ಸಾರಾಂಶ
ಬ್ಯಾಡಗಿ: ಹಿರಿಯರಿಗೆ ಗೌರವ ನೀಡದಿದ್ದಲ್ಲಿ ನಮ್ಮಬದುಕು ಮತ್ತು ಸಾಧನೆ ಶೂನ್ಯ. ಮನೆಯಲ್ಲಿನ ಹಿರಿಯರ ಮಾರ್ಗದರ್ಶನವಿಲ್ಲದೇ ನಮ್ಮ ಭವಿಷ್ಯ ಡೋಲಾಯಮಾನ ಎಂಬುದನ್ನು ನಾವೆಲ್ಲರೂ ಅರಿತು ನಡೆಯಬೇಕಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮೋಲ್ ಹಿರಿಕುಡೆ ಅಭಿಪ್ರಾಯಪಟ್ಟರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ, ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಮತ್ತು ಶಿಶು ಅಭಿವೃದ್ಧಿ ಯೋಜನೆ ಇಲಾಖೆ, ಕಂದಾಯ ಇಲಾಖೆ ಮತ್ತು ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರ ಸಬಲೀಕರಣ ಇಲಾಖೆ ಸಂಯಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿದ್ದ ‘ಹಿರಿಯ ನಾಗರಿಕರ’ ದಿನಾಚರಣೆ ಅಂಗವಾಗಿ ಇರುವ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬದುಕಿನಲ್ಲಿ ನಾವೆಲ್ಲರೂ ಏನನ್ನೇ ಸಾಧಿಸಿದರೂ ಕೂಡ ಹಿರಿಯರ ಆಶೀರ್ವಾದವೆಂದೇ ಭಾವಿಸಬೇಕು. ನಮ್ಮೆಲ್ಲರ ಬದುಕಿನ ಮೂಲ ಹಾಗೂ ಆಧಾರಸ್ತಂಭ ಮತ್ತು ಮಾರ್ಗದರ್ಶಕರಾಗಿರುವ ಹಿರಿಯ ನಾಗರಿಕರ ಬದುಕು ಹಸನಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಿರಿಯ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆ. ನ್ಯಾಯಾಲಯಗಳಲ್ಲಿಯೂ ಸಹ ಹಿರಿಯ ನಾಗರಿಕರ ಪ್ರಕರಣಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು ಅವುಗಳ ಸದ್ಭಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.ನ್ಯಾಯವಾದಿ ಸಿ.ಸಿ.ದಾನಣ್ಣನವರ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ.ಜಿ. ಹಿರೇಮರ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಆರ್. ಲಮಾಣಿ, ತಹಸೀಲ್ದಾರ್ ಫಿರೋಜ್‌ಷಾ ಸೋಮನಕಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೈ.ಟಿ. ಪೂಜಾರ, ನ್ಯಾಯವಾದಿ ಎನ್.ಎಸ್. ಬಟ್ಟಲಕಟ್ಟಿ, ಎಸ್.ಎಚ್. ಗುಂಡಪ್ಪನವರ, ಭಾರತಿ ಕುಲಕರ್ಣಿ, ಎಸ್.ಎಚ್. ಕಾಟೇನಹಳ್ಳಿ ಸೇರಿದಂತೆ ನ್ಯಾಯಾಂಗ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.