಈ ಭಾಗದ ಭಕ್ತರಲ್ಲೂ ಸದ್ಗುಣವೇ ತುಂಬಿದೆ. ಅಂತಹ ಸದ್ಗುರುಗಳ ಮಾರ್ಗದರ್ಶನದಲ್ಲಿ ಸಾಗಿದರೆ ಬದುಕು ಸಾರ್ಥಕವಾಗುತ್ತದೆ ಎಂದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಘಂಟೆ ಗಣಪತಿ ದೇವಸ್ಥಾನ ಬೇಡ್ತಿ ಜಲವಿದ್ಯುತ್ ಯೋಜನೆಯ ವಿರುದ್ಧ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದ ಹೋರಾಟದ ಕೇಂದ್ರವಾಗಿ, ಹೋರಾಟ ಯಶಸ್ವಿಯಾದ ಹಿನ್ನೆಲೆಯನ್ನು ಸ್ಮರಿಸಿದರು. ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗದೇ, ನಮ್ಮ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಹೊಣೆಯನ್ನು ಅರಿತು ನಡೆಯಬೇಕು ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಿರಂತರವಾಗಿ ಧಾರ್ಮಿಕ ಕಾರ‍್ಯಕ್ರಮಗಳು ನಡೆಯುತ್ತಿವೆ. ಧಾರ್ಮಿಕ ಜಾಗೃತಿಯನ್ನು ಎಲ್ಲರಲ್ಲೂ ಮೂಡಿಸುವಲ್ಲಿ ಶ್ರೀಗಳು ಶ್ರಮಿಸುತ್ತಿರುವುದು ನಮ್ಮ ಭಾಗ್ಯ ಎಂದರು.ದೇವಸ್ಥಾನದ ನಿರ್ಮಾಣ ಕಾರ‍್ಯದಲ್ಲಿ ಶ್ರಮಿಸಿದ ವಿಶ್ವನಾಥ ಭಟ್ಟ ಎಂಕೆಬಿ, ಗೋಪಾಲ ಆಚರ‍್ಯ ಮಣಿಪಾಲ, ಉದಯ ಪೂಜಾರಿ ಮಣಿಪಾಲ, ಅಣ್ಣಪ್ಪ ಮರ‍್ಡೇಶ್ವರ, ಮಹಾವೀರ ಕುಂದೂರು, ಚಂದ್ರಕಾಂತ ಕೊಂತ, ಸಂಜಯ ದೇಶಪಾಂಡೆ, ವಿ.ಜಿ.ಹೆಗಡೆ, ಎಸ್.ವಿ.ಭಟ್ಟ, ನರಸಿಂಹ ಗಾಂವ್ಕರ ಅವರನ್ನು ಆಡಳಿತ ಮಂಡಳಿಯಿಂದ ಗೌರವಿಸಲಾಯಿತು.
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ವಿ.ಎಸ್. ಪಾಟೀಲ, ಗೋವಾದ ಮಾಜಿ ಶಾಸಕ ವಿಜಯ ಪೈ, ರ‍್ತಕ ಎಂ.ಎನ್. ಹೆಗಡೆ ಸಾಗರ, ಹಿರಿಯರಾದ ಗಣಪತಿ ಭಟ್ಟ ಗೇರಗದ್ದೆ ಇತರರಿದ್ದರು. ಶಶಿಕಾಂತ ಭಟ್ಟ ಶಂಭುಮನೆ ವೇದಘೋಷಗೈದರು.ಅನ್ವಿತಾ ಭಟ್ಟ ಶಿರವಳ್ಳಿ ಪ್ರಾರ್ಥಿಸಿಸಿದರು. ಸ್ವಾಗತ ಸಮಿತಿಯ ಕೋಶಾಧ್ಯಕ್ಷ ಎಲ್.ಪಿ. ಭಟ್ಟ ಗುಂಡ್ಕಲ್ ಸ್ವಾಗತಿಸಿದರು. ದೇವಸ್ಥಾನದ ಸಮಿತಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್ ಮಹಾಬಲೇಶ್ವರ ಭಟ್ಟ ಕಿರಕುಂಭತ್ತಿ ನರ‍್ವಹಿಸಿದರು.