ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಮ್ಮ ಭಾಷೆಗೆ ಪ್ರಾಮುಖ್ಯತೆ ನೀಡದಿದ್ದರೆ ಅದರ ರುಚಿ ಸವಿಯುವುದು ಅಸಾಧ್ಯ ಎಂದು ಮೈಸೂರು ಡಯೋಸಿಸನ್ ಎಜುಕೇಷನಲ್ ಸೊಸೈಟಿಯ ಖಜಾಂಚಿ ರೆ.ಫಾ.ನವೀನ್ ಕುಮಾರ್ ಹೇಳಿದರು.ರಮ್ಮನಹಳ್ಳಿಯ ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ 70ನೇ ಕನ್ನಡ ನುಡಿಹಬ್ಬ2025ರಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಹಣ್ಣು ರುಚಿಯಾಗಿದೆಯೇ ಇಲ್ಲವೇ ಎಂಬುದನ್ನು ತಿಂದು ಸವಿಯಬೇಕು. ಅದೇ ರೀತಿ ಭಾಷೆಯ ಸೊಗಡನ್ನು ಅನುಭವಿಸಿಯೇ ನೋಡಬೇಕು. ವಿದೇಶಗಳಲ್ಲಿರುವ ಕನ್ನಡಿಗರು ಮತ್ತೊಬ್ಬ ಕನ್ನಡಿಗ ಸಿಕ್ಕರೆ ಎಷ್ಟು ಖುಷಿ ಪಡುತ್ತಾರೆ ಎಂಬುದನ್ನು ಗಮನಿಸಬೇಕು ಎಂದರು.
ಕನ್ನಡವನ್ನು ಅಳಿವಿನ ಅಂಚಿಗೆ ಹೋಗಲು ಬಿಡಬಾರದು. ಅದನ್ನು ಒಕ್ಕೊರಲಿನಿಂದ ಉಳಿಸುವುದು ಕರ್ನಾಟದಲ್ಲಿ ವಾಸಿಸುವ ಎಲ್ಲರ ಜವಾಬ್ದಾರಿಯಾಗಿದೆ ಎಂದ ಅವರು, ಯಾವುದೇ ಭಾಷೆ ಕಲಿಯಲು ನಿರ್ಬಂಧ ಇರಬಾರದು. ಹೆಚ್ಚೆಚ್ಚು ಭಾಷೆಗಳನ್ನು ಕಲಿತರೆ ಹೆಚ್ಚು ಅನುಕೂಲವಾಗುತ್ತದೆ ಎಂದರು.ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ಎಂಡಿಇಎಸ್ ತರಬೇತಿ ಮತ್ತು ಅಭಿವೃದ್ಧಿ ವಿಭಾಗದ ಸಿಇಒ ಸೆಬಿ ಮಾವೇಲಿ ಇದ್ದರು.
ಮುಖ್ಯ ಅತಿಥಿಯಾಗಿದ್ದ ಖ್ಯಾತ ಜಾನಪದ ಕಲಾವಿದ ಅಮ್ಮ ರಾಮಚಂದ್ರ ಅವರು ‘ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ’, ‘ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು’. ‘ಒಳಿತು ಮಾಡು ಮನುಷ’, ‘ಚೆಲ್ಲಿದರೂ ಮಲ್ಲಿಗೆಯಾ’, ‘ದೂರಿ ದೂರಿ’, ‘ಉತ್ತನಹಳ್ಳಿ ಮಾರಮ್ಮ’, ‘ಕನ್ನಡದ ಮಾತು ಚೆಂದ’ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.ಕಾಲೇಜಿನ ಪ್ರಾಂಶುಪಾಲೆ ಎನ್. ಪೂರ್ಣಿಮಾ ಸ್ವಾಗತಿಸಿದರು. ವಾಣಿಜ್ಯ ವಿಭಾಗ ಮುಖ್ಯಸ್ಥೆ ಪುಷ್ಪಾ ಡೈಮ್ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಎ.ಎಸ್. ಮಹೇಶ್ ಆಶಯ ಭಾಷಣ ಮಾಡಿದರು, ಶ್ರೀಮತಿ ಪೂಜಾ, ಸಹಾಯಕ ಪ್ರಾಧ್ಯಾಪಕರು, ವಾಣಿಜ್ಯ ವಿಭಾಗ ಇವರು ಬಹುಮಾನ ಪಡೆದವರ ಪಟ್ಟಿಯನ್ನು ಓದಿದರು. ಇದೇ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಮೈತ್ರಿ ಜೋಸೆಫ್ ಹಾಗೂ ನಿಸರ್ಗ ಅತಿಥಿಗಳನ್ನು ಪರಿಚಯಿಸಿದರು.
ಬಹುಮಾನ ವಿತರಣೆ:ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಭಾಷಾ ಕಲಿಕೆ ಅಗತ್ಯವೇ’ ಈ ವಿಚಾರ ಕುರಿತು ಪ್ರಬಂಧ ಸ್ಪರ್ಧೆಯನ್ನು ಮತ್ತು ಅಧ್ಯಾಪಕರಿಗೆ ರಸಪ್ರಶ್ನಾ ಸ್ಪರ್ಧೆಯನ್ನು ನಡೆಸಲಾಗಿತ್ತು. ಬಹುಮಾನ ವಿಜೇತ ವಿದ್ಯಾರ್ಥಿಗಳಾದ ಪ್ರಥಮ - ಮೈತ್ರಿ ಜೋಸೆಫ್, ದ್ವಿತೀಯ - ಕಾಂಚನಾ, ವರ್ಷಾ- ತೃತೀಯ, ಸಮಾಧಾನಕರ ಸ್ಥಾನ - ಅಮೃತ ನಾಯಕ, ಬಹುಮಾನ ವಿಜೇತ ಅಧ್ಯಾಪಕರಾದ ಪ್ರತಾಪ ನಾಯಕ- ಪ್ರಥಮ, ಎಸ್. ಪೂರ್ಣಿಮಾ- ದ್ವಿತೀಯ, ಯಶಸ್ವಿನಿ- ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಗಣ್ಯರು ಬಹುಮಾನ ನೀಡಿದರು. ಇದೇ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಪ್ರಥಮ ವಿಷಯವಾಗಿ ಆಯ್ಕೆ ಮಾಡಿಕೊಂಡು ಕಲಿತು, ನಾಲ್ಕು ಚತುರ್ಮಾಸಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಾದ ಕಾಂಚನಾ, ಲಕ್ಷ್ಯ, ದಿವ್ಯಾ, ಜಸ್ನ ಫಾತಿಮಾ ಮತ್ತು ಅಸ್ಫಿಯ ತನ್ವಿರ್ ಅವರನ್ನು ಅಭಿನಂದಿಸಲಾಯಿತು. ಬಹುಮಾನ ವಿಜೇತರ ಪಟ್ಟಿಯನ್ನು ಸಹಾಯಕ ಪ್ರಾಧ್ಯಾಪಕಿ ಪೂಜಾ ಓದಿದರು.
ಯಕ್ಷಗಾನ- ಕಂಸಾಳೆ- ನೃತ್ಯ ಸಮ್ಮಿಲನ:ವಿದ್ಯಾರ್ಥಿಗಳು ಕಂಸಾಳೆ ನೃತ್ಯ, ಯಕ್ಷಗಾನ ಮತ್ತು ಕನ್ನಡ ಚಲನಚಿತ್ರ ಹಾಡುಗಳಿಗೆ ನೃತ್ಯ ಮಾಡಿ ನೆರೆದವರನ್ನು ರಂಜಿಸಿದರು. ಸ್ನೇಹ, ಲಕ್ಷ್ಯ- ಕಂಸಾಳೆ, ರಾಧಿಕಾ ಮತ್ತು ತಂಡ ಕನ್ನಡ ಚಿತ್ರಗಳಿಗೆ ನೃತ್ಯ, ವಾಣಿ ಕ್ರಿಸ್ಟೋಫರ್ ತಂಡ ಕಂಸಾಳೆ ಪ್ರದರ್ಶಿಸಿ, ಚಪ್ಪಾಳೆ ಗಿಟ್ಟಿಸಿಕೊಂಡರು. ಮತ್ತೊಂದು ತಂಡ ಎಕ್ಕ ಸಕ್ಕ, ಎಕ್ಕಸಕ್ಕ ಹಾಡಿಗೆ ಮಾಡಿದ ನೃತ್ಯ ಸಭಿಕರನ್ನು ರಂಜಿಸಿತು.
;Resize=(128,128))
;Resize=(128,128))