ಸಾರಾಂಶ
ಆನಂದ ಎಂ.ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಹಾಗೂ ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುತ್ತಿರುವ ವಿಷಾನಿಲ ದುರ್ನಾತದ ಪರಿಣಾಮ ಇಲ್ಲಿನ ಜನರ ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮಗಳನ್ನು ಬೀರುತ್ತಿದೆ. ಇದರ ವಿರುದ್ಧ ಸಂತ್ರಸ್ತ ಜನರು ಸಂಘಟಿತ ಹೋರಾಟಕ್ಕಿಳಿಯಬೇಕು. ಹಾಗಾಗದಿದ್ದರೆ, ಇದರ ವಿರುದ್ಧ ನಾವೀಗ ಧ್ವನಿ ಎತ್ತದಿದ್ದರೆ ಮುಂದೊಂದು ದಿನ ನಮ್ಮ ಪೀಳಿಗೆಯೇ ಮೌನವಾಗುತ್ತದೆ ಎಂಬ ಆತಂಕ ಹೊರಹೊಮ್ಮುತ್ತಿದೆ.
ಕಲ್ಯಾಣ ಕರ್ನಾಟಕದ ಅತಿ ಹೆಚ್ಚು ರಾಜಕೀಯ ನಾಯಕರು ರಾಜಧಾನಿಯಲ್ಲಿರುವುದರಿಂದ, ಇಲ್ಲಿನ ಜನರು, ರೈತರು, ಪಶು, ಪಕ್ಷಿ ಮತ್ತು ಪ್ರಾಣಿಗಳು ಸತ್ತರೆಷ್ಟು, ಬದುಕಿದರೆಷ್ಟು ಎಂಬ ಧೋರಣೆ ಅವರಲ್ಲಿದೆ. ಇದನ್ನು ಇಲ್ಲಿನ ಸಂಘಟನೆಗಳು ರೈತರ ಬೆನ್ನಿಗೆ ನಿಂತು ಉಗ್ರ ಹೋರಾಟ ಮಾಡಬೇಕು ಎಂಬ ಕೂಗುಗಳು ಕೇಳಿ ಬರುತ್ತಿವೆ.ನಮ್ಮದು ಕೃಷಿ ಪ್ರಧಾನ ರಾಷ್ಟ್ರ, ರೈತ ದೇಶದ ಬೆನ್ನೆಲುಬು ಎಂದು ಉದ್ದದ ಭಾಷಣ ಮಾಡುವ ರಾಜಕೀಯ ನಾಯಕರು. ಈ ಭಾಗದಲ್ಲಿ ಕೃಷಿಯನ್ನು ಶಾಶ್ವತವಾಗಿ ನಶಸಿ, ರೈತರು ಸೇರಿದಂತೆ ಗ್ರಾಮೀಣ ಜನರ ಹೆಣಗಳ ಮೇಲೆ ಕೈಗಾರಿಕೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಭವಿಷ್ಯದಲ್ಲಿದು ಆಹಾರ ಕೊರತೆಯ ಹಾಹಾಕಾರದ ಮುನ್ಸೂಚನೆಯಾಗಿದೆ. ಸರ್ಕಾರಗಳು ಕೃಷಿಯನ್ನೂ ಒಂದು ಕೈಗಾರಿಕೆಯಾಗಿ ಪರಿಗಣಿಸಬೇಕು. ಕೈಗಾರಿಕೆಗಳಿಗೆ ನೀಡುವ ಸೌಲಭ್ಯಗಳನ್ನು ನಮ್ಮ ಗ್ರಾಮೀಣ ಭಾಗದ ರೈತರಿಗೆ ನೀಡಿದರೆ ಉದ್ಯೋಗದ ಜತೆಗೆ ಇಡೀ ಪ್ರಪಂಚಕ್ಕೆ ಆಹಾರ ಪದಾರ್ಥ ಪೂರೈಸಬಹುದು. ರಾಜ್ಯದ, ರಾಷ್ಟ್ರದ ಪರಿಸರವಾದಿಗಳು, ತಜ್ಞರು, ಮಠಾಧೀಶರು ಮತ್ತು ರೈತ ಮುಖಂಡರು ಸೇರಿಕೊಂಡು ನಮ್ಮ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಎರಡನೇ ಭೂಸ್ವಾಧಿನ ಅಧಿಸೂಚನೆಯನ್ನು ರದ್ದುಪಡಿಸಲು ಮತ್ತು ಜನ ಜೀವಕ್ಕೆ ಮಾರಕವಾಗಿರುವ ರಾಸಾಯನಿಕ ಕಂಪನಿಗಳನ್ನು ಇಲ್ಲಿಂದ ತೊಲಗಿಸಲು ಸರ್ಕಾರಕ್ಕೆ ದೊಡ್ಡ ದನಿಯಲ್ಲಿ ಆಗ್ರಹಿಸಲು ಸ್ಥಳೀಯರೊಂದಿಗೆ ಕೈಜೋಡಿಸಲು ಮನವಿ ಮಾಡಿಕೊಳ್ಳುತ್ತೇನೆ.
-ರಾಘವೇಂದ್ರ ಅಂಗಡಿ, ಸೈದಾಪುರ.
ನಮ್ಮಂತಹ ಮುಗ್ಧ ಜನರನ್ನು ನೋಡಿ ಇಲ್ಲಿ ಜೀವಕ್ಕೆ ಮಾರಕವಾಗಿರುವ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತದೆ. ಈ ಭಾಗದಲ್ಲಿ ಅಪಾಯಕಾರಿ ಕಂಪನಿ ಸ್ಥಾಪಿಸಿದರೂ ಜನರು ಏನು ಮಾಡುವುದಿಲ್ಲವೆಂದು, ಅದರಲ್ಲಿಯೂ, ಕಲ್ಯಾಣ ಕರ್ನಾಟಕದ ಅತಿ ಹೆಚ್ಚು ರಾಜಕೀಯ ನಾಯಕರು ರಾಜಧಾನಿಯಲ್ಲಿರುವದರಿಂದ, ಇಲ್ಲಿನ ಜನರು, ರೈತರು, ಪಶು, ಪಕ್ಷಿ ಮತ್ತು ಪ್ರಾಣಿಗಳು ಸತ್ತರೆಷ್ಟು, ಬದುಕಿದರೆಷ್ಟು? ಎಂಬ ಧೋರಣೆ ಅವರಲ್ಲಿದೆ. ಇದನ್ನು ಇಲ್ಲಿನ ಸಂಘಟನೆಗಳು ರೈತರ ಬೆನ್ನಿಗೆ ನಿಂತು ಉಗ್ರವಾದ ಹೋರಾಟಗಳನ್ನು ಮಾಡಲೇಬೇಕು, ಇದು ನಮ್ಮ ಅಸ್ತಿತ್ವದ ಪ್ರಶ್ನೆಯಾಗಿದೆ. ಇಂದು ನಾವು ದನಿ ಎತ್ತದಿದರೆ ಮುಂದೆ ನಮ್ಮ ಮಕ್ಕಳು ಸಂಪೂರ್ಣವಾಗಿ ದನಿ ಬಾರದ ಹಾಗೆ ಮಾಡಿಬಿಡುತ್ತಾರೆ. ನಮ್ಮ ಭೂಮಿ, ನಮ್ಮ ಹಕ್ಕಿಗಾಗಿ ಒಗ್ಗಟ್ಟಾಗಿ ಹೋರಾಟ ಮಾಡೋಣ.
-ವೆಂಕಣ್ಣಗೌಡ ಕ್ಯಾತ್ನಾಳ್, ಸೈದಾಪುರ.ಕೆಮಿಕಲ್ ಕಂಪನಿಗಳಲ್ಲಿ ನಡೆಯುವ ಅವಘಡಗಳು, ಕಾನೂನುಬಾಹಿರ ಕೃತ್ಯಗಳು, ಹೊರರಾಜ್ಯ-ದೇಶಗಳಿಂದ ವಲಸೆ ಬಂದ, ಕೆಲವು ಅನುಮಾನಾಸ್ಪದ ಕಾರ್ಮಿಕರ ವಿರುದ್ಧ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಕೈಗಾರಿಕಾ ಪ್ರದೇಶದಲ್ಲಿನ ಕನ್ನಡಪರ ಸಂಘಟನೆಯ ಮುಖಂಡ ವೀರೇಶ ಸಜ್ಜನ್ ನೀಡಿದ ಮನವಿ ಪತ್ರವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಮುಂದಿನ ದಿನಗಳಲ್ಲಿ ಇದು ಹೆಚ್ಚಿನ ಅನಾಹುತ ಘಟಿಸುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕು.
- ಭೀಮಣ್ಣ ವಡವಟ್, ಸೈದಾಪುರ, ಸಾಮಾಜಿಕ ಹೋರಾಟಗಾರ, ಪತ್ರಕರ್ತ.